Kapil Sibal | ಕಾಂಗ್ರೆಸ್ನ ಹಿರಿಯ ನಾಯಕ ಕಪಿಲ್ ಸಿಬಲ್
ದೆಹಲಿ: ಜಾರಿ ನಿರ್ದೇಶನಾಲಯ (ED) ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರ ವಿರುದ್ಧ ಮಾತ್ರ ಏಕೆ ಕ್ರಮ ಕೈಗೊಳ್ಳುತ್ತದೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಕಪಿಲ್ ಸಿಬಲ್ ಪ್ರಶ್ನಿಸಿದ್ದು, ತನಿಖಾ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯ ಕುರಿತು ಬಾಕಿ ಇರುವ ಪರಿಶೀಲನಾ ಅರ್ಜಿಗಳನ್ನು ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಬಲ್, ಪಶ್ಚಿಮ ಬಂಗಾಳದಲ್ಲಿ ಜಾರಿ ನಿರ್ದೇಶನಾಲಯದ ಕ್ರಮದ ಹಿಂದಿನ ಏಕೈಕ ಉದ್ದೇಶವೆಂದರೆ ವಿರೋಧ ಪಕ್ಷದ ನಾಯಕರಿಗೆ ಕಿರುಕುಳ ನೀಡುವುದು. ವಿಧಾನಸಭಾ ಚುನಾವಣೆಯ ಸಮಯದಲ್ಲಿ ಜಾರ್ಖಂಡ್‌ನಲ್ಲಿ ಹೇಮಂತ್ ಸೊರೆನ್ ಮತ್ತು ಬಿಹಾರದಲ್ಲಿ ಲಾಲು ಪ್ರಸಾದ್ ಮತ್ತು ತೇಜಸ್ವಿ ಯಾದವ್ ವಿರುದ್ಧ ತನಿಖಾ ಸಂಸ್ಥೆಯ ಕ್ರಮದ ಉದಾಹರಣೆಗಳನ್ನು ಸಹ ಈ ವೇಳೆ ಉಲ್ಲೇಖಿಸಿದರು.
ಪಶ್ಚಿಮ ಬಂಗಾಳದಲ್ಲಿ ಐ-ಪಿಎಸಿ ಮೇಲೆ ದಾಳಿ ನಡೆದ ಬಳಿಕ ಇಡಿ ಏನು ತನಿಖೆ ನಡೆಸುತ್ತಿದೆ ಎಂದು ಕೇಳಿದ ಅವರು, ತನಿಖಾ ಸಂಸ್ಥೆ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದರು. ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ ಕಚೇರಿ ಮತ್ತು ಕೋಲ್ಕತ್ತಾದಲ್ಲಿರುವ ಅದರ ಮುಖ್ಯಸ್ಥರ ನಿವಾಸದ ಮೇಲೆ ಇಡಿ ದಾಳಿ ನಡೆಸಿತು. ಈ ವೇಳೆ ಅಧಿಕಾರಿಗಳು ತನಿಖೆಗೆ ಸಂಬಂಧಿಸಿದ ಪ್ರಮುಖ ಪುರಾವೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಇಡಿ ಹೇಳಿಕೊಂಡಿದೆ.
ಯುಪಿಎ ಸರ್ಕಾರವು ಸುಳ್ಳು ಮಾಹಿತಿಯ ಆಧಾರದ ಮೇಲೆ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕನ ವಿರುದ್ಧ ಕಾನೂನು ಕ್ರಮ ಜರುಗಿಸಿಲ್ಲ. ಜಾರಿ ನಿರ್ದೇಶನಾಲಯವನ್ನು ಸ್ಥಾಪಿಸಿದಾಗ ಅದು ದೇಶದ ಯಾವುದೇ ಸ್ಥಳಕ್ಕೆ, ಯಾವುದೇ ಸಮಯದಲ್ಲಿ ಹೋಗಬಹುದಾದ ಸರ್ವವ್ಯಾಪಿ ವಿಚಾರಣೆ ಸಂಸ್ಥೆ ಎಂದು ನಮಗೆ ತಿಳಿದಿರಲಿಲ್ಲ. ಇದು ಫೆಡರಲ್ ರಚನೆಯ ಮೇಲೆ ದಾಳಿ ಮಾಡಬಹುದು, ವಿರೋಧ ಪಕ್ಷದ ನಾಯಕರನ್ನು ತೊಂದರೆಗೊಳಿಸಬಹುದು, ಸರ್ಕಾರಗಳನ್ನೇ ಬೀಳಿಸಬಹುದು ಎನ್ನುವ ವಿಷಯ ಗೊತ್ತಿರಲಿಲ್ಲ ಎಂದರು.
ಪಶ್ಚಿಮ ಬಂಗಾಳದಲ್ಲಿನ ಬೆಳವಣಿಗೆಗಳಿಂದ ತಮಗೆ ನೋವಾಗಿದೆ ಎಂದಿರುವ ಸಿಬಲ್, ನಮ್ಮ ದೇಶದ ಏಕತೆ ಮತ್ತು ಸಮಗ್ರತೆಗೆ ತೊಂದರೆಯಾಗುವುದು ನನಗೆ ಇಷ್ಟವಿಲ್ಲ. ತನಿಖಾ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯ ಕುರಿತು ಸುಪ್ರೀಂ ಕೋರ್ಟ್ ಪರಿಶೀಲಿಸುವ ಸಮಯ ಬಂದಿದೆ. ಇಲ್ಲದಿದ್ದರೆ, ಒಕ್ಕೂಟ ರಚನೆಯು ಮುರಿದುಹೋಗುತ್ತದೆ ಮತ್ತು ಇದು ಜನರಿಗೆ ಇಷ್ಟವಾಗುವುದಿಲ್ಲ ಎಂದು ಹೇಳಿದರು.
ಚುನಾವಣೆ ನಡೆಯುವಲ್ಲಿ ಮಾತ್ರ ಇಡಿ ಕಾರ್ಯನಿರ್ವಹಿಸುತ್ತದೆ ಎಂಬುದು ಕುತೂಹಲಕಾರಿ ಸಂಗತಿಯಾಗಿದ್ದು, ಚುನಾವಣೆಯ ಸಮಯದಲ್ಲಿ ಇಡಿ ಜಾರ್ಖಂಡ್‌ಗೆ ತಲುಪಿದ್ದನ್ನು ನೆನಪಿಸಿಕೊಳ್ಳಬಹುದು. ಬಿಹಾರದಲ್ಲಿಯೂ ಇದೇ ರೀತಿ ಮಾಡಲಾಯಿತು, ಚುನಾವಣೆಯ ಸಮಯದಲ್ಲಿ ಇಡಿ ಅಲ್ಲಿಗೆ ತಲುಪಿದಾಗ, ನ್ಯಾಯಾಲಯವು ಲಾಲು ಪ್ರಸಾದ್ ಮತ್ತು ತೇಜಸ್ವಿ ಯಾದವ್ ದೆಹಲಿಗೆ ಬರುವಂತೆ ಪ್ರಕ್ರಿಯೆಯನ್ನು ಪ್ರಾರಂಭಿಸಿತು, ಈ ಮೂಲಕ ಅವರ ಚುನಾವಣಾ ವೇಳಾಪಟ್ಟಿಯನ್ನು ಅಡ್ಡಿಪಡಿಸಲಾಯಿತು ಎಂದರು.
ಈಗ ಇಡಿ ಪಶ್ಚಿಮ ಬಂಗಾಳವನ್ನು ತಲುಪಿದೆ, ಏಕೆಂದರೆ ಅಲ್ಲಿ ಚುನಾವಣೆಗಳು ನಡೆಯಲಿವೆ, ಇಡಿ ಮೊದಲು ಅವರು ಏನು ತನಿಖೆ ಮಾಡುತ್ತಿದ್ದಾರೆಂದು ಹೇಳಬೇಕು. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅವರು ಬಯಸಿದರೆ, ಕನಿಷ್ಠ ಪತ್ರಿಕೆಗಳು ವರದಿ ಮಾಡುವ ದಾಖಲೆಗಳನ್ನಾದರೂ ಬಯಸಿದರೆ ಕಂಪ್ಯೂಟರ್‌ಗಳ ಎಕ್ಸೆಸ್ ಕೇಳಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.
ಚುನಾವಣಾ ಪ್ರಕ್ರಿಯೆಯ ಸಮಯದಲ್ಲಿ ಇಡಿಗೆ ಇದ್ದಕ್ಕಿದ್ದಂತೆ ದಾಖಲೆಗಳನ್ನು ಸಂಗ್ರಹಿಸಲು ನೆನಪಾಗಿದೆ, ಇವರ ಉದ್ದೇಶವೇ ಗೊಂದಲ ಸೃಷ್ಟಿಸುವುದಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲದ ಕಾರಣ ಟಿಎಂಸಿ ಮತ್ತು ಮಮತಾ ಬ್ಯಾನರ್ಜಿಗೆ ಈ ರೀತಿ ತೊಂದರೆ ನೀಡಲಾಗುತ್ತಿದೆ ಎಂದು ಹೇಳಿದರು. ಇಡಿ ದೇವರಂತೆ ಸರ್ವವ್ಯಾಪಿ. ಈ ಸರ್ಕಾರದ ದೇವರು ಏನು ಬೇಕಾದರೂ ಮಾಡಬಹುದು, ಸಿಬಿಐ ಕೂಡ ಇದೇ ರೀತಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು(ಏಜೆನ್ಸೀಸ್).