ಸಾಂದರ್ಭಿಕ ಚಿತ್ರ  
ದೇಶ

ಸಂಪಾದಕೀಯ: ಗುರುತರ ಜವಾಬ್ದಾರಿ

ರಾಜ್ಯದ ಶಿಕ್ಷಣ ರಂಗದ ಸಮಗ್ರ ಸುಧಾರಣೆ ನಿಟ್ಟಿನಲ್ಲಿ ಪರಿಶೀಲನೆ ನಡೆಸಿ ವರದಿ ನೀಡಲು ಸರ್ಕಾರವು ಸಂಪುಟ ಉಪ ಸಮಿತಿಯನ್ನು ರಚಿಸಿದೆ. ರಾಜ್ಯದಲ್ಲಿ ನಡೆಯುವ ಪರೀಕ್ಷೆಗಳು ಮತ್ತು ನೇಮಕಾತಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ತರಲು ಕ್ರಮಗಳನ್ನು ಶಿಫಾರಸು ಮಾಡುವುದು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ನಿಯಂತ್ರಣ ಮತ್ತು ಕೋಚಿಂಗ್ ಕೇಂದ್ರಗಳ ಮೇಲೆ ನಿಗಾಕ್ಕೆ ಸಲಹೆ ನೀಡುವುದು, ಸರ್ಕಾರಿ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮೂಲಸೌಕರ್ಯ ಬಲವರ್ಧನೆ ಮತ್ತು ಗುಣಮಟ್ಟ ಹೆಚ್ಚಳಕ್ಕೆ ಮಾರ್ಗಗಳ ಹುಡುಕಾಟ, ಪ್ರಯೋಗಾಲಯಗಳು, ಗ್ರಂಥಾಲಯಗಳು, ವಿದ್ಯಾರ್ಥಿನಿಲಯಗಳ ಉನ್ನತೀಕರಣಕ್ಕೆ ಸಲಹೆ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ಗಮನ- ಮುಂತಾದ ಮಹತ್ವದ ಜವಾಬ್ದಾರಿಗಳನ್ನು ಸಮಿತಿಗೆ ವಹಿಸಲಾಗಿದೆ. ಆರೋಗ್ಯ ಸಚಿವ ಯು.ಟಿ.ಖಾದರ್ ಸಮಿತಿಯ ಅಧ್ಯಕ್ಷರಾಗಿದ್ದು, ಸಚಿವರಾದ ಬಸವರಾಜ ರಾಯರೆಡ್ಡಿ, ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ್ ಮತ್ತು ಮಧು ಬಂಗಾರಪ್ಪ ಸಮಿತಿಯ ಸದಸ್ಯರಾಗಿದ್ದಾರೆ. ಈ ಸಮಿತಿಯು ರಾಜ್ಯಾದ್ಯಂತ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಜತೆ ಸಮಾಲೋಚನೆ ನಡೆಸಲಿದೆ. ಇದರೊಂದಿಗೆ, ಅಗತ್ಯಕ್ಕೆ ತಕ್ಕಂತೆ ವಿಷಯತಜ್ಞರನ್ನು ನೇಮಕ ಮಾಡಿಕೊಳ್ಳಲು ಸಮಿತಿಗೆ ಅವಕಾಶ ನೀಡಲಾಗಿದೆ. ಪ್ರಸ್ತುತ ಶಿಕ್ಷಣ ರಂಗ ಎದುರಿಸುತ್ತಿರುವ ಸಂಕೀರ್ಣ ಸವಾಲುಗಳು, ಸಮಸ್ಯೆಗಳು ಒಂದೆಡೆಯಾದರೆ, ತಂತ್ರಜ್ಞಾನದ ಬೆಳವಣಿಗೆ ಮತ್ತು ದೇಶವಿದೇಶಗಳ ನಡುವಣ ಸಂಪರ್ಕದಿಂದಾಗಿ ಸೃಷ್ಟಿಯಾಗಿರುವ ಅವಕಾಶಗಳು ಮತ್ತೊಂದೆಡೆ. ಹೀಗೆ ಈ ಕ್ಷೇತ್ರ ಬಹುಆಯಾಮಗಳನ್ನು ಹೊಂದಿದೆ. ಅದೇ ವೇಳೆ, ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ರಾಜ್ಯ ನೀತಿಯ ಗೊಂದಲವೂ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಆದ್ದರಿಂದ ಈ ಸಮಿತಿಯ ಕಾರ್ಯವೂ ಅಷ್ಟೇ ಸವಾಲಿನಿಂದ ಕೂಡಿದೆ. ಇವತ್ತಿನ ಕಾಲಮಾನದಲ್ಲಿ ಜನಸಾಮಾನ್ಯರಿಗೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಹಣ ಹೊಂದಿಸುವುದೇ ದೊಡ್ಡ ಸಾಹಸವಾಗಿದೆ. ಈ ಎರಡರಲ್ಲಿ ಯಾವುದನ್ನೂ ಕಡೆಗಣಿಸುವ ಹಾಗಿಲ್ಲ. ಹೀಗಾಗಿ ಸರ್ಕಾರಗಳು ಈ ದಿಕ್ಕಿನಲ್ಲಿ ಆಲೋಚಿಸಿ ಮುಂದಡಿ ಇಡಬೇಕಾದುದು ಅಗತ್ಯ. ಸಂಪುಟ ಉಪ ಸಮಿತಿಯು ವ್ಯಾಪಕ ಸಮಾಲೋಚನೆ ನಡೆಸುವ ಜೊತೆಗೆ, ಇತರ ರಾಜ್ಯ ಹಾಗೂ ದೇಶಗಳಲ್ಲಿನ ಶಿಕ್ಷಣ ವ್ಯವಸ್ಥೆಯ ಕುರಿತೂ ಮಾಹಿತಿ ಕಲೆಹಾಕಬೇಕಾಗುತ್ತದೆ. ಈ ಬಾರಿಯ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ದೆಹಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಂತರದಲ್ಲಿ, ಯುವಜನರ ಮಾತುಗಳಿಗೆ ಆಡಳಿತಗಾರರು ಕಿವಿಗೊಡುವ ಪ್ರವೃತ್ತಿ ಹೆಚ್ಚಿರುವುದು ಕಂಡುಬರುತ್ತಿದೆ. ಶಿಕ್ಷಣದ ವೆಚ್ಚ, ಕೋಚಿಂಗ್ ಶುಲ್ಕ, ಪರೀಕ್ಷಾ ಗೋಜಲುಗಳು, ವಿವಿಧೆಡೆ ನೇಮಕಾತಿಯಲ್ಲಿನ ಅಕ್ರಮಗಳು ಇತ್ಯಾದಿಯಿಂದಾಗಿ ಯುವಜನರು ಬೇಸತ್ತಿದ್ದಾರೆಂಬುದು ಗೋಡೆ ಮೇಲಿನ ಬರಹದಷ್ಟು ಸ್ಪಷ್ಟ. ಸರ್ಕಾರಗಳು ಶೈಕ್ಷಣಿಕ ಕ್ಷೇತ್ರವನ್ನು ಸ್ವಚ್ಛಗೊಳಿಸುವತ್ತ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳುವುದನ್ನು ಇನ್ನೂ ಬಹುಕಾಲ ಮುಂದೂಡಲಾಗದು. ಈ ನಿಟ್ಟಿನಲ್ಲಿ, ಕರ್ನಾಟಕದಲ್ಲಿ ರಚನೆಯಾಗಿರುವ ಸಂಪುಟ ಉಪ ಸಮಿತಿಯು ತನ್ನ ಹೊಣೆಗಾರಿಕೆಯನ್ನು ಗಂಭೀರವಾಗಿ ತೆಗೆದುಕೊಂಡು, ರಚನಾತ್ಮಕ ಸಲಹೆಗಳನ್ನು ನೀಡಲಿ, ಹಾಗೇ ಸರ್ಕಾರ ಸಹ ವರದಿಯನ್ನು ಅಷ್ಟೇ ಗಂಭೀರವಾಗಿ ಪರಿಗಣಿಸಿ, ಕಾರ್ಯಸಾಧ್ಯ ಅಂಶಗಳನ್ನು ಜಾರಿಗೆ ತರಲೆಂಬುದು ಆಶಯ. ಇದು ಕೇವಲ ಔಪಚಾರಿಕ ಪ್ರಕ್ರಿಯೆಯಾಗದೆ ಸಕ್ರಿಯ ನಡೆಗಳು ಕಂಡುಬರುವುದು ಮುಖ್ಯ. ದೇಶ-ರಾಜ್ಯಗಳ ಭವಿಷ್ಯ ನಿರ್ಧರಿಸುವಲ್ಲಿ ಶಿಕ್ಷಣ ರಂಗದ ಪಾತ್ರವೂ ಪ್ರಮುಖವಾದುದು ಎಂಬ ನೆಲೆಯಲ್ಲಿ ಸಂಬಂಧಪಟ್ಟ ಎಲ್ಲರಿಗೂ ಹೊಣೆಗಾರಿಕೆಯಿದೆ.