ದೇಶ

ಸಂಪಾದಕೀಯ: ಸ್ವಾಗತಾರ್ಹ ನಿರ್ಧಾರ

ರೈಲು ಪ್ರಯಾಣದ ವೇಳೆ ಹೆಚ್ಚುತ್ತಿರುವ ಶಬ್ದಮಾಲಿನ್ಯದಿಂದ ಇತರ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ವರ್ತನೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ. ರೈಲುಗಳಲ್ಲಿ ಪ್ರಯಾಣಿಸುವಾಗ ಕೆಲವರು ಮೊಬೈಲ್ ಸ್ಪೀಕರ್ ಆನ್ ಮಾಡಿ ಜೋರಾಗಿ ಹಾಡುಗಳನ್ನು ಹಾಕುವುದು, ಮನರಂಜನಾ ವಿಡಿಯೋಗಳನ್ನು ಜೋರಾದ ಸದ್ದಿನೊಂದಿಗೆ ನೋಡುವುದು, ಮೊಬೈಲ್​ನಲ್ಲಿ ಜೋರಾಗಿ ಮಾತನಾಡುವುದು ನಡೆದೇ ಇರುತ್ತದೆ.

ರೈಲು ಪ್ರಯಾಣದ ವೇಳೆ ಹೆಚ್ಚುತ್ತಿರುವ ಶಬ್ದಮಾಲಿನ್ಯದಿಂದ ಇತರ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ವರ್ತನೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ. ರೈಲುಗಳಲ್ಲಿ ಪ್ರಯಾಣಿಸುವಾಗ ಕೆಲವರು ಮೊಬೈಲ್ ಸ್ಪೀಕರ್ ಆನ್ ಮಾಡಿ ಜೋರಾಗಿ ಹಾಡುಗಳನ್ನು ಹಾಕುವುದು, ಮನರಂಜನಾ ವಿಡಿಯೋಗಳನ್ನು ಜೋರಾದ ಸದ್ದಿನೊಂದಿಗೆ ನೋಡುವುದು, ಮೊಬೈಲ್​ನಲ್ಲಿ ಜೋರಾಗಿ ಮಾತನಾಡುವುದು ನಡೆದೇ ಇರುತ್ತದೆ. ಇದು ಸಹಪ್ರಯಾಣಿಕರಿಗೆ ತೀವ್ರ ಕಿರಿಕಿರಿ ಉಂಟುಮಾಡುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಇಲಾಖೆ, ನಿಲ್ದಾಣದ ಆವರಣದಲ್ಲಿ ಅಥವಾ ರೈಲುಗಳಲ್ಲಿ ಹಾಡು ಅಥವಾ ವಿಡಿಯೋ ಪ್ಲೇ ಮಾಡಿದರೆ, ಜೋರಾಗಿ ಮಾತನಾಡಿ ಇತರರಿಗೆ ತೊಂದರೆ ಉಂಟುಮಾಡಿದರೆ 1000 ರೂ.ವರೆಗೆ ದಂಡ ಹಾಗೂ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲು ಸಂಬಂಧಿಸಿದ ಕಾನೂನಿನಲ್ಲಿ ಅವಕಾಶ ಕಲ್ಪಿಸಲು ಮುಂದಾಗಿದೆ. ಇದು ಅತ್ಯಂತ ಶ್ಲಾಘನೀಯ ಕ್ರಮ.

ರೈಲಿನಲ್ಲಿ ದೀರ್ಘ ಪ್ರಯಾಣ ಮಾಡುವ ಹಿರಿಯ ನಾಗರಿಕರು, ರೋಗಿಗಳು, ವಿದ್ಯಾರ್ಥಿಗಳು ಮುಂತಾದವರು ಸಾರ್ವಜನಿಕ ಸ್ಥಳದ ಶಿಸ್ತನ್ನು ಅಪೇಕ್ಷಿಸುತ್ತಾರೆ. ಆದರೆ ಕೆಲವರ ಬೇಜವಾಬ್ದಾರಿಯಿಂದ ಇಡೀ ರೈಲು ಬೋಗಿಯ ವಾತಾವರಣ ಹದಗೆಡುತ್ತದೆ. ಅನ್ಯರ ಸ್ವಾತಂತ್ರ್ಯಕ್ಕೆ ಅಥವಾ ನೆಮ್ಮದಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಸ್ವಯಂ ಶಿಸ್ತು ಇಲ್ಲದ ಕಡೆ ಕಾನೂನಿನ ಕಠಿಣ ಚಾಟಿ ಬೀಸುವುದು ಅನಿವಾರ್ಯವಾಗುತ್ತದೆ. ರೈಲ್ವೆ ಇಲಾಖೆಯ ಈ ಕಠಿಣ ನಿಲುವು ಸಾರ್ವಜನಿಕ ವಲಯದಲ್ಲಿ ಒಂದು ಸ್ಪಷ್ಟ ಹಾಗೂ ಸಕಾರಾತ್ಮಕ ಸಂದೇಶವನ್ನು ರವಾನಿಸಿದೆ.

ಈ ನಿಯಮವನ್ನು ರೈಲುಗಳಿಗೆ ಸೀಮಿತಗೊಳಿಸದೇ ಪ್ರತಿದಿನ ಸಾವಿರಾರು ಜನರು ಪ್ರಯಾಣಿಸುವ ಸರ್ಕಾರಿ ಹಾಗೂ ಖಾಸಗಿ ಬಸ್​ಗಳಿಗೂ ವಿಸ್ತರಿಸುವುದು ಸೂಕ್ತ. ಬಸ್​ಗಳಲ್ಲಿ ಮೊಬೈಲ್​ಅನ್ನು ಪೂರ್ಣ ಧ್ವನಿಯಲ್ಲಿ ಇಟ್ಟುಕೊಂಡು ರೀಲ್ಸ್ ನೋಡುವುದು ಅಥವಾ ಜೋರಾಗಿ ಮಾತನಾಡುವುದು ಸಾಮಾನ್ಯ ದೃಶ್ಯ. ಉದ್ಯಾನವನಗಳು, ಆಸ್ಪತ್ರೆಗಳ ಸುತ್ತಮುತ್ತಲಿನ ಶಾಂತ ವಲಯಗಳು, ಸರ್ಕಾರಿ ಕಚೇರಿಗಳ ಸಾರ್ವಜನಿಕ ಕಾಯುವಿಕೆ ಕೊಠಡಿಗಳು ಮತ್ತು ಸಾರ್ವಜನಿಕ ಗ್ರಂಥಾಲಯಗಳಂತಹ ಗಂಭೀರ ಹಾಗೂ ಅಧಿಕ ಜನಸಂದಣಿ ಇರುವ ಸ್ಥಳಗಳಲ್ಲೂ ಮೊಬೈಲ್ ಸ್ಪೀಕರ್ ಬಳಕೆಗೆ ತಡೆ ಒಡ್ಡಬೇಕಿದೆ. ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ನಡವಳಿಕೆಯ ಶಿಷ್ಟಾಚಾರ ಕಾಪಾಡುವುದು ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ನೈತಿಕ ಕರ್ತವ್ಯವೂ ಹೌದು. ರೈಲ್ವೆ ಇಲಾಖೆಯ ಮಾದರಿಯನ್ನು ರಾಜ್ಯ ಸಾರಿಗೆ ಸಂಸ್ಥೆಗಳು ಹಾಗೂ ಸ್ಥಳೀಯ ಆಡಳಿತಗಳು ಕೂಡ ಅನುಸರಿಸಬೇಕಿದೆ.