ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವಂತೆಯೇ ಅದರ ದುರ್ಬಳಕೆಯೂ ಆತಂಕಕಾರಿ ಮಟ್ಟಕ್ಕೆ ಬೆಳೆಯುತ್ತಿದೆ. ವಿಶೇಷವಾಗಿ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳ ಮೇಲೆ ನಡೆಯುತ್ತಿರುವ ಸೈಬರ್ ದಾಳಿಗಳು ವಿತ್ತ ವಲಯಕ್ಕೆ ಹೊಸ ಸವಾಲಾಗಿ ಪರಿಣಮಿಸಿವೆ. ಗ್ರಾಹಕರ ವೈಯಕ್ತಿಕ ಮಾಹಿತಿ ಕಳವು, ಬ್ಯಾಂಕ್ಗಳ ತಂತ್ರಾಂಶದಲ್ಲಿನ ಲೋಪಗಳ ದುರ್ಬಳಕೆ, ಅನಧಿಕೃತ ಹಣ ವರ್ಗಾವಣೆ ಮುಂತಾದ ಕೃತ್ಯಗಳು ಹೆಚ್ಚುತ್ತಿವೆ. ಎಐ ನೆರವಿನಿಂದ ಇಂಥ ದಾಳಿಗಳನ್ನು ಹೆಚ್ಚು ವೇಗವಾಗಿ ಮತ್ತು ನಿಖರವಾಗಿ ನಡೆಸುವ ಸಾಧ್ಯತೆ ಇರುವುದರಿಂದ ಅಪಾಯದ ಸ್ವರೂಪವೂ ಬದಲಾಗಿದೆ.
ಇತ್ತೀಚಿನ ಕೆಲವು ಘಟನೆಗಳು ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿತೋರಿಸಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸುಮಾರು 3,897 ಗ್ರಾಹಕರ ವೈಯಕ್ತಿಕ ಮಾಹಿತಿಯು ಇತ್ತೀಚೆಗೆ ಡಾರ್ಕ್ವೆಬ್ನಲ್ಲಿ ಸೋರಿಕೆಯಾಗಿದೆ. ಗ್ರಾಹಕರ ಹೆಸರು, ದೂರವಾಣಿ ಸಂಖ್ಯೆ, ಜನ್ಮದಿನಾಂಕ, ವಿಳಾಸ ಸೇರಿದಂತೆ ಹಲವು ವಿವರಗಳು ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಬ್ಯಾಂಕ್ ತನಿಖೆ ನಡೆಸುತ್ತಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಖಾತೆಯಿಂದ 187 ಅನಧಿಕೃತ ವಹಿವಾಟು ನಡೆದಿದ್ದು, 13.96 ಕೋಟಿ ರೂ. ಹಣವನ್ನು 36 ಬ್ಯಾಂಕ್ಗಳಲ್ಲಿನ ಖಾತೆಗಳಿಗೆ ವರ್ಗಾಯಿಸಲಾಗಿದೆ. ಆರ್ಬಿಐನ ಅಂಗಸಂಸ್ಥೆಯಾದ ಐಎಫ್ಟಿಎಎಸ್ನ ಸರ್ವರ್ಗೆ ಸಂಬಂಧಿಸಿದ ಭದ್ರತಾ ಲೋಪ ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಂಕೆಯಿದೆ.
ಇದಕ್ಕೂ ಮೊದಲು, ಫೆಬ್ರವರಿಯಲ್ಲಿ ಯೆಸ್ ಬ್ಯಾಂಕ್ಗೆ ಸಂಬಂಧಿಸಿದ ವಿದೇಶಿ ವಿನಿಮಯ ಕಾರ್ಡ್ ವಹಿವಾಟುಗಳಲ್ಲಿ ಸುಮಾರು 2.54 ಕೋಟಿ ರೂ. ಮೌಲ್ಯದ ಅನಧಿಕೃತ ವಹಿವಾಟುಗಳು ನಡೆದಿದ್ದವು. ಅ. 8 ಮತ್ತು 9ರಂದು ಮುಂಬೈ ಮೂಲದ ಎರಡು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಖಾತೆಗಳಿಂದ 700ಕ್ಕೂ ಹೆಚ್ಚು ಅನಧಿಕೃತ ವರ್ಗಾವಣೆಗಳ ಮೂಲಕ ಸುಮಾರು 17 ಕೋಟಿ ರೂ. ಹಣ ಕಳವಾಗಿದೆ.
ಈ ಘಟನೆಗಳ ಹಿನ್ನೆಲೆಯಲ್ಲಿ ಆರ್ಬಿಐ ಬ್ಯಾಂಕ್ಗಳ ಸೈಬರ್ ಭದ್ರತಾ ವ್ಯವಸ್ಥೆಗಳ ಪರಿಶೀಲನೆ ತೀವ್ರಗೊಳಿಸಿದೆ. ಎಪಿಐ ವ್ಯವಸ್ಥೆಯಲ್ಲಿನ ದೌರ್ಬಲ್ಯ, ಥರ್ಡ್ ಪಾರ್ಟಿ ತಂತ್ರಾಂಶ ಬಳಕೆ, ಗ್ರಾಹಕರ ಮಾಹಿತಿಯ ರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಬ್ಯಾಂಕ್ಗಳಿಂದ ವಿವರಣೆ ಕೇಳಿದೆ. ಆದರೆ ಪರಿಶೀಲನೆ ಮತ್ತು ಸೂಚನೆಗಳಿಗೆ ಮಾತ್ರ ಈ ಕ್ರಮ ಸೀಮಿತವಾಗಬಾರದು.
ಬ್ಯಾಂಕ್ಗಳು ನಿರಂತರವಾಗಿ ತಮ್ಮ ಭದ್ರತಾ ವ್ಯವಸ್ಥೆಗಳನ್ನು ನವೀಕರಿಸಬೇಕು. ಅನುಮಾನಾಸ್ಪದ ವಹಿವಾಟುಗಳನ್ನು ತಕ್ಷಣ ಪತ್ತೆಹಚ್ಚುವ ವ್ಯವಸ್ಥೆ, ಬಹುಹಂತದ ಗುರುತು ಪರಿಶೀಲನೆ, ಸಿಬ್ಬಂದಿಗೆ ಸೈಬರ್ ಸುರಕ್ಷತಾ ತರಬೇತಿ ಕಡ್ಡಾಯವಾಗಬೇಕು. ದಾಳಿಗೆ ಒಳಗಾದರೆ ಗ್ರಾಹಕರಿಗೆ ತಕ್ಷಣ ಮಾಹಿತಿ ನೀಡಿ, ಹಣ ವಾಪಸ್ ಪಡೆಯಲು ನೆರವಾಗುವ ವ್ಯವಸ್ಥೆಯೂ ಇರಬೇಕು. ಡಿಜಿಟಲ್ ಬ್ಯಾಂಕಿಂಗ್ ಜನಸಾಮಾನ್ಯರ ಬದುಕಿನ ಭಾಗವಾಗಿದೆ. ಇಂಥ ಸಂದರ್ಭದಲ್ಲಿ ಬ್ಯಾಂಕ್ಗಳ ಭದ್ರತೆಯಲ್ಲಿನ ಸಣ್ಣ ಲೋಪವೂ ಸಾವಿರಾರು ಗ್ರಾಹಕರಿಗೆ ನಷ್ಟ ಉಂಟುಮಾಡಬಹುದು. ಎಐ ತಂತ್ರಜ್ಞಾನವನ್ನು ಅಪರಾಧಿಗಳು ಬಳಸಿಕೊಳ್ಳುವ ಮುನ್ನವೇ ಬ್ಯಾಂಕ್ಗಳು ಮತ್ತು ನಿಯಂತ್ರಣ ಸಂಸ್ಥೆಗಳು ಸನ್ನದ್ಧವಾಗಬೇಕು. ಇಲ್ಲದಿದ್ದರೆ ಡಿಜಿಟಲ್ ವಹಿವಾಟಿನ ಮೇಲಿನ ಜನರ ವಿಶ್ವಾಸವೇ ಕುಸಿಯುವ ಅಪಾಯವಿದೆ.