ನವದೆಹಲಿ: ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ದೆಹಲಿಯ ಸರ್ವಪ್ರಿಯ ವಿಹಾರ್ ಪ್ರದೇಶದಲ್ಲಿ ಒಂದು ಮನೆ ಮೇಲೆ ಬುಧವಾರ ದಾಳಿ ನಡೆಸಿ, ಸುಮಾರು 14 ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ಆಭರಣಗಳನ್ನು ಜಪ್ತಿ ಮಾಡಿದ್ದಾರೆ.
ಜಪ್ತಿ ಮಾಡಿದ ವಸ್ತುಗಳ ವಿವರ: 5.12 ಕೋಟಿ ರೂಪಾಯಿ ನಗದು (ಕಂತೆ ಕಂತೆಯಾಗಿ ಹಾಸಿಗೆ ಮೇಲೆ ಇರಿಸಲಾಗಿತ್ತು). ಬ್ಯಾಂಕ್ ಅಧಿಕಾರಿಗಳ ಸಹಾಯದಿಂದ ನೋಟು ಎಣಿಕೆ ಯಂತ್ರಗಳನ್ನು ಬಳಸಿ ಎಣಿಕೆ ಮಾಡಲಾಗಿದೆ. ಒಂದು ಸೂಟ್‌ಕೇಸ್ ನಿಂದ ಚಿನ್ನ ಮತ್ತು ವಜ್ರಾಭರಣಗಳು – ಮೌಲ್ಯ ಸುಮಾರು 8.80 ಕೋಟಿ ರೂ. ಮತ್ತು ಚೆಕ್ ಬುಕ್‌ಗಳು ಮತ್ತು ಆಸ್ತಿ ದಾಖಲೆಗಳನ್ನು ಒಳಗೊಂಡಿದ್ದ ಒಂದು ಬ್ಯಾಗ್ – ಇದರ ಮೌಲ್ಯ ಸುಮಾರು 35 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದೆ.
ಈ ಮನೆಯು ಅಮನ್ ಕುಮಾರ್ ಎಂಬುವವರಿಗೆ ಸಂಬಂಧಿಸಿದ್ದು, ಹರಿಯಾಣ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಐಷಾರಾಮಿ ಕಾರುಗಳು ಮತ್ತು ಖಾಸಗಿ ಜೆಟ್‌ಗಳನ್ನು ಒಳಗೊಂಡ ಐಷಾರಾಮಿ ಜೀವನಶೈಲಿಯನ್ನು ಆಗಾಗ್ಗೆ ಪ್ರದರ್ಶಿಸುವ ಆರೋಪಿ ಇಂದರ್‌ಜಿತ್ ಸಿಂಗ್ ಯಾದವ್ ಅವರ ಸಹಚರರೆಂದು ಇಡಿ ತಿಳಿಸಿದೆ. ಯಾದವ್ ಅವರು ಯುಎಇಗೆ ಪರಾರಿಯಾಗಿ ಅಲ್ಲಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇವರು ಖಾಸಗಿ ಹಣಕಾಸುದಾರರ ಸಾಲ ಮರುಪಾವತಿ ವಿಚಾರದಲ್ಲಿ ಬಲವಂತದ ವಸೂಲಿ, ಬೆದರಿಕೆ, ಆಯುಧ ಬಳಕೆ ಮೂಲಕ ಕೋಟ್ಯಂತರ ರೂಪಾಯಿ ಆದಾಯ ಗಳಿಸಿದ್ದಾರೆ ಎಂಬ ಆರೋಪಗಳಿವೆ.ಈ ಪ್ರಕರಣ ಹರಿಯಾಣ ಮತ್ತು ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ 14ಕ್ಕೂ ಹೆಚ್ಚು ಎಫ್‌ಐಆರ್‌ಗಳು ಮತ್ತು ಚಾರ್ಜ್‌ಶೀಟ್‌ಗಳ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿದೆ.
ಇನ್ನು ಇಡಿ ದಾಳಿಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಾಸಿಗೆ ಮೇಲೆ ಕುಪ್ಪಳಿಸಿ ಇರಿಸಲಾಗಿದ್ದ ನೋಟುಗಳು ಮತ್ತು ಸೂಟ್‌ಕೇಸ್‌ನಿಂದ ಹೊರಬಿದ್ದ ಆಭರಣಗಳು ಜನರ ಗಮನ ಸೆಳೆದಿವೆ. ತನಿಖೆ ಮುಂದುವರಿದಿದ್ದು, ಯಾದವ್ ಅವರ ಜಾಲ ಮತ್ತು ಅಕ್ರಮ ಹಣದ ಮೂಲಗಳ ಬಗ್ಗೆ ಹೆಚ್ಚಿನ ಮಾಹಿತಿ ಬಯಲಾಗಲಿದೆ ಎಂದು ನಿರೀಕ್ಷೆಯಿದೆ,(ಏಜೆನ್ಸೀಸ್).