ಸಿಎಂ ಮಮತಾ ಬ್ಯಾನರ್ಜಿ 
ದೇಶ

ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಎಫ್​​ಐಆರ್​ ದಾಖಲಿಸಲು ಅನುಮತಿ ಕೋರಿ ಸುಪ್ರೀಂಗೆ ಇಡಿ ಅರ್ಜಿ | ED v/s Mamata Banerjee

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಜಾರಿ ನಿರ್ದೇಶನಾಲಯ ಮತ್ತು ಟಿಎಂಸಿ ಮುಖ್ಯಸ್ಥೆ ಮತ್ತು ಸಿಎಂ ಮಮತಾ ಬ್ಯಾನರ್ಜಿ ನಡುವಿನ ಗುದ್ದಾಟ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಸೊಮವಾರ(ಜ. 12) ಜಾರಿ ನಿರ್ದೇಶನಾಲಯ ತನಿಖೆಗೆ ಅಡ್ಡಿ ಪಡಿಸಿದ ಆರೋಪದ ಮೇಲೆ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಎಫ್​ಐಆರ್ ದಾಖಲಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ ಎಂದು ವರದಿಯಾಗಿದೆ.
ಕಲ್ಲಿದ್ದಿಲು ಹಗರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತಿಕ್ ಜೈನ್ ಮನೆ ಮೇಲೆ ದಾಳಿ ಮಾಡಿ ಶೋಧ ನಡೆಸುವುದಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸಿಎಂ ಮಮತಾ ಬ್ಯಾನರ್ಜಿ, ರಾಜ್ಯ ಡಿಜಿಪಿ ಮತ್ತು ಕೋಲ್ಕತ್ತಾ ಪೊಲೀಸ್ ಆಯುಕ್ತರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿದೆ ಎನ್ನಲಾಗಿದೆ. 
ಸಾಂವಿಧಾನಿಕ ಹುದ್ದೆಗಳಲ್ಲಿರುವವರು, ಪೊಲೀಸ್ ಅಧಿಕಾರಿಗಳು, ಕಾನೂನುಬದ್ಧ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಇಡಿ ಸಂಸ್ಥೆ ಆರೋಪಿಸಿದೆ.
ಇನ್ನೂ ಅತ್ತ ಇಡಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ರೆ, ಇತ್ತ ಕೋಲ್ಕತ್ತಾದಲ್ಲಿ ಐ-ಪ್ಯಾಕ್ ಕಚೇರಿ ಮೇಲಿನ ದಾಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಡಿ ಅಧಿಕಾರಿಗಳ ವಿರುದ್ದ ತನಿಖೆ ಆರಂಭಿಸಿದ್ದಾರೆ.
ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥರ ಮನೆ ಮೇಲೆ ದಾಳಿ ಮಾಡಿದ ಇಡಿ ಅಧಿಕಾರಿಗಳ ಗುರುತುಗಳನ್ನು ಪತ್ತೆ ಹಚ್ಚಲು, ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳ ಪ್ರವೇಶ, ನೋಡಿದ ಬಗ್ಗೆ ಸುತ್ತಮುತ್ತಲಿನ ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ತಿದ್ದಾರೆ ಎನ್ನಲಾಗಿದೆ.
ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್‌ಎ ಅಡಿಯಲ್ಲಿ ತನಿಖೆ ನಡೆಸಲಾಗುತ್ತಿರುವ ಇಡಿ ಗುರುವಾರ(ಜ. 08) ಐ-ಪಿಎಸಿ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಕಚೇರಿಯ ಮೇಲೆ ದಾಳಿ ನಡೆಸಿತ್ತು. ಇದೇ ವೇಳೆ , ಪೊಲೀಸರು ಮತ್ತು ಇತರ ಅಧಿಕಾರಿಗಳೊಂದಿಗೆ ಎರಡು ಕಚೇರಿಗಳಿಗೆ ಹೋದ ಮಮತಾ ಬ್ಯಾನರ್ಜಿ, ಕೆಲವು ಫೈಲ್‌ಗಳು ಮತ್ತು ಪೆನ್‌ಡ್ರೈವ್‌ಗಳೊಂದಿಗೆ ಹೊರಬಂದಿದ್ದರು. ಈ ಫೈಲ್​ಗಳು ತಮ್ಮ  ಪಕ್ಷದ ಚುನಾವಣಾ ತಂತ್ರಗಳಿಗೆ ಸಂಬಂಧಿಸಿದ ವಿವರಗಳನ್ನು ಒಳಗೊಂಡಿವೆ ಎಂದಿದ್ದರು (ಏಜೆನ್ಸೀಸ್).