ಸಂಪಾದಕೀಯ: ಜನರ ವಿಶ್ವಾಸದ ಪ್ರತೀಕ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾಂತ್ರಿಕ ಒಕ್ಕೂಟದ (NDA) ಅಭೂತಪೂರ್ವ ಗೆಲುವು ಆ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಒಂದು ನಿರ್ಣಾಯಕ ಘಟ್ಟವಾಗಿದೆ. ಈ ಯಶಸ್ಸಿನ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಂಯೋಜಿತ ನಾಯಕತ್ವ ಇದೆ. ಅವರಿಬ್ಬರ ರಾಜಕಾರಣದ ಶೈಲಿ ಭಿನ್ನವಾದರೂ, ಚುನಾವಣಾ ದೃಷ್ಟಿಯಿಂದ ಅವರ ಸಹಯೋಗ ಎನ್ಡಿಎಗೆ ಪ್ರಯೋಜನಕಾರಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸ್ಥಿರತೆ, ಅಭಿವೃದ್ಧಿ ಮತ್ತು ನಿರಂತರತೆಗೆ ಬಿಹಾರದ ಜನತೆ ಮತ ನೀಡಿರುವುದು ಸ್ಪಷ್ಟವಾಗಿದೆ.
ಪ್ರಧಾನಿ ಮೋದಿ ಅವರ ದೇಶವ್ಯಾಪಿ ವರ್ಚಸ್ಸು ಕೂಡ ಇಲ್ಲಿ ಕೆಲಸ ಮಾಡಿದೆ. ಚುನಾವಣೆಗಳನ್ನು ಆಡಳಿತ ಮತ್ತು ರಾಷ್ಟ್ರೀಯ ಪ್ರಗತಿಯ ‘ಜನಮತಗಣನೆ’ಯಾಗಿ ಪರಿವರ್ತಿಸುವ ಮೋದಿ ಅವರ ಸಾಮರ್ಥ್ಯ ಅನನ್ಯ. ಅದು ಬಿಹಾರದಲ್ಲೂ ನಿರ್ಣಾಯಕ ಪಾತ್ರ ವಹಿಸಿದೆ. ದೇಶದ ಬೆಳವಣಿಗೆಯ ಪಥದಲ್ಲಿ ಬಿಹಾರದ ಕೊಡುಗೆಯನ್ನು ಹೆಚ್ಚಿಸುವ ಕುರಿತ ಮೋದಿ ಅವರ ದೂರದೃಷ್ಟಿಯನ್ನು ಬಿಹಾರದ ಜನರು ಗುರುತಿಸಿದ್ದಾರೆ. ಜನಕಲ್ಯಾಣ ಕಾರ್ಯಕ್ರಮಗಳು, ಮೂಲಸೌಕರ್ಯ ಅಭಿವೃದ್ಧಿ, ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆಯೂ ಅವರು ತಮ್ಮ ಪ್ರಚಾರ ಭಾಷಣದಲ್ಲಿ ಒತ್ತು ನೀಡಿದ್ದರು. ಸ್ಥಳೀಯ ಆಕಾಂಕ್ಷೆಗಳನ್ನು ರಾಷ್ಟ್ರೀಯ ಮಹತ್ವಾಕಾಂಕ್ಷೆಗಳೊಂದಿಗೆ ಸಂಯೋಜಿಸಿದ್ದು ವಿಶೇಷ.
ಸ್ಥಿರ ನಾಯಕತ್ವದ ಜತೆಗೆ ಉತ್ತಮ ಭವಿಷ್ಯದ ವಿಶ್ವಾಸ ಮೂಡಿಸಿದ್ದು ಯುವ ಮತದಾರರನ್ನು ಒಲಿಸಿಕೊಳ್ಳುವಲ್ಲಿ ಸಹಾಯ ಮಾಡಿದೆ. ಇದಕ್ಕೆ ಸಮಾನಾಂತರವಾಗಿ, ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ‘ಸುಶಾಸನ ಬಾಬು’ ಎಂದೇ ಪ್ರಸಿದ್ಧ. ಆ ರಾಜ್ಯಕ್ಕಿದ್ದ ‘ಜಂಗಲ್ರಾಜ್’ನ ಇಮೇಜ್ ಬದಲಿಸಿದ್ದಾರೆ. ಕಾನೂನು-ಸುವ್ಯವಸ್ಥೆ ಸುಧಾರಣೆ, ಮಹಿಳಾ ಸಬಲೀಕರಣ, ಗ್ರಾಮೀಣ ರಸ್ತೆಗಳು ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಅವರು ದೀರ್ಘ ಕಾಲ ನೀಡಿದ ಗಮನ ಈ ಚುನಾವಣೆಯಲ್ಲಿ ಅವರ ನೆರವಿಗೆ ಬಂದಿದೆ. ಇದರ ಜತೆಗೆ ನಿತೀಶ್ಕುಮಾರ್ ಅವರ ವ್ಯಕ್ತಿತ್ವವನ್ನೂ ಮತದಾರರು ಮೌಲ್ಯಯುತವೆಂದು ಪ್ರಮುಖವಾಗಿ ಗಣನೆಗೆ ತೆಗೆದುಕೊಂಡಂತಿದೆ.
ನಾಯಕರ ಜನಪ್ರಿಯತೆಯನ್ನು ವ್ಯರ್ಥವಾಗಲು ಬಿಡದೆ ತಳಮಟ್ಟದಲ್ಲಿ ಸಂಖ್ಯೆಗಳಾಗಿ ಪರಿವರ್ತಿಸುವಲ್ಲಿ ಎನ್ಡಿಎಯ ಪ್ರಚಾರ ತಂತ್ರ ನಿರ್ಣಾಯಕ ಪಾತ್ರ ವಹಿಸಿದೆ. ಮೋದಿ ಅವರ ಸಂಘಟನಾ ಶಕ್ತಿ ಮತ್ತು ನಿತೀಶ್ ಅವರ ತಳಮಟ್ಟದ ವಿಶ್ವಾಸಾರ್ಹತೆಯು ಮತಗಳಾಗಿ ಪರಿವರ್ತನೆಯಾಗಿವೆ. ಎನ್ಡಿಎಯ ಸ್ಥಿರತೆ, ಎರಡು ದಶಕಗಳ ಸುಪರಿಚಿತ ಆಡಳಿತಕ್ಕೆ ಮತದಾರರು ಮಣೆ ಹಾಕಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ವಿರೋಧ ಪಕ್ಷಗಳು ತಮ್ಮಲ್ಲಿ ಒಗ್ಗಟ್ಟಿದೆ ಎಂಬುದನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿವೆ.
ಅವುಗಳ ಆಂತರಿಕ ಭಿನ್ನಾಭಿಪ್ರಾಯ ಢಾಳಾಗಿ ಗೋಚರಿಸುವಂತಿತ್ತು. ಎನ್ಡಿಎ ಪಾಲಿಗೆ ಈ ಗೆಲುವು ಅಪಾರ ನಿರೀಕ್ಷೆಗಳನ್ನೂ ಹೊತ್ತು ತಂದಿದೆ. ಉದ್ಯೋಗ ಸೃಷ್ಟಿ, ಆರೋಗ್ಯಸೇವೆ, ಕೈಗಾರಿಕಾ ಬೆಳವಣಿಗೆಯ ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರ ಮಾಡಬೇಕಿರುವುದು ಇನ್ನೂ ಬೆಟ್ಟದಷ್ಟಿದೆ. ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಬಿಹಾರದ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಬೇಕೆಂಬ ಆಶಯವನ್ನು ಈ ಜನಾದೇಶದ ಮೂಲಕ ಮತದಾರರು ವ್ಯಕ್ತಪಡಿಸಿದ್ದಾರೆ. ಇದನ್ನು ಈಡೇರಿಸುವ ದಿಸೆಯಲ್ಲಿ ಎನ್ಡಿಎ ಹೆಜ್ಜೆ ಇಡಬೇಕಿದೆ.