ಮತದಾರರ ಫಾರ್ಮ್-6 ನಲ್ಲಿದ್ದ ಹೆಚ್ಚುವರಿ ನಿಯಮ ಹಿಂಪಡೆದ ಚುನಾವಣಾ ಆಯೋಗ!  
ದೇಶ

SIR ವಿವಾದಕ್ಕೆ ಬ್ರೇಕ್: ಮತದಾರರ ಫಾರ್ಮ್-6 ನಲ್ಲಿದ್ದ ಹೆಚ್ಚುವರಿ ನಿಯಮ ಹಿಂಪಡೆದ ಚುನಾವಣಾ ಆಯೋಗ!

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪೂರ್ಣಗೊಂಡಿರುವ ರಾಜ್ಯಗಳಲ್ಲಿ, ಹೊಸ ಮತದಾರರ ನೋಂದಣಿಯ ಆನ್‌ಲೈನ್ ಫಾರ್ಮ್ 6 ನಲ್ಲಿದ್ದ ಹೆಚ್ಚುವರಿ ಸ್ವಯಂ ಘೋಷಣಾ ವಿಭಾಗವನ್ನು ಚುನಾವಣಾ ಆಯೋಗವು ಹಿಂಪಡೆದಿದೆ.

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪೂರ್ಣಗೊಂಡಿರುವ ರಾಜ್ಯಗಳಲ್ಲಿ, ಹೊಸ ಮತದಾರರ ನೋಂದಣಿಯ ಆನ್‌ಲೈನ್ ಫಾರ್ಮ್ 6 ನಲ್ಲಿದ್ದ ಹೆಚ್ಚುವರಿ ಸ್ವಯಂ ಘೋಷಣಾ ವಿಭಾಗವನ್ನು ಚುನಾವಣಾ ಆಯೋಗವು ಹಿಂಪಡೆದಿದೆ. ಈ ನಿಯಮವು ಎಸ್‌ಐಆರ್ ನಡೆಯುವ ಅವಧಿಗೆ ಮಾತ್ರ ಅನ್ವಯಿಸಲಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

ಹೊಸದಾಗಿ ಅರ್ಜಿ ಸಲ್ಲಿಸುವ ಮತದಾರರು ತಮಗೆ ಅಥವಾ ತಮ್ಮ ಪೋಷಕರಿಗೆ ಹಾಗೂ ಅಜ್ಜ-ಅಜ್ಜಿಯಂದಿರಿಗೆ ಸಂಬಂಧಿಸಿದಂತೆ, ಹಿಂದೆ ನಡೆದ ತೀವ್ರ ಪರಿಷ್ಕರಣೆಯ ಮತದಾರರ ಪಟ್ಟಿಯ ವಿವರಗಳ ಲಿಂಕ್ ಅನ್ನು ಒದಗಿಸಬೇಕಾದ ಹೆಚ್ಚುವರಿ ಘೋಷಣೆಯು, ಎಸ್‌ಐಆರ್ ಪ್ರಕ್ರಿಯೆ ಚಾಲ್ತಿಯಲ್ಲಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಸಿಐನೆಟ್​ ಪೋರ್ಟಲ್‌ನಲ್ಲಿ ಇನ್ನೂ ಲಭ್ಯವಿದೆ.

ಆದರೆ, ಎಸ್‌ಐಆರ್ ಪೂರ್ಣಗೊಂಡಿರುವ ರಾಜ್ಯಗಳಲ್ಲಿ ಈ ಹೆಚ್ಚುವರಿ ಘೋಷಣೆಯನ್ನು ಇಸಿಐನೆಟ್​ ಆ್ಯಪ್ ಮತ್ತು ಪೋರ್ಟಲ್‌ನಿಂದ ಹಾಗೂ ಆಯಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳ ಪೋರ್ಟಲ್‌ಗಳಿಂದ ತೆಗೆದುಹಾಕಲಾಗಿದೆ. ಈಗ ನೋಂದಣಿ ಬಯಸುವ ಅರ್ಜಿದಾರರು ಮತದಾರರ ನೋಂದಣಿ ನಿಯಮಗಳು 1960ರ ಅಡಿಯಲ್ಲಿ ನಿಗದಿಪಡಿಸಲಾದ ಶಾಸನಬದ್ಧ ಫಾರ್ಮ್ 6 ಅನ್ನು ಮಾತ್ರ ಭರ್ತಿ ಮಾಡುವ ಅಗತ್ಯವಿದೆ.

ಇದನ್ನೂ ಓದಿ:ಎಸ್​​​ಐಆರ್​ ವಿವಾದ: ಪ್ರಧಾನಿ ಮೋದಿ ಗೆದ್ದಿರುವ ವಾರಾಣಸಿ ಫಲಿತಾಂಶ ರದ್ದುಗೊಳಿಸಿ ಮರುಚುನಾವಣೆ ನಡೆಸುವಂತೆ ಕಾಂಗ್ರೆಸ್ ನಾಯಕನ ಆಗ್ರಹ | Election Commission

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಹಾಗೂ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರನ್ನೊಳಗೊಂಡ ಪೂರ್ಣ ಪ್ರಮಾಣದ ಆಯೋಗವು ಸೆಪ್ಟೆಂಬರ್ 26 ರಂದು ನಡೆಸಿದ ಸಭೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಭೆಯ ನಂತರ ಪ್ರತಿಕ್ರಿಯಿಸಿದ್ದ ಚುನಾವಣಾ ಮಂಡಳಿಯು, ಫಾರ್ಮ್ 6 ಗೆ ಲಗತ್ತಿಸಲಾದ ಘೋಷಣೆಯು ಎಸ್‌ಐಆರ್‌ಗೆ ಮಾತ್ರ ಸೀಮಿತವಾಗಿದ್ದು, ಎಸ್‌ಐಆರ್ ಇಲ್ಲದ ಅವಧಿಯಲ್ಲಿ ನಿಯಮಗಳ ಪ್ರಕಾರ ಅನ್ವಯವಾಗುವ ಫಾರ್ಮ್‌ಗಳನ್ನು ಮಾತ್ರ ಬಳಸಲಾಗುವುದು ಎಂದು ಸ್ಪಷ್ಟಪಡಿಸಿತ್ತು.

ಫಾರ್ಮ್ 6 ಸುತ್ತಲಿನ ವಿವಾದ!...

ಫಾರ್ಮ್ 6 ಗೆ ಸಂಬಂಧಿಸಿದ ಬದಲಾವಣೆಗಳ ಕುರಿತು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ವಿಷಯ ಹೊರಬಿದ್ದ ನಂತರ ಈ ವಿಷಯ ದೇಶ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಫಾರ್ಮ್ 6 ಎಂಬುದು ಅರ್ಹ ನಾಗರಿಕರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸುವ ಶಾಸನಬದ್ಧ ನಮೂನೆಯಾಗಿದ್ದು, ನಿಯಮಗಳನ್ನು ತಿದ್ದುಪಡಿ ಮಾಡದೆ ನಿಯಮಾವಳಿ 1960ರ ಅಡಿಯಲ್ಲಿರುವ ನಮೂನೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಜೋಶಿ ಆಕ್ಷೇಪಿಸಿದ್ದರು. ಇದನ್ನು ಸಂಧು ಕೂಡ ಬೆಂಬಲಿಸಿದ್ದರು.

ಇಸಿಐನೆಟ್​​ನಲ್ಲಿ ಆನ್‌ಲೈನ್ ಫಾರ್ಮ್ 6 ಪ್ರಕ್ರಿಯೆಗೆ ಎಸ್‌ಐಆರ್ ಸಂಬಂಧಿತ ಘೋಷಣೆಯನ್ನು ಸೇರಿಸಿದ ನಂತರವೂ ಸಂಧು ಅವರು ಮತ್ತೆ ಆಕ್ಷೇಪಿಸಿ, ಇದನ್ನು ಅಕ್ರಮ ಎಂದು ಕರೆದರಲ್ಲದೆ ತಕ್ಷಣವೇ ತೆಗೆದುಹಾಕುವಂತೆ ಆಗ್ರಹಿಸಿದ್ದರು. ಆದರೆ, ಚುನಾವಣಾ ಆಯೋಗವು ತನ್ನ ಹೇಳಿಕೆಗಳಲ್ಲಿ, ಫಾರ್ಮ್ 6 ಅನ್ನೇನೂ ತಿದ್ದುಪಡಿ ಮಾಡಿಲ್ಲ ಮತ್ತು ಈ ಘೋಷಣೆಯು ಎಸ್‌‌ಐಆರ್ ಪ್ರಕ್ರಿಯೆಗೆ ಮಾತ್ರ ಸಂಬಂಧಿಸಿದ ಹೆಚ್ಚುವರಿ ಅಗತ್ಯತೆಯಾಗಿದೆ ಎಂದು ಸಮರ್ಥಿಸಿಕೊಂಡಿದೆ. ಬಿಹಾರ ಎಸ್‌ಐಆರ್ ಮೇಲಿನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಈ ಘೋಷಣೆಯನ್ನು ಎತ್ತಿಹಿಡಿದಿದೆ ಎಂದೂ ಆಯೋಗ ಹೇಳಿದೆ.

ಕಳೆದ 10 ತಿಂಗಳುಗಳಲ್ಲಿ ತಮ್ಮ ಗಮನಕ್ಕೆ ಬಾರದೆ ಅಥವಾ ಶಿಫಾರಸು ಇಲ್ಲದೆ ಎಸ್‌ಐಆರ್‌ಗೆ ಸಂಬಂಧಿಸಿದಂತೆ ಹೊರಡಿಸಲಾದ ಆದೇಶಗಳು ಮತ್ತು ನಿರ್ಧಾರಗಳಿಗೆ ಸಂಧು ಮತ್ತು ಜೋಶಿ ಅವರು ಕನಿಷ್ಠ 14 ಬಾರಿಯಾದರೂ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದ ಬೆನ್ನಲ್ಲೇ ಸೆಪ್ಟೆಂಬರ್ 26 ರ ಬೆಳವಣಿಗೆಗಳು ಸಂಭವಿಸಿವೆ. ಸೆಪ್ಟೆಂಬರ್ 26 ರ ತನ್ನ ಹೇಳಿಕೆಯಲ್ಲಿ ಚುನಾವಣಾ ಆಯೋಗವು, ಎಸ್‌ಐಆರ್‌ಗೆ ಸಂಬಂಧಿಸಿದ ಆದೇಶಗಳು ಮೂವರೂ ಚುನಾವಣಾ ಆಯುಕ್ತರ ಸರ್ವಸಮ್ಮತ ಅನುಮೋದನೆಯನ್ನು ಹೊಂದಿದ್ದವು ಎಂದು ತಿಳಿಸಿದೆ(ಏಜೆನ್ಸೀಸ್​).