WEB
ದೇಶ

ಸಂಪಾದಕೀಯ: ಕಳವಳಕಾರಿ ವಿದ್ಯಮಾನ

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಗ್ರಾಹಕರ ‘ವೈಯಕ್ತಿಕ ಗುರುತಿಸಬಹುದಾದ ಮಾಹಿತಿ’ (ಪಿಐಐ) ಡಾರ್ಕ್ ವೆಬ್​ನಲ್ಲಿ ಸೋರಿಕೆಯಾಗಿರುವುದು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಸೈಬರ್ ಭದ್ರತಾ ಲೋಪಗಳತ್ತ ಬೊಟ್ಟು ಮಾಡಿದೆ.

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಗ್ರಾಹಕರ ‘ವೈಯಕ್ತಿಕ ಗುರುತಿಸಬಹುದಾದ ಮಾಹಿತಿ’ (ಪಿಐಐ) ಡಾರ್ಕ್ ವೆಬ್​ನಲ್ಲಿ ಸೋರಿಕೆಯಾಗಿರುವುದು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಸೈಬರ್ ಭದ್ರತಾ ಲೋಪಗಳತ್ತ ಬೊಟ್ಟು ಮಾಡಿದೆ. ಹಣಕಾಸು ವಲಯವು ಸಂಪೂರ್ಣವಾಗಿ ಡಿಜಿಟಲೀಕರಣಗೊಳ್ಳುತ್ತಿರುವ ಇಂದಿನ ಯುಗದಲ್ಲಿ ಇಂತಹ ಘಟನೆಗಳು ಕೇವಲ ಒಂದು ಬ್ಯಾಂಕಿನ ಸುರಕ್ಷತೆಗೆ ಸೀಮಿತವಾಗಿರದೆ, ಇಡೀ ಆರ್ಥಿಕ ಪರಿಸರ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಕದಡುತ್ತವೆ.

ಬ್ಯಾಂಕಿಂಗ್ ವ್ಯವಸ್ಥೆಯು ಸಾಂಪ್ರದಾಯಿಕ ಶಾಖೆಗಳಿಂದ ಮೊಬೈಲ್ ಬ್ಯಾಂಕಿಂಗ್, ಯುಪಿಐ ಮತ್ತು ಕ್ಲೌಡ್ ತಂತ್ರಜ್ಞಾನಕ್ಕೆ ವೇಗವಾಗಿ ಬದಲಾಗಿದೆ. ಈ ತಾಂತ್ರಿಕ ಬೆಳವಣಿಗೆಯ ಜೊತೆಗೇ ಎಪಿಐ ಲೋಪಗಳು ಮತ್ತು ಥರ್ಡ್-ಪಾರ್ಟಿ ವೆಂಡರ್ ತಂತ್ರಜ್ಞಾನಗಳ ಮೂಲಕ ನಡೆಯುವ ಸೈಬರ್ ದಾಳಿಗಳು ಗಣನೀಯವಾಗಿ ಹೆಚ್ಚಿವೆ. ಗ್ರಾಹಕರ ಹೆಸರು, ಮೊಬೈಲ್ ಸಂಪರ್ಕ ಸಂಖ್ಯೆ, ಆಧಾರ್, ಪ್ಯಾನ್ ಹಾಗೂ ಖಾತೆಯ ವಿವರಗಳು ಡಾರ್ಕ್ ವೆಬ್​ನ್ನು ಸೇರಿದಾಗ ಅವುಗಳನ್ನು ಬಳಸಿ ಗುರುತು ಕಳವು, ಹಣ ಲಪಟಾಯಿಸುವಿಕೆ ಮತ್ತು ಅತ್ಯಾಧುನಿಕ ಸೈಬರ್ ವಂಚನೆಗಳನ್ನು ನಡೆಸಲಾಗುತ್ತದೆ.

ಸಾಂಪ್ರದಾಯಿಕ ಫೈರ್​ವಾಲ್ ಹಾಗೂ ಪಾಸ್​ವರ್ಡ್​ಗಳ ರಕ್ಷಣೆ ಇಂದಿನ ಸುಧಾರಿತ ಸೈಬರ್ ಬೆದರಿಕೆಗಳನ್ನು ತಡೆಯಲು ಅಸಮರ್ಥವಾಗಿವೆ. ಹೀಗಾಗಿ ಬ್ಯಾಂಕಿಂಗ್ ವಲಯವು ಸಮಗ್ರ ಹಾಗೂ ಆಧುನಿಕ ಸುರಕ್ಷತಾ ಚೌಕಟ್ಟನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ. ಸಂಸ್ಥೆಯ ಒಳಗಿರಲಿ ಅಥವಾ ಹೊರಗಿರಲಿ, ಯಾವುದೇ ಬಳಕೆದಾರ ಅಥವಾ ಸಾಧನವನ್ನು ಪೂರ್ವನಿಯೋಜಿತವಾಗಿ ನಂಬದೆ, ಪ್ರತಿಯೊಂದು ಹಂತದಲ್ಲೂ ನಿರಂತರ ದೃಢೀಕರಣ ಕಡ್ಡಾಯಗೊಳಿಸಬೇಕು. ಗ್ರಾಹಕರ ಸೂಕ್ಷ ್ಮ ದತ್ತಾಂಶಗಳು ಸಂಗ್ರಹದಲ್ಲಿರುವಾಗ ಮತ್ತು ವರ್ಗಾವಣೆಯಾಗುವಾಗ ಕಠಿಣ ಎಂಡ್-ಟು-ಎಂಡ್ ಎನ್ಕ್ರಿಪ್ಶನ್​ಗೆ ಒಳಪಡಬೇಕು. ಅಗತ್ಯ ಸ್ಥಳಗಳಲ್ಲಿ ಸೂಕ್ಷ ್ಮ ಸಂಖ್ಯೆಗಳ ಬದಲು ಟೋಕನ್​ಗಳನ್ನು ಬಳಸುವ ವ್ಯವಸ್ಥೆ ಜಾರಿಯಾಗಬೇಕು.

ಅನುಮಾನಾಸ್ಪದ ಚಟುವಟಿಕೆಗಳು, ಅಸಹಜ ದತ್ತಾಂಶ ಡೌನ್​ಲೋಡ್ ಅಥವಾ ಒಳನುಸುಳುವಿಕೆಗಳನ್ನು ತಕ್ಷಣ ಗುರುತಿಸಲು ಎಐ ಹಾಗೂ ಮಷಿನ್ ಲರ್ನಿಂಗ್ ಆಧಾರಿತ 24/7 ಭದ್ರತಾ ಕಾರ್ಯಾಚರಣಾ ಕೇಂದ್ರಗಳನ್ನು ಆರಂಭಿಸುವುದು ಇಂದಿನ ಅಗತ್ಯವಾಗಿ ಪರಿಣಮಿಸಿದೆ. ಅಲ್ಲದೆ, ಬ್ಯಾಂಕ್​ಗಳು ಬಳಸುವ ಸಾಫ್ಟ್​ವೇರ್ ವೆಂಡರ್​ಗಳು, ಪಾವತಿ ಗೇಟ್​ವೇಗಳು ಹಾಗೂ ಔಟ್​ಸೋರ್ಸ್ ಮಾಡಲಾದ ಐಟಿ ಸೇವೆಗಳ ಸೈಬರ್ ಭದ್ರತಾ ತಪಾಸಣೆ ಕಟ್ಟುನಿಟ್ಟಾಗಿ ನಡೆಸಿದರೆ, ಸಂಭಾವ್ಯ ಸೈಬರ್ ದಾಳಿಗಳನ್ನು ತಡೆಯಲು ಸಾಧ್ಯ. ಮುಖ್ಯವಾಗಿ, ಆರ್​ಬಿಐ ನಿಗದಿಪಡಿಸಿರುವ ಸೈಬರ್ ಭದ್ರತಾ ನೀತಿಗಳನ್ನು ರಾಜಿ ಮಾಡಿಕೊಳ್ಳದೆ ಜಾರಿಗೊಳಿಸಬೇಕು. ಅದೇ ರೀತಿ, ಗ್ರಾಹಕರಿಗೂ ಒಟಿಪಿ, ಲಿಂಕ್​ಗಳ ಅಪಾಯಗಳ ಬಗ್ಗೆ ಸ್ಥಳೀಯ ಭಾಷೆಗಳಲ್ಲಿ ನಿರಂತರ ಜಾಗೃತಿ ಮೂಡಿಸಬೇಕು.

ಡಿಜಿಟಲ್ ಭಾರತದ ಕನಸನ್ನು ನನಸು ಮಾಡಲು ಗ್ರಾಹಕರ ವಿಶ್ವಾಸವೇ ಅಡಿಪಾಯ. ಹಣಕಾಸು ಸಂಸ್ಥೆಗಳು ಸೈಬರ್ ಭದ್ರತೆಯನ್ನು ಕೇವಲ ವೆಚ್ಚವೆಂದು ಪರಿಗಣಿಸದೆ, ಮೂಲಸೌಕರ್ಯ ಹೂಡಿಕೆಯೆಂದು ಭಾವಿಸಿ ಭದ್ರತಾ ವ್ಯವಸ್ಥೆಯನ್ನು ಕಾಲಕಾಲಕ್ಕೆ ಮೇಲ್ದರ್ಜೆಗೇರಿಸಿದಾಗ ಮಾತ್ರ ಇಂತಹ ಸೈಬರ್ ಬೆದರಿಕೆಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲು ಸಾಧ್ಯ.