ಆಪ್ ರಾಜ್ಯಸಭಾ ಸಂಸದ ಮತ್ತು ಉಪನಾಯಕ ಅಶೋಕ್ ಮಿತ್ತಲ್
ಚಂಡೀಗಢ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(FEMA) ತನಿಖೆಯ ಭಾಗವಾಗಿ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಮತ್ತು ಉಪನಾಯಕ ಅಶೋಕ್ ಮಿತ್ತಲ್ ಅವರಿಗೆ ಸಂಬಂಧಿಸಿದ ಕಚೇರಿ ಮತ್ತು ಮನೆ ಮೇಲೆ ಬುಧವಾರ(ಏ. 15) ಜಾರಿ ನಿರ್ದೇಶನಾಲಯ(ED) ದಾಳಿ ನಡೆಸಿದೆ.
ಲವ್ಲಿ ಗ್ರೂಪ್‌ನ ಮುಖ್ಯಸ್ಥರಾಗಿರುವ 61 ವರ್ಷದ ಉದ್ಯಮಿ ಮತ್ತು ಶಿಕ್ಷಣ ತಜ್ಞ ಅಶೋಕ್ ಮಿತ್ತಲ್, ಫಾಗ್ವಾರಾದ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ ಕುಲಪತಿಯೂ ಆಗಿದ್ದಾರೆ. ಜಲಂಧರ್ ಮತ್ತು ಫಾಗ್ವಾರಾದಲ್ಲಿ ಮಿತ್ತಲ್ ಅವರ ವ್ಯವಹಾರ ಹಿತಾಸಕ್ತಿಗಳಿಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇನ್ನೂ ಅಶೋಕ್ ಮಿತ್ತಲ್ ಮೇಲಿನ ಇಡಿ ದಾಳಿಯನ್ನು ಖಂಡಿಸಿರುವ ಆಪ್, ಇದು ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿ ಮುಂಬರುವ ಪಂಜಾಬ್ ಚುನಾವಣೆಗೆ ಆಡಳಿತರೂಢ ಬಿಜೆಪಿ ಸಿದ್ದತೆಯನ್ನು ಆರಂಭಿಸಿದೆ. ರಾಜಕೀಯವಾಗಿ ಸ್ಪರ್ಧಿಸುವ ಬದಲು, ಎದುರಾಳಿಗಳ ಮೇಲೆ ಒತ್ತಡ ಹೇರಲು ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದೆ.
ಪಂಜಾಬ್ ಸಿಎಂ ಭಗವಂತ್ ಮಾನ್ ಸಿಂಗ್ ಸಹ, ಮಿತ್ತಲ್ ಮೇಲಿನ ದಾಳಿಯನ್ನು ಖಂಡಿಸಿದ್ದು, ಬಿಜೆಪಿ ಪಂಜಾಬ್ ಚುನಾವಣೆಗೆ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಸಂಸದ ಅಶೋಕ್ ಮಿತ್ತಲ್ ಅವರ ಮನೆ ಮತ್ತು ವಿಶ್ವವಿದ್ಯಾಲಯದ ಮೇಲೆ ಇಡಿ ದಾಳಿ... ವಿಶಿಷ್ಟ ಮೋದಿ ಶೈಲಿ ಎಂದು ಅಣಕವಾಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಪಂಜಾಬ್‌ನಲ್ಲಿ ಚುನಾವಣೆಗೆ ತಯಾರಿ ಆರಂಭಿಸಿದೆ. ಪಂಜಾಬ್ ಜನರು ಈ ಬಗ್ಗೆ ಬಲವಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ (ಏಜೆನ್ಸೀಸ್).