ದೇಶ

ಸಂಪಾದಕೀಯ: ವಂಚನೆ ತಡೆಗೆ ಸಹಕಾರಿ! ಆರ್​ಬಿಐಗೆ 6 ಗಂಟೆಗಳಲ್ಲಿ ವರದಿ ಮಾಡಬೇಕಾದ ನಿಯಮ

ಡಿಜಿಟಲ್​ ಪಾವತಿ ವ್ಯವಸ್ಥೆಯ ಬಳಕೆ ಹೆಚ್ಚುತ್ತಿರುವಂತೆಯೇ ಸೈಬರ್​ ದಾಳಿಗಳು ಮತ್ತು ಆನ್​ಲೈನ್​ ವಂಚನೆಗಳ ಅಪಾಯವೂ ಹೆಚ್ಚುತ್ತಿದೆ. ಗ್ರಾಹಕರ ಹಣ ಮತ್ತು ವೈಯಕ್ತಿಕ ಮಾಹಿತಿಗೆ ಕನ್ನ ಹಾಕುವ ದುಷ್ಕರ್ಮಿಗಳು ಹೊಸಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಇಂತಹ ಸವಾಲುಗಳನ್ನು ಎದುರಿಸಲು ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ಜಾರಿಗೊಳಿಸಿರುವ ಆರು ಗಂಟೆಗಳಲ್ಲಿ ವರದಿ ಮಾಡಬೇಕಾದ ನಿಯಮ ಮಹತ್ವದ ಹೆಜ್ಜೆಯಾಗಿದೆ. ಸೈಬರ್​ ದಾಳಿ, ತಾಂತ್ರಿಕ ಅಡಚಣೆ ಹಾಗೂ ಹಣ ಪಾವತಿ ವಿಳಂಬದಂತಹ ಅಸಹಜ ಘಟನೆಗಳು ಪತ್ತೆಯಾದ ಆರು ಗಂಟೆಗಳ ಒಳಗಾಗಿ ವರದಿ ಸಲ್ಲಿಸುವಂತೆ ಬ್ಯಾಂಕೇತರ ಪಾವತಿ ವ್ಯವಸ್ಥೆ ನಿರ್ವಾಹಕರಿಗೆ (ಪಿಎಸ್​ಒ) ನಿರ್ದೇಶನ ನೀಡಲಾಗಿದೆ.

ಈ ನಿಯಮದ ಪ್ರಕಾರ, ಬ್ಯಾಂಕೇತರ ಪಾವತಿ ಸಂಸ್ಥೆಗಳು ನಿಗದಿತ ನಮೂನೆಯಲ್ಲಿ ಆರ್​ಬಿಐಗೆ ಮಾಹಿತಿ ನೀಡಬೇಕು. ಸೈಬರ್​ ಭದ್ರತಾ ಲೋಪ ಅಥವಾ ವಂಚನೆ ಪತ್ತೆಯಾದ ಆರು ಗಂಟೆಗಳ ಒಳಗಾಗಿ ಭಾರತೀಯ ಕಂಪ್ಯೂಟರ್​ ತುರ್ತು ಪ್ರತಿಕ್ರಿಯೆ ತಂಡಕ್ಕೂ (ಸಿಇಆರ್​ಟಿ-ಇನ್​) ವರದಿ ಸಲ್ಲಿಸಬೇಕು. ಇದರಿಂದ ನಿಯಂತ್ರಕ ಸಂಸ್ಥೆಗಳಿಗೆ ಸಮಸ್ಯೆಯ ಗಂಭೀರತೆಯನ್ನು ತಕ್ಷಣ ಅರಿತುಕೊಂಡು ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ವಂಚನೆಯ ಸ್ವರೂಪ, ಅದರ ಪರಿಣಾಮ ಮತ್ತು ಸಂಭವನೀಯ ಅಪಾಯಗಳ ಬಗ್ಗೆ ಶೀಘ್ರ ಮಾಹಿತಿ ದೊರೆತರೆ ಇತರ ಪಾವತಿ ವ್ಯವಸ್ಥೆಗಳಿಗೂ ಎಚ್ಚರಿಕೆ ನೀಡಬಹುದು. ಹೀಗಾಗಿ ಈ ನಿಯಮವನ್ನು ಕೇವಲ ವರದಿ ಸಲ್ಲಿಕೆಯ ಪ್ರಕ್ರಿಯೆಯಾಗಿ ನೋಡದೆ, ಡಿಜಿಟಲ್​ ಪಾವತಿ ವ್ಯವಸ್ಥೆಯ ಸುರಕ್ಷತೆ ಹೆಚ್ಚಿಸುವ ಕ್ರಮವಾಗಿ ಪರಿಗಣಿಸಬೇಕು.

ಇತ್ತೀಚಿನ ವರ್ಷಗಳಲ್ಲಿ ಯುಪಿಐ, ಮೊಬೈಲ್​ ಬ್ಯಾಂಕಿಂಗ್​, ಡಿಜಿಟಲ್​ ವ್ಯಾಲೆಟ್​ ಮತ್ತು ಇತರ ಆನ್​ಲೈನ್​ ಪಾವತಿ ವಿಧಾನಗಳು ಜನರ ದೈನಂದಿನ ಬದುಕಿನ ಭಾಗವಾಗಿವೆ. ಈ ವ್ಯವಸ್ಥೆಯ ವೇಗ ಮತ್ತು ಅನುಕೂಲತೆಯ ಜತೆಗೆ ಸುರತೆಯ ಖಾತ್ರಿಯೂ ಇರಬೇಕು. ಪಾವತಿ ಸಂಸ್ಥೆಯಲ್ಲಿನ ಭದ್ರತಾ ಲೋಪವು ಸಾವಿರಾರು ಗ್ರಾಹಕರಿಗೆ ನಷ್ಟ ಉಂಟುಮಾಡುವ ಸಾಧ್ಯತೆಯಿದೆ. ಹೀಗಾಗಿ ಇಂತಹ ಘಟನೆಗಳನ್ನು ತಕ್ಷಣ ವರದಿ ಮಾಡುವ ವ್ಯವಸ್ಥೆ ಅತ್ಯಗತ್ಯ.

ಆದರೆ ಆರು ಗಂಟೆಗಳೊಳಗೆ ವರದಿ ಸಲ್ಲಿಸುವ ನಿಯಮ ಜಾರಿಗೊಳಿಸಿದ ಮಾತ್ರಕ್ಕೆ ವಂಚನೆಗಳು ಸಂಪೂರ್ಣವಾಗಿ ನಿಲ್ಲುವುದಿಲ್ಲ. ಪಾವತಿ ಸಂಸ್ಥೆಗಳು ತಮ್ಮ ತಂತ್ರಾಂಶ ಮತ್ತು ಸರ್ವರ್​ಗಳ ಭದ್ರತೆಯನ್ನು ನಿರಂತರವಾಗಿ ಪರಿಶೀಲಿಸಬೇಕು. ಅನುಮಾನಾಸ್ಪದ ವಹಿವಾಟುಗಳನ್ನು ತಕ್ಷಣ ಗುರುತಿಸುವ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಗ್ರಾಹಕರ ಮಾಹಿತಿಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವರದಿ ಸಲ್ಲಿಕೆಯಲ್ಲಿ ವಿಳಂಬ ಅಥವಾ ನಿರ್ಲಕ್ಷ್ಯ ತೋರಿಸುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.

ಇದರ ಜತೆಗೆ ಗ್ರಾಹಕರಲ್ಲೂ ಡಿಜಿಟಲ್​ ಸುರತೆಯ ಅರಿವು ಹೆಚ್ಚಬೇಕು. ಅಪರಿಚಿತ ಲಿಂಕ್​ಗಳನ್ನು ತೆರೆಯದಿರುವುದು, ಒಟಿಪಿ-ಪಿನ್​ ಹಂಚಿಕೊಳ್ಳದಿರುವುದು, ಅನುಮಾನಾಸ್ಪದ ಕರೆಗಳಿಗೆ ಸ್ಪಂದಿಸದಿರುವುದು ಮುಂತಾದ ಮುನ್ನೆಚ್ಚರಿಕೆಗಳು ಅಗತ್ಯ. ಡಿಜಿಟಲ್​ ಪಾವತಿ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವೇ ಅದರ ಬೆಳವಣಿಗೆಗೆ ಆಧಾರ. ಆ ವಿಶ್ವಾಸ ಉಳಿಯಬೇಕಾದರೆ ಸುರತೆ, ತ್ವರಿತ ಪ್ರತಿಕ್ರಿಯೆ ಮತ್ತು ಹೊಣೆಗಾರಿಕೆ ಮೂರೂ ಮುಖ್ಯ. ಆರ್​ಬಿಐನ ಹೊಸ ನಿಯಮ ಪರಿಣಾಮಕಾರಿಯಾಗಿ ಜಾರಿಯಾದರೆ ವಂಚನೆಗಳ ನಿಯಂತ್ರಣದ ಜತೆಗೆ ಡಿಜಿಟಲ್​ ವಹಿವಾಟು ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೂ ಹೆಚ್ಚಿಸಬಹುದು.