Subrata Gupta | ನಿವೃತ್ತ ಐಎಎಸ್ ಅಧಿಕಾರಿ ಸುಬ್ರತಾ ಗುಪ್ತಾ
ಕೊಲ್ಕತ್ತಾ: ಪಶ್ಚಿಮ ಬಂಗಾಳದ ನೂತನ ಸರ್ಕಾರವು ಮುಖ್ಯಮಂತ್ರಿ ಕಚೇರಿಯನ್ನು ಪುನರ್ರಚಿಸಲು ತ್ವರಿತವಾಗಿ ಕ್ರಮ ಕೈಗೊಂಡಿದ್ದು, ನಿವೃತ್ತ ಐಎಎಸ್ ಅಧಿಕಾರಿ ಸುಬ್ರತಾ ಗುಪ್ತಾರನ್ನು (Subrata Gupta) ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸಲಹೆಗಾರರನ್ನಾಗಿ ನೇಮಿಸಿದೆ.
1990 ರ ಬ್ಯಾಚ್‌ನ ಅಧಿಕಾರಿಯಾಗಿರುವ ಗುಪ್ತಾ ಅವರನ್ನು ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ನಡೆದ ಎಸ್ಐಆರ್ ಪ್ರಕ್ರಿಯೆಗಾಗಿ ಚುನಾವಣಾ ಆಯೋಗವು ವಿಶೇಷ ರೋಲ್ ವೀಕ್ಷಕರಾಗಿ ನೇಮಿಸಿಕೊಂಡಿತ್ತು. ಶನಿವಾರ ಹೊರಡಿಸಲಾದ ಅಧಿಕೃತ ಅಧಿಸೂಚನೆಯ ಪ್ರಕಾರ, ವಿಧಾನಸಭಾ ಚುನಾವಣಾ ಗೆಲುವಿನ ಬಳಿಕ ಹೊಸ ಸರ್ಕಾರ ತನ್ನ ಆಡಳಿತ ರಚನೆಯನ್ನು ರೂಪಿಸುತ್ತಿರುವ ಸಮಯದಲ್ಲಿ ಗುಪ್ತಾರನ್ನು ಮುಖ್ಯಮಂತ್ರಿಗಳ ಸಲಹೆಗಾರರನ್ನಾಗಿ ನೇಮಿಸಲಾಗಿದೆ.
ಗುಪ್ತಾ ಅವರ ಸುದೀರ್ಘ ಅನುಭವವು ಸರ್ಕಾರಕ್ಕೆ ಸಮನ್ವಯ ಮತ್ತು ಆಡಳಿತ ಸಂಬಂಧಿತ ವಿಷಯಗಳಲ್ಲಿ ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದು ಪ್ರಮುಖ ನೇಮಕಾತಿಯಲ್ಲಿ, ಐಎಎಸ್ ಅಧಿಕಾರಿ ಶಾಂತನು ಬಾಲಾರನ್ನು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. 2017 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾದ ಬಾಲಾ, ಮುಖ್ಯಮಂತ್ರಿ ಕಚೇರಿಗೆ ವರ್ಗಾವಣೆಯಾಗುವ ಮೊದಲು ದಕ್ಷಿಣ 24 ಪರಗಣಗಳ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.
ರಾಜ್ಯದಲ್ಲಿ ಸರ್ಕಾರ ಬದಲಾವಣೆಯಾದ ಬಳಿಕ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಪ್ರಸ್ತುತ ನಡೆಯುತ್ತಿರುವ ಪುನರ್ ರಚನೆಯ ಭಾಗವಾಗಿ ಈ ನೇಮಕಾತಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕೃತ ಅಧಿಸೂಚನೆಗಳ ಪ್ರಕಾರ, ಗುಪ್ತಾ ಮತ್ತು ಬಾಲಾ ಇಬ್ಬರೂ ತಮ್ಮ ಹೊಸ ಹುದ್ದೆಗಳ ಜವಾಬ್ದಾರಿಯನ್ನು ತಕ್ಷಣವೇ ವಹಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ(ಏಜೆನ್ಸೀಸ್).