ಲಖನೌ: ಪ್ಯಾನ್ ಕಾರ್ಡ್ ವಂಚನೆ ಪ್ರಕರಣದಲ್ಲಿ 11 ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದ ಬಳಿಕ ನಿನ್ನೆ (ಅ. 31) ರಾತ್ರಿ ಜಾಮೀನಿನ ಮೇಲೆ ರಾಂಪುರ ಜೈಲಿನಿಂದ ಹೊರ ಬರುತ್ತಿದ್ದಂತೆ ಎಸ್ಪಿ ಹಿರಿಯ ನಾಯಕ ಅಜಮ್ ಖಾನ್ ಮತ್ತು ಅವರ ಮಗ ಅಬ್ದುಲ್ಲಾ ಅಜಮ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ ಎಂದು ವರದಿಯಾಗಿದೆ.
ಅಜಂ ಖಾನ್ ಬಿಡುಗಡೆಗೆ ಸುಮಾರು 15 ನಿಮಿಷಗಳ ಮೊದಲು, ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡವು ಬಿಗಿ ಭದ್ರತೆಯ ನಡುವೆ ಜೈಲಿನ ಆವರಣಕ್ಕೆ ಪ್ರವೇಶಿಸಿತು, ಜೈಲಿನ ಹೊರಗೆ 24 CRPF ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎನ್ನಲಾಗಿದೆ.
ಖಾನ್ ಜೈಲಿನಿಂದ ಹೊರಗೆ ಬರುತ್ತಿದ್ದಂತೆ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆಯಲು ಮುಂದಾದಾಗ ಅಧಿಕಾರಿಗಳು ಮತ್ತು ಖಾನ್ ನಡುವೆ ಸ್ವಲ್ಪ ಸಮಯದವರೆಗೆ ಬಿಸಿ ವಾಗ್ವಾದ ನಡೆದಿದೆ. ಬೆಂಬಲಿಗರು ಅಧಿಕಾರಿಗಳ ನಡುವೆ ತಳ್ಳಾಟ ನಡೆದಿದೆ. ಬಳಿಕ ಅಧಿಕಾರಿಗಳು ಖಾನ್ ಅವರನ್ನು ಬಂಧಿಸಿದ್ದಾರೆ.
ಪ್ಯಾನ್ ಕಾರ್ಡ್ ಪ್ರಕರಣದಲ್ಲಿ ಖಾನ್ ಮತ್ತು ಅಬ್ದುಲ್ಲಾ ಅವರಿಗೆ ವಿಧಿಸಲಾದ 10 ವರ್ಷಗಳ ಜೈಲು ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಅಮಾನತುಗೊಳಿಸಿತ್ತು ಮತ್ತು ಅಕ್ಟೋಬರ್ 29ರಂದು ಇಬ್ಬರಿಗೂ ಜಾಮೀನು ನೀಡಿತ್ತು. ಇತ್ತ ಜೈಲಿನಿಂದ ಹೊರ ಬರುತ್ತಿದ್ದಂತೆ ಜೌಹರ್ ವಿಶ್ವವಿದ್ಯಾಲಯದ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅವರನ್ನು ಬಂಧಿಸಿದೆ.
ರಾಂಪುರದಲ್ಲಿ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ ನಿರ್ಮಾಣಕ್ಕೆ 416.14 ಕೋಟಿ ರೂಪಾಯಿಗಳನ್ನು ವಿವರಿಸಲಾಗದಂತೆ ಖರ್ಚು ಮಾಡಿರುವ ಆರೋಪದ ಮೇಲೆ ಎಸ್ಪಿ ನಾಯಕನನ್ನು ಜೈಲಿನಲ್ಲಿ ದೀರ್ಘಕಾಲ ವಿಚಾರಣೆ ನಡೆಸಿದ ನಂತರ, ಅಕ್ಟೋಬರ್ 14 ರಂದು ಇಡಿ ಖಾನ್, ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಟ್ರಸ್ಟ್ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಎಫ್ಐಆರ್ನಲ್ಲಿ ಖಾನ್, ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಟ್ರಸ್ಟ್, ಎಸ್ಎಸ್ ಮತ್ತು ಎಸ್ ಎಂಟರ್ಪ್ರೈಸಸ್, ಎಸ್ಎಸ್ ಚಿಕ್ ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರ ವಿರುದ್ಧ ಹೆಸರಿಸಲಾಗಿದೆ. ತನಿಖೆಯ ಸಮಯದಲ್ಲಿ, ವಿಶ್ವವಿದ್ಯಾಲಯದ ಘೋಷಿತ ವೆಚ್ಚ ಮತ್ತು ಅದರ ನಿರ್ಮಾಣದ ಮೌಲ್ಯಮಾಪನ ಮೌಲ್ಯದ ನಡುವೆ ಗಮನಾರ್ಹ ವ್ಯತ್ಯಾಸವನ್ನು ಇಡಿ ಕಂಡುಹಿಡಿದಿದೆ ಎನ್ನಲಾಗಿದೆ.
ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಅಜಂ ಖಾನ್ ಅವರ ಬಿಡುಗಡೆ ರಾಜಕೀಯವಾಗಿ ಮಹತ್ವ ಪಡೆದುಕೊಂಡಿತ್ತು. ಮತ್ತು ಇತ್ತೀಚೆಗೆ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ರಾಂಪುರ ಜೈಲಿಗೆ ಭೇಟಿ ನೀಡಿ ಖಾನ್ ಅವರ ಆರೋಗ್ಯ ವಿಚಾರಿಸಿ, ಚರ್ಚೆ ನಡೆಸಿದ್ದರು.
ನಿನ್ನೆ ರಾತ್ರಿ ಜಾಮೀನು ಬಿಡುಗಡೆ ಬಳಿಕ ಮತ್ತೆ ಅವರನ್ನು ಇಡಿ ಬಂಧಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಇಂದಿನ ಆಡಳಿತಗಾರರಿಗೆ ಇದು ನೆನಪಿರಲಿ, ಸಮಯ ಬದಲಾದಾಗ ಸಿಂಹಾಸನವೂ ಬದಲಾಗುತ್ತದೆ. ಆಜಮ್ ಖಾನ್ ಸಾಹೇಬ್ ಅವರ ವಿರುದ್ಧ ನಡೆಸುತ್ತಿರುವ ಸುಳ್ಳು ಮೊಕದ್ದಮೆಗಳ ಸಂಚನ್ನು ದೇಶ ಮಾತ್ರವಲ್ಲ, ಇಡೀ ಜಗತ್ತೇ ನೋಡುತ್ತಿದೆ.
ವಯೋವೃದ್ಧರೊಬ್ಬರನ್ನು ಇಂತಹ ಅರ್ಥಹೀನ ಮೊಕದ್ದಮೆಗಳಲ್ಲಿ ಸಿಲುಕಿಸಿ ಪದೇ ಪದೇ ಜೈಲಿಗೆ ಕಳುಹಿಸುವುದು ಅತ್ಯಂತ ಹೇಡಿತನದ ಕೃತ್ಯವಾಗಿದೆ. ಇಂದಿನ ಆಡಳಿತಗಾರರು ಯಾವ ಕೆಟ್ಟ ಸಂಪ್ರದಾಯಕ್ಕೆ ಗಾಳಿ ಎಬ್ಬಿಸುತ್ತಿದ್ದಾರೋ, ಗಾಳಿ ಬದಲಾದಾಗ ಅವರೇ ಅದಕ್ಕೆ ಬಲಿಯಾಗುತ್ತಾರೆ. ಆಗ ಓಡಲೂ ಆಗುವುದಿಲ್ಲ. ಅನ್ಯಾಯವು ಮಿತಿಮೀರಿದಾಗ, ಅದು ದೌರ್ಜನ್ಯ ಎಸಗುವವನಿಗೇ ಪ್ರಾಣಸಂಕಟವಾಗಿ ಪರಿಣಮಿಸುತ್ತದೆ. ಅತ್ಯಂತ ಖಂಡನೀಯ! ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಅಜಂ ಖಾನ್ ಅವರನ್ನು ಮೊದಲು 2020 ಫೆಬ್ರವರಿ 26 ರಂದು ಜೈಲಿಗೆ ಕಳುಹಿಸಲಾಯಿತು. ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿದ ನಂತರ ಅವರನ್ನು 2020 ಮೇ 20ರಂದು ಬಿಡುಗಡೆ ಮಾಡಲಾಯಿತು. ಬಳಿಕ 2023 ಅಕ್ಟೋಬರ್ 18ರಂದು ಎರಡನೇ ಬಾರಿಗೆ ಜೈಲಿಗೆ ಹಾಕಲಾಯಿತು. ಮತ್ತು 2025 ಸೆಪ್ಟೆಂಬರ್ 23ರಂದು ಬಿಡುಗಡೆ ಮಾಡಲಾಯಿತು. ನಂತರ 2025 ನವೆಂಬರ್ 17ರಂದು ಮೂರನೇ ಬಾರಿಗೆ ಜೈಲಿಗೆ ಕಳುಹಿಸಲಾಯಿತು. ಮತ್ತು 2026 ಅಕ್ಟೋಬರ್ 31ರಂದು ಬಿಡುಗಡೆ ಮಾಡಲಾಯಿತು. ಈಗ ಇಡಿ ಮತ್ತೆ ಕಸ್ಟಡಿಗೆ ಪಡೆದಿದೆ (ಏಜೆನ್ಸೀಸ್).