ಸಂಪಾದಕೀಯ: ಕಳವಳಕಾರಿ ವಿದ್ಯಮಾನ 
ದೇಶ

ಸಂಪಾದಕೀಯ: ಕಳವಳಕಾರಿ ವಿದ್ಯಮಾನ

ಸಂಪಾದಕೀಯ: ಈಚಿನ ದಿನಗಳಲ್ಲಿ ದೇಶದ ವಿವಿಧೆಡೆ ರೈಲುಗಳಲ್ಲಿ ಅಗ್ನಿ ದುರಂತಗಳು ಸಂಭವಿಸಿದ್ದು, ಇವು ಕೇವಲ ಆಕಸ್ಮಿಕವಾಗಿರದೆ ವ್ಯವಸ್ಥಿತ ವಿಧ್ವಂಸಕ ಕೃತ್ಯಗಳು ಎಂಬುದಾಗಿ ರೈಲ್ವೆ ಇಲಾಖೆ ಹೇಳಿದೆ. ಇದು, ಆತಂಕ ಮೂಡಿಸುವ ವಿಚಾರವಾಗಿದ್ದು, ಜನರಲ್ಲಿ ಸುರಕ್ಷತಾ ಭಾವನೆ ಮೂಡುವ ನಿಟ್ಟಿನಲ್ಲಿ ಉನ್ನತ ಮಟ್ಟದ ತನಿಖೆ ನಡೆದು, ಕ್ಷಿಪ್ರವಾಗಿ ಕ್ರಮವಾಗಬೇಕಿದೆ. ರೈಲ್ವೆ ರಕ್ಷಣಾ ಪಡೆ (ಆರ್​ಪಿಎಫ್) ಹಾಗೂ ಇತರ ಭದ್ರತಾ ಸಂಸ್ಥೆಗಳು ತನಿಖೆ ಕೈಗೆತ್ತಿಕೊಂಡಿವೆ. ಹೌರಾದಲ್ಲಿ ಮಿಥಿಲಾ ಎಕ್ಸ್​ಪ್ರೆಸ್ ರೈಲು ನಿಂತಿದ್ದಾಗ ಅಗ್ನಿ ದುರಂತ ಸಂಭವಿಸಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಲಿಲ್ಲ. ಈ ಬಗ್ಗೆ ತನಿಖೆ ನಡೆಸಿದಾಗ ಕೋಚ್ ಒಂದರಲ್ಲಿ ಪೆಟ್ರೋಲ್​ನಲ್ಲಿ ಅದ್ದಿದ ಬಟ್ಟೆ ಅರ್ಧ ಸುಟ್ಟಿದ್ದು ಪತ್ತೆಯಾಗಿತ್ತು. ಇದು ಮಾತ್ರವಲ್ಲ, ಅಮರಪುರದಲ್ಲಿ ರೈಲ್ವೆ ಬೆಡ್ಡಿಂಗ್ ಸಾಮಗ್ರಿಗಳಿಗೆ ಬೆಂಕಿ ಹಚ್ಚಿದ್ದು, ಕೋಟಾದಲ್ಲಿ ರಾಜಧಾನಿ ಎಕ್ಸ್​ಪ್ರೆಸ್ ರೈಲಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಸಸಾರಾಮ್‌ನಲ್ಲಿ ವ್ಯಕ್ತಿಯೊಬ್ಬ ರೈಲ್ವೆ ಕೋಚ್ ಒಳಗೆ ಉರಿಯುತ್ತಿದ್ದ ವಸ್ತುವನ್ನು ಎಸೆದಿದ್ದು- ಈ ಘಟನೆಗಳು ಸಹ ಉದ್ದೇಶಪೂರ್ವಕ ಎಂದು ರೈಲ್ವೆ ಇಲಾಖೆ ಪಟ್ಟಿಮಾಡಿದೆ.
ಪ್ರಯಾಣಿಕರಲ್ಲಿ ಭಯ ಮೂಡಿಸುವ ಮತ್ತು ಸುರಕ್ಷತೆಗೆ ಧಕ್ಕೆ ತರುವ ಉದ್ದೇಶವನ್ನು ಸಮಾಜವಿರೋಧಿ ಶಕ್ತಿಗಳು ಹೊಂದಿವೆ ಎಂದು ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನೇತೃತ್ವದಲ್ಲಿ ಗುರುವಾರ ನವದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಇಲಾಖೆಯ ಉನ್ನತಾಧಿಕಾರಿಗಳು ಭಾಗವಹಿಸಿದ ಈ ಸಭೆಯಲ್ಲಿ, ದೇಶಾದ್ಯಂತದ ಕ್ಷೇತ್ರ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಯಿತು. ಸುರಕ್ಷಿತ ಪ್ರಯಾಣ ಖಾತ್ರಿಪಡಿಸುವ ನಿಟ್ಟಿನಲ್ಲಿ ಗುಪ್ತಚರ ವಿಭಾಗವನ್ನು ಬಲಪಡಿಸುವ ಹಾಗೂ ತಂತ್ರಜ್ಞಾನವನ್ನು ಹೆಚ್ಚೆಚ್ಚು ಬಳಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರ ಜತೆಗೆ, ಸಾರ್ವಜನಿಕರು ರೈಲು ಪ್ರಯಾಣ ಸಮಯದಲ್ಲಿ ಹಾಗೂ ನಿಲ್ದಾಣದಲ್ಲಿ ಇರುವಾಗ ಎಚ್ಚರದಿಂದ ಇರುವಂತೆ ತಿಳಿಸಿದ್ದು, ಏನಾದರೂ ಸಂಶಯಾತ್ಮಕ ವಸ್ತು ಅಥವಾ ಚಟುವಟಿಕೆ ಕಂಡುಬಂದಲ್ಲಿ, ಸಹಾಯವಾಣಿ ಸಂಖ್ಯೆ ‘139’ಕ್ಕೆ ಮಾಹಿತಿ ನೀಡಲು ಮನವಿ ಮಾಡಿದೆ.
ತಂತ್ರಜ್ಞಾನ ಆಧಾರಿತ ಸುರಕ್ಷತಾ ವ್ಯವಸ್ಥೆಯ ಬಲವರ್ಧನೆ, ಸಿಸಿಟಿವಿ ಕವರೇಜ್ ವ್ಯಾಪ್ತಿಯನ್ನು ಹೆಚ್ಚಿಸುವುದು ಹಾಗೂ ರೈಲ್ವೆ ಮಂಡಳಿ ಪ್ರಧಾನ ಕಚೇರಿ ಮತ್ತು ಪ್ರಾದೇಶಿಕ ವಲಯಗಳ ನಡುವೆ ಕಾರ್ಯಾಚರಣಾ ಸಮನ್ವಯವನ್ನು ಹೆಚ್ಚಿಸುವುದು ಮುಂತಾದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಹಾಗೇ, ಆರ್​ಪಿಎಫ್ ಮತ್ತು ಸರ್ಕಾರಿ ರೈಲ್ವೆ ಪೊಲೀಸ್ ಮಧ್ಯೆ ಸಮನ್ವಯ ಸುಧಾರಿಸುವ ಬಗ್ಗೆಯೂ ಗಂಭೀರವಾಗಿ ಚಿಂತಿಸಲಾಗಿದೆ. ದೇಶದ ರೈಲು ಜಾಲ ಬಲು ವಿಸ್ತಾರವಾಗಿದ್ದು, ದೇಶಾದ್ಯಂತ ನಿತ್ಯ ಕೋಟ್ಯಂತರ ಪ್ರಯಾಣಿಕರು ರೈಲುಗಳಲ್ಲಿ ಸಂಚರಿಸುತ್ತಾರೆ. ಎಲ್ಲ ಕಡೆಗೂ ಕಣ್ಗಾವಲು ಇಡುವುದು ಇಲಾಖೆಗೂ ದೊಡ್ಡ ಸವಾಲೇ ಸರಿ. ರೈಲ್ವೆಯು ಈಗಾಗಲೇ ಹಲವು ತಂತ್ರಜ್ಞಾನಾಧಾರಿತ ಉಪಕ್ರಮಗಳನ್ನು ತೆಗೆದುಕೊಂಡಿದೆಯಾದರೂ, ಆಂತರಿಕ-ಬಾಹ್ಯ ಬೆದರಿಕೆಗಳಿಂದಾಗಿ ಹೊಸ ಹೊಸ ಸವಾಲುಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ತ್ವರಿತವಾಗಿ ಕಾರ್ಯೋನ್ಮುಖವಾಗಬೇಕಾದುದು ಅನಿವಾರ್ಯ. ಇಲಾಖೆಯ ಮನವಿಯಂತೆ, ಸಾರ್ವಜನಿಕರು ಸಹ ಎಚ್ಚರದಿಂದ ಇರುವ ಮೂಲಕ, ಸರ್ಕಾರದ ಜತೆ ಕೈಜೋಡಿಸಬೇಕಾದುದು ಕರ್ತವ್ಯ.