WEB
ದೇಶ

ಸಂಪಾದಕೀಯ: ವಿವೇಚನೆಯ ನಡೆ ಅಗತ್ಯ

ನಮ್ಮ ಸಂವಿಧಾನವು ಪ್ರಜೆಗಳಿಗೆ ಕೆಲವು ಹಕ್ಕುಗಳನ್ನು ನೀಡಿದೆ. ಉದಾಹರಣೆಗೆ- ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ವಿುಕ ಸ್ವಾತಂತ್ರ್ಯ, ಪ್ರತಿಭಟಿಸುವ ಹಕ್ಕು ಮುಂತಾದವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಕೈಗೊಳ್ಳುವ ನೀತಿನಿರ್ಧಾರಗಳು ಸರಿಕಾಣದಿದ್ದರೆ ಶಾಂತಿಯುತ ಪ್ರತಿಭಟನೆಯ ಮೂಲಕ ತಮ್ಮ ಇಂಗಿತವನ್ನು ಆಳುಗರಿಗೆ ತಲುಪಿಸುವ ಅವಕಾಶ ಜನರು ಮತ್ತು ರಾಜಕೀಯ ಪಕ್ಷಗಳಿಗೆ ಇದೆ.

ನಮ್ಮ ಸಂವಿಧಾನವು ಪ್ರಜೆಗಳಿಗೆ ಕೆಲವು ಹಕ್ಕುಗಳನ್ನು ನೀಡಿದೆ. ಉದಾಹರಣೆಗೆ- ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ವಿುಕ ಸ್ವಾತಂತ್ರ್ಯ, ಪ್ರತಿಭಟಿಸುವ ಹಕ್ಕು ಮುಂತಾದವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಕೈಗೊಳ್ಳುವ ನೀತಿನಿರ್ಧಾರಗಳು ಸರಿಕಾಣದಿದ್ದರೆ ಶಾಂತಿಯುತ ಪ್ರತಿಭಟನೆಯ ಮೂಲಕ ತಮ್ಮ ಇಂಗಿತವನ್ನು ಆಳುಗರಿಗೆ ತಲುಪಿಸುವ ಅವಕಾಶ ಜನರು ಮತ್ತು ರಾಜಕೀಯ ಪಕ್ಷಗಳಿಗೆ ಇದೆ.

ಜನಾಭಿಪ್ರಾಯಕ್ಕೆ ಮಣಿದು ಸರ್ಕಾರಗಳು ತಮ್ಮ ನೀತಿಗಳನ್ನು ಬದಲಿಸಿಕೊಂಡ ಎಷ್ಟೋ ನಿದರ್ಶನಗಳೂ ಇವೆ. ಇಲ್ಲಿ ಪ್ರತಿಷ್ಠೆಗಿಂತ ಜನಹಿತ ಮತ್ತು ದೇಶಹಿತ ಮುಖ್ಯ. ಆದರೆ ಹಕ್ಕುಗಳ ಜತೆಗೆ ಕರ್ತವ್ಯವೂ ಸೇರಿಕೊಂಡಿರುತ್ತದೆ ಎಂಬುದನ್ನು ಮರೆಯಬಾರದು. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್) ವಿರೋಧಿಸಿ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್​ಕುಮಾರ್ ರಾಜೀನಾಮೆಗೆ ಆಗ್ರಹಿಸಿ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಹಾಗೂ ಕೆಲ ಸಂಘಟನೆಗಳು ಅನೇಕ ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವುದು ಗೊತ್ತೇ ಇದೆ. ಇದೀಗ ಈ ಕುರಿತಂತೆ ಸವೋಚ್ಚ ನ್ಯಾಯಾಲಯವು ನೀಡಿದ ಅಭಿಪ್ರಾಯವೊಂದು ಗಮನಸೆಳೆದಿದೆ.

ಪ್ರತಿಭಟನೆ ನಡೆಸುವ ಕುರಿತಾದ ಸಾಂವಿಧಾನಿಕ ಹಕ್ಕನ್ನು ಬೇರೆಯವರ ಜೀವನೋಪಾಯಕ್ಕೆ ತೊಂದರೆ ಆಗುವ ರೀತಿಯಲ್ಲಿ ಬಳಸುವುದು ಸರಿಯಲ್ಲ ಎಂದು ಕೋರ್ಟ್ ಹೇಳಿದೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಸರಣಿ ಪ್ರತಿಭಟನೆಗಳಿಂದ ಆಗುತ್ತಿರುವ ಆರ್ಥಿಕ ನಷ್ಟದ ಬಗ್ಗೆ ಉಲ್ಲೇಖಿಸಿ ದೆಹಲಿ ವ್ಯಾಪಾರಸ್ಥರ ಸಂಘದವರು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಹೀಗೆ ಹೇಳಿದ್ದು, ಸಂಬಂಧಿಸಿದವರು ಗಂಭೀರವಾಗಿ ಪರಿಗಣಿಸಬೇಕಿದೆ. ‘ಪತಿಭಟನೆಯ ಹಕ್ಕು ಮತ್ತು ವ್ಯಾಪಾರವಹಿವಾಟು ನಡೆಸುವ ಹಕ್ಕನ್ನು ಸಮತೋಲನಗೊಳಿಸುವ ಅಗತ್ಯವಿದೆ. ದಿನಗೂಲಿ ಕೆಲಸಗಾರರು, ತಳ್ಳುಗಾಡಿಯವರು ಮತ್ತು ಸಣ್ಣ ಅಂಗಡಿಕಾರರ ಜೀವನಾಧಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಪ್ರತಿಭಟನಾ ಸ್ಥಳವನ್ನು ಆಯ್ಕೆಮಾಡಿಕೊಳ್ಳಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಹೇಳಿರುವುದು ಗಮನಾರ್ಹ. ಹಾಗೇ, ಒಂದೇ ಗುಂಪು ಅನಿರ್ದಿಷ್ಟ ಕಾಲದವರೆಗೆ ಒಂದು ತಾಣವನ್ನು ಆಕ್ರಮಿಸಿಕೊಂಡಿರುವಂತಿಲ್ಲ ಎಂದೂ ನ್ಯಾಯಾಲಯ ಹೇಳಿದೆ. ಅಂದರೆ, ಬೇರೆಯವರಿಗೂ ಪ್ರತಿಭಟನೆ ನಡೆಸುವ ಅವಕಾಶ ಸಿಗಬೇಕು.

ದೆಹಲಿಯ ರಾಮಲೀಲಾ ಮೈದಾನದ ಆಸುಪಾಸಿನಲ್ಲಿ ವ್ಯಾಪಾರ ವಹಿವಾಟುಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಇಂಥ ಸ್ಥಳದಲ್ಲಿ ಬಹುಕಾಲ ಪ್ರತಿಭಟನೆಗಳು ನಡೆದಲ್ಲಿ, ವಿಶೇಷವಾಗಿ ಹಬ್ಬದ ಸಮಯದಲ್ಲಿ ವ್ಯಾಪಾರವ್ಯವಹಾರಕ್ಕೆ ತೊಂದರೆಯಾಗಿ ಅಪಾರ ಪ್ರಮಾಣದ ನಷ್ಟವುಂಟಾಗುತ್ತದೆ. ಹೀಗಾಗಿ ಹಬ್ಬದ ವೇಳೆ ಪ್ರತಿಭಟನೆಗಳಿಗೆ ಅವಕಾಶವೀಯಬಾರದು ಎಂದು ವ್ಯಾಪಾರಸ್ಥರ ಸಂಘಗಳು ಅರ್ಜಿಯಲ್ಲಿ ಕೋರಿವೆ. ಈ ಬಗ್ಗೆ ಸವೋಚ್ಚ ನ್ಯಾಯಾಲಯವು ಅಂತಿಮ ತೀರ್ಪನ್ನು ನೀಡಿಲ್ಲವಾದರೂ, ವಿಚಾರಣೆ ಸಮಯದಲ್ಲಿ ನ್ಯಾಯಪೀಠವು ಉಲ್ಲೇಖಿಸಿದ ಅಂಶಗಳು ಮಹತ್ವದ್ದು. ಹಾಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಸೀಮಿತವಾಗಿ ಈ ಸಂಗತಿಯನ್ನು ನೋಡದೆ, ರಾಜಕೀಯ ಪಕ್ಷಗಳು ಮತ್ತು ಸಂಘಸಂಸ್ಥೆಗಳು ಈ ಅಭಿಪ್ರಾಯದ ಹಿಂದಿರುವ ದನಿ ಮತ್ತು ಕಳಕಳಿಯನ್ನು ಅರ್ಥೈಸಿಕೊಂಡು ಅದಕ್ಕೆ ತಕ್ಕಂತೆ ವಿವೇಚನೆಯಿಂದ ವರ್ತಿಸಬೇಕೆನ್ನುವುದು ಜನರ ಅಪೇಕ್ಷೆ-ನಿರೀಕ್ಷೆ. ಭಾರತದಂತಹ ದೇಶದಲ್ಲಿ ಅಂದಂದಿನ ದುಡಿಮೆಯನ್ನು ಅವಲಂಬಿಸಿಯೇ ಜೀವನ ಸಾಗಿಸುವ ಕೋಟ್ಯಂತರ ಮಂದಿಯಿದ್ದಾರೆ. ಬಂದ್, ಪ್ರತಿಭಟನೆ ಇತ್ಯಾದಿ ಯಾವುದೇ ಕಾರಣಕ್ಕೆ ದುಡಿಮೆಗೆ ಹೋಗಲಾಗದಿದ್ದರೆ ಅಂಥವರಿಗೆ ಕಷ್ಟ-ನಷ್ಟ. ಅದನ್ನು ಭರಿಸುವವರು ಯಾರು? ಅವರಿಗೂ ಬದುಕುವ ಹಕ್ಕು ಇದೆ.