ಕೇರಳ ಮಾಜಿ ಸಿಎಂ ಮನೆ ಮುಂದೆ ಭಾರಿ ಹೈಡ್ರಾಮಾ: ಇಡಿ ಅಧಿಕಾರಿಗಳ ಕಾರಿನ ಮೇಲೆ ಸಿಪಿಐ(ಎಂ) ಕಾರ್ಯಕರ್ತರಿಂದ ದಾಳಿ! ED Raid
- ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿವಾಸಗಳ ಮೇಲೆ ಇಡಿ ಅಧಿಕಾರಿಗಳಿಂದ ದಾಳಿ
- ಪುತ್ರಿ ಟಿ. ವೀಣಾ ಅವರಿಗೆ ಸೇರಿದ ಐಟಿ ಸಂಸ್ಥೆ 'ಎಕ್ಸಾಲಾಜಿಕ್' ವಿರುದ್ಧದ ಅಕ್ರಮ ಹಣ ವರ್ಗಾವಣೆ ಆರೋಪ
- ಮಾಜಿ ಸಿಎಂ ನಿವಾಸ ಸೇರಿದಂತೆ ರಾಜ್ಯದ ಒಟ್ಟು 10 ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ಇಡಿ ಅಧಿಕಾರಿಗಳಿಂದ ತಪಾಸಣೆ
- ಆಕ್ರೋಶಗೊಂಡ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರಿಂದ ಇಡಿ ಅಧಿಕಾರಿಗಳ ವಾಹನಗಳ ಮೇಲೆ ತೀವ್ರ ದಾಳಿ
ತಿರುವನಂತಪುರಂ : ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ( Pinarayi Vijayan ) ಹಾಗೂ ಅವರ ಪುತ್ರಿ ಟಿ. ವೀಣಾ ಅವರಿಗೆ ಸೇರಿದ ಐಟಿ ಸಂಸ್ಥೆ 'ಎಕ್ಸಾಲಾಜಿಕ್' ವಿರುದ್ಧದ ಕೋಟಿ ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED Raid) ಬುಧವಾರ ಕೇರಳದಾದ್ಯಂತ ಭಾರಿ ದಾಳಿ ನಡೆಸಿದೆ.
ಮಾಜಿ ಸಿಎಂ ನಿವಾಸ ಸೇರಿದಂತೆ ರಾಜ್ಯದ ಒಟ್ಟು 10 ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ಇಡಿ ಅಧಿಕಾರಿಗಳು ತಪಾಸಣೆ ಕೈಗೊಂಡಿದ್ದು, ಈ ವೇಳೆ ಆಕ್ರೋಶಗೊಂಡ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಇಡಿ ಅಧಿಕಾರಿಗಳು ಸಂಚರಿಸುತ್ತಿದ್ದ ವಾಹನಗಳ ಮೇಲೆ ತೀವ್ರ ದಾಳಿ ನಡೆಸಿ, ಜಖಂಗೊಳಿಸಿದ್ದಾರೆ. ಕೇರಳ ಹೈಕೋರ್ಟ್ ಈ ತನಿಖೆಯನ್ನು ರದ್ದುಗೊಳಿಸಲು ನಿರಾಕರಿಸಿದ ಬೆನ್ನಲ್ಲೇ ಕೇಂದ್ರ ತನಿಖಾ ಸಂಸ್ಥೆಯು ಈ ನಿರ್ಣಾಯಕ ಕ್ರಮಕ್ಕೆ ಮುಂದಾಗಿದ್ದು, ರಾಜ್ಯದಲ್ಲಿ ಭಾರಿ ರಾಜಕೀಯ ಬಿರುಗಾಳಿ ಹಾಗೂ ಆಡಳಿತ ಪಕ್ಷ-ವಿಪಕ್ಷಗಳ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿದೆ.
ಕೇರಳದಾದ್ಯಂತ ಬುಧವಾರ ಮುಂಜಾನೆಯಿಂದಲೇ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ಆರಂಭಿಸುತ್ತಿದ್ದಂತೆ ಇಡೀ ರಾಜ್ಯ ರಾಜಧಾನಿ ತಿರುವನಂತಪುರಂ ಪ್ರತಿಭಟನಾ ರಣರಂಗವಾಗಿ ಮಾರ್ಪಟ್ಟಿತು. ಮುಂಜಾನೆಯಿಂದಲೇ ನೂರಾರು ಸಿಪಿಐ(ಎಂ) ಕಾರ್ಯಕರ್ತರು ಬೀದಿಗಿಳಿದು ಕೇಂದ್ರ ತನಿಖಾ ಸಂಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾಕಾರರು ಇಡಿ ಅಧಿಕಾರಿಗಳ ವಾಹನವನ್ನು ತಡೆದು, ಅದರ ಮುಂಭಾಗದ ಗ್ಲಾಸ್ (ವಿಂಡ್‌ಶೀಲ್ಡ್) ಅನ್ನು ಪುಡಿಪುಡಿ ಮಾಡಿ ಜಖಂಗೊಳಿಸಿದರು. ಮಹಿಳಾ ಅಧಿಕಾರಿಗಳೂ ಇದ್ದ ಈ ವಾಹನದ ಮೇಲೆ ನಡೆದ ದಾಳಿಯನ್ನು ನಿಯಂತ್ರಿಸಲು ಮತ್ತು ಉದ್ರಿಕ್ತ ಜನಸಮೂಹವನ್ನು ಚದುರಿಸಲು ಪೊಲೀಸರು ಹಾಗೂ ಕೇಂದ್ರ ಭದ್ರತಾ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಿರುವನಂತಪುರಂನ ಪ್ರಸ್ತುತ ನಿವಾಸ, ಕಣ್ಣೂರಿನಲ್ಲಿರುವ ಅವರ ಹಳೆಯ ಮನೆ ಹಾಗೂ ಕೋಯಿಕ್ಕೋಡ್‌ನಲ್ಲಿರುವ ಅವರ ಅಳಿಯ ಮತ್ತು ಮಾಜಿ ಸಚಿವ ಮೊಹಮ್ಮದ್ ರಿಯಾಸ್ ಅವರ ನಿವಾಸ ಸೇರಿದಂತೆ ಕೇರಳದ ಒಟ್ಟು 10 ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ಈ ಇಡಿ ದಾಳಿಗಳು ನಡೆದಿವೆ. ಅಧಿಕಾರಿಗಳು ಮುಂಜಾನೆಯೇ ತಪಾಸಣೆ ಆರಂಭಿಸಿದ ಹಿನ್ನೆಲೆಯಲ್ಲಿ ಪಿಣರಾಯಿ ವಿಜಯನ್ ಮತ್ತು ಅವರ ಕುಟುಂಬಸ್ಥರು ಮನೆಯ ಒಳಗೇ ಉಳಿದುಕೊಂಡಿದ್ದರು. ಆದರೆ, ಮನೆಯ ಹೊರಗೆ ಜಮಾಯಿಸಿದ್ದ ನೂರಾರು ಪಕ್ಷದ ಬೆಂಬಲಿಗರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
ಈ ಭಾರಿ ಹಂಗಾಮು ಮತ್ತು ಗದ್ದಲದ ನಡುವೆ ಕೆಲವು ಪ್ರತಿಭಟನಾಕಾರರು ನಿವಾಸದ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿಯ ಮೇಲೆ ಪ್ಲಾಸ್ಟಿಕ್ ಬಾಟಲಿಗಳು, ಹೆಲ್ಮೆಟ್‌ಗಳು ಮತ್ತು ಕಲ್ಲುಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಸಿಪಿಐ(ಎಂ) ಪಕ್ಷದ ಹಿರಿಯ ನಾಯಕರು ತಕ್ಷಣವೇ ಮಧ್ಯಪ್ರವೇಶಿಸಿ, ಉದ್ರಿಕ್ತ ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಅಲ್ಲದೆ, ಯಾವುದೇ ರೀತಿಯ ಹಿಂಸಾತ್ಮಕ ಪ್ರತಿಭಟನೆಗೆ ಮುಂದಾಗದಂತೆ ಮನವೊಲಿಸಿ ಅಲ್ಲಿಂದ ಕಳುಹಿಸುವಲ್ಲಿ ಯಶಸ್ವಿಯಾದರು.
ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ಒಡೆತನದ 'ಎಕ್ಸಾಲಾಜಿಕ್ ಸೊಲ್ಯೂಷನ್ಸ್' ಸಂಸ್ಥೆಗೆ 'ಕೊಚ್ಚಿನ್ ಮಿನರಲ್ಸ್ ಅಂಡ್ ರುಟೈಲ್ ಲಿಮಿಟೆಡ್' (CMRL) ಕಂಪನಿಯು 2018 ಮತ್ತು 2019ರ ನಡುವೆ ಯಾವುದೇ ಸೇವೆಗಳನ್ನು ಪಡೆಯದೆಯೇ ಬರೋಬ್ಬರಿ 1.72 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಪಾವತಿಸಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಈ ಇಡಿ ದಾಳಿ ನಡೆದಿದೆ. ವಿಶೇಷವೆಂದರೆ, ಈ ಪ್ರಕರಣದಲ್ಲಿ ಇಡಿ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ಸಿಎಂಆರ್‌ಎಲ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದ ಮರುದಿನವೇ ಈ ಭಾರಿ ದಾಳಿ ನಡೆದಿರುವುದು ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ, (ಏಜೆನ್ಸೀಸ್).