ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಗಳು ಹಾಗೂ ರಷ್ಯಾದಿಂದ ತೈಲ ಖರೀದಿಸಬಾರದು ಎಂಬ ಫರ್ವನಿನ ನಡುವೆಯೇ, ಭಾರತ-ರಷ್ಯಾ ಮಧ್ಯೆ ಮಹತ್ವದ ಒಪ್ಪಂದಗಳು ಏರ್ಪಟ್ಟಿರುವುದು ಜಾಗತಿಕ ದೇಶಗಳ ಗಮನ ಸೆಳೆದಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಎರಡು ದಿನಗಳ ಭಾರತ ಭೇಟಿಯು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ಭಾಷ್ಯ ಬರೆದಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಖುದ್ದು ವಿಮಾನ ನಿಲ್ದಾಣಕ್ಕೆ ತೆರಳಿ ಪುತಿನ್ರನ್ನು ಸ್ವಾಗತಿಸಿದ್ದು ಕೂಡ ಅವರಿಬ್ಬರ ವೈಯಕ್ತಿಕ ಆತ್ಮೀಯತೆಯ ಜತೆಗೆ, ಎರಡೂ ದೇಶಗಳ ಬಂಧದ ಗಾಢತನಕ್ಕೂ ಸಾಕ್ಷಿಯಾಯಿತು. ಮುಂದಿನ ಐದು ವರ್ಷದ ಅವಧಿಯಲ್ಲಿ ಆರ್ಥಿಕ ಹಾಗೂ ವ್ಯಾಪಾರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದೊಂದಿಗೆ ‘ಮುನ್ನೋಟ- 2030’ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ವ್ಲಾದಿಮಿರ್ ಶುಕ್ರವಾರ ಅಂಕಿತ ಹಾಕಿದರು. ಪ್ರಧಾನಿ ಮೋದಿ ಜತೆ ವಾರ್ಷಿಕ ಶೃಂಗಸಭೆಯಲ್ಲಿ ಭಾಗಿಯಾದ ಪುತಿನ್, ರಷ್ಯಾದಿಂದ ಭಾರತಕ್ಕೆ ತೈಲ ಪೂರೈಕೆಯನ್ನು ಮುಂದುವರಿಸುವ ಭರವಸೆ ನೀಡಿರುವುದು ಮತ್ತಷ್ಟು ಮಹತ್ವ ಪಡೆದಿದೆ.
ಭಾರತ ರಷ್ಯಾದಿಂದ ಇಂಧನ ಖರೀದಿಸುತ್ತಿದೆ. ರಷ್ಯಾ ಈ ಹಣವನ್ನು ಯೂಕ್ರೇನ್ ಯುದ್ಧದಲ್ಲಿ ಬಳಸುತ್ತಿದೆ ಎಂಬ ವಾದ ಮುಂದಿಟ್ಟು, ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತದ ಉತ್ಪನ್ನಗಳ ಶೇ.50ರ ವರೆಗೆ ಸುಂಕ ವಿಧಿಸಿದ್ದರು. ಅಮೆರಿಕದ ಎಚ್ಚರಿಕೆ ಹಿನ್ನೆಲೆಯಲ್ಲಿ ಈಚಿನ ದಿನಗಳಲ್ಲಿ ರಷ್ಯಾದಿಂದ ಭಾರತಕ್ಕೆ ತೈಲ ಆಮದು ಸ್ವಲ್ಪ ತಗ್ಗಿದ್ದರೂ, ಇದೀಗ ಪುತಿನ್ ಮಾತು ಬೇರೆಯದೇ ಚಿತ್ರಣ ನೀಡುವಂತಿದೆ. ಆರೋಗ್ಯ, ಚಲನಶೀಲತೆ ಮತ್ತು ಮಾನವ ಸಂಪನ್ಮೂಲ ವಿನಿಮಯ, ಪರಮಾಣು ಕಾರ್ಯಕ್ರಮ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿನ ಸಹಕಾರ ವಿಸ್ತರಿಸುವ ಒಡಂಬಡಿಕೆ ಕೂಡ ಆಗಿದೆ.
ತಮಿಳುನಾಡಿನ ಕೂಡಂಕುಳಂನಲ್ಲಿ ನಿರ್ವಣವಾಗುತ್ತಿರುವ ಭಾರತದ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ವಿಸ್ತರಣೆಗೆ ರಷ್ಯಾದ ಸಹಯೋಗ ಮುಂದುವರಿಯಲಿದೆ. ವ್ಯಾಪಾರ ವಹಿವಾಟನ್ನು 100 ಬಿಲಿಯನ್ ಡಾಲರ್ಗಳಿಗೇರಿಸುವ ಅಂಶ ಕೂಡ ಒಪ್ಪಂದದಲ್ಲಿದೆ. ಉಭಯ ದೇಶಗಳ ನಡುವಿನ ವ್ಯವಹಾರವನ್ನು ರಷ್ಯಾದ ರೂಬೆಲ್ ಕರೆನ್ಸಿ ಮೂಲಕ ನಡೆಸುವ ಕುರಿತು ಚರ್ಚೆಯಾಗಿದ್ದು, ಡಾರ್ ಪ್ರಾಬಲ್ಯ ತಗ್ಗಿಸುವ, ರೂಪಾಯಿಗೆ ಬಲ ತುಂಬುವ ಉದ್ದೇಶ ಕೂಡ ಇದರಲ್ಲಿದೆ.
ರಷ್ಯಾ-ಯೂಕ್ರೇನ್ ಯುದ್ಧ ಕುರಿತಂತೆ ಭಾರತ ಶಾಂತಿಯ ಪರವಾಗಿದೆ ಎಂಬ ನಿಲುವನ್ನು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಪುನರುಚ್ಚರಿಸಿದರು. ಜಾಗತಿಕ ಆರ್ಥಿಕ ಪ್ರಕ್ಷುಬ್ಧತೆ, ಪಾಶ್ಚಿಮಾತ್ಯ ಸುಂಕದ ಒತ್ತಡಗಳ ನಡುವೆ ವ್ಯಾಪಾರ ಸರಪಳಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಾಸ್ಕೋದ ಅಂತಾರಾಷ್ಟ್ರೀಯ ಉತ್ತರ ದಕ್ಷಿಣ ಸಾರಿಗೆ ಕಾರಿಡಾರ್(ಐಎನ್ಎಸ್ಟಿಸಿ) ವಿಸ್ತರಣೆ ಆಶಯವನ್ನು ಪುತಿನ್ ಇನ್ನೊಮ್ಮೆ ವ್ಯಕ್ತಪಡಿಸಿರುವುದು ವಿಶೇಷ.
ಈ ಜಾಲದ ವಿನ್ಯಾಸವು ರಷ್ಯಾ ಮತ್ತು ಬೆಲಾರಸ್ ಅನ್ನು ಹಿಂದು ಮಹಾಸಾಗರದೊಂದಿಗೆ ಸಂರ್ಪಸುವ ರೀತಿಯಲ್ಲಿದೆ. ಆರ್ಥಿಕತೆ, ವ್ಯಾಪಾರ, ಇಂಧನ, ರಕ್ಷಣೆ ಮುಂತಾದ ರಂಗಗಳಲ್ಲಿ ಹೊಸ ಮಜಲಿನ ಸೂಚನೆ ನೀಡಿರುವ ಭಾರತ -ರಷ್ಯಾ ನಂಟನ್ನು ಅಮೆರಿಕ ಹೇಗೆ ಸ್ವೀಕರಿಸುತ್ತದೆ, ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಕುತೂಹಲಕರ.