ಚೆನ್ನಾಗಿ ಊಟ ಮಾಡಿ, ನಿದ್ದೆ ಮಾಡಿ... ನಾಳೆ ನೋಡೋಣ!: ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಸೂರ್ಯ ಸ್ಟೈಲಿಶ್ ಉತ್ತರವಿದು..?
ಕೊಲೊಂಬೊ: ವಿಶ್ವ ಕ್ರಿಕೆಟ್‌ನ ಅತ್ಯಂತ ರೋಚಕ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ಇಂಡೋ-ಪಾಕ್ ಪಂದ್ಯದ ಬಗ್ಗೆ ಮಾತನಾಡಿರುವ ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್(SuryakumarYadav), ಇನ್ನು 24 ಗಂಟೆ ಕಾಯಿರಿ. ಇವತ್ತು ಚೆನ್ನಾಗಿ ಊಟ ಮಾಡಿ, ನೆಮ್ಮದಿಯಾಗಿ ನಿದ್ದೆ ಮಾಡಿ, ನಾಳೆ ಮೈದಾನದಲ್ಲಿ ಏನಾಗುತ್ತದೆ ಎಂದು ನೀವೇ ನೋಡಿ ಎಂದು ಹೇಳುವ ಮೂಲಕ ಗುಟ್ಟು ಬಿಟ್ಟುಕೊಡದೆ ಕುತೂಹಲ ಹೆಚ್ಚಿಸಿದ್ದಾರೆ.
ಹಸ್ತಲಾಘವದ ಸಸ್ಪೆನ್ಸ್: SKY ಹೇಳಿದ್ದೇನು..?
ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದೆ. ಕಳೆದ ಏಷ್ಯಾ ಕಪ್‌ನಲ್ಲಿ ಭಾರತೀಯ ಆಟಗಾರರು ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡುವುದನ್ನು ಬಿಟ್ಟಿದ್ದರು. ನಾಳೆಯ ಪಂದ್ಯದಲ್ಲೂ ಇದು ಮುಂದುವರಿಯುತ್ತದೆಯೇ ಎಂಬ ಪ್ರಶ್ನೆಗೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅತ್ಯಂತ ಚಾಣಾಕ್ಷ ಉತ್ತರ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೂರ್ಯ, ಇನ್ನು 24 ಗಂಟೆ ಕಾಯಿರಿ. ಚೆನ್ನಾಗಿ ಊಟ ಮಾಡಿ, ನೆಮ್ಮದಿಯಾಗಿ ನಿದ್ದೆ ಮಾಡಿ, ನಾಳೆ ಏನಾಗುತ್ತದೆ ಎಂದು ನೀವೇ ನೋಡಿ ಎಂದು ಹೇಳುವ ಮೂಲಕ ಸಸ್ಪೆನ್ಸ್ ಕಾಯ್ದಿರಿಸಿದ್ದಾರೆ. ಈ ಮೂಲಕ ಮೈದಾನದಲ್ಲಿ ಭಾರತದ ನಿಲುವು ಏನು ಎಂಬುದು ಟಾಸ್ ಸಮಯದಲ್ಲಿ ಮಾತ್ರ ತಿಳಿಯಲಿದೆ.
ಅಭಿಷೇಕ್ ಕಣಕ್ಕೆ: ಪಾಕ್ ನಾಯಕನ ಆಸೆಗೆ ಸೂರ್ಯ ಅಸ್ತು..!
ಭಾರತದ ಸ್ಪೋಟಕ ಓಪನರ್ ಅಭಿಷೇಕ್ ಶರ್ಮಾ ಹೊಟ್ಟೆಯ ಸೋಂಕಿನಿಂದ ಬಳಲುತ್ತಿದ್ದರು. ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಗಾ, ಭಾರತದ ಪೂರ್ಣ ಬಲದ ತಂಡದ ವಿರುದ್ಧ ಆಡಲು ಬಯಸುತ್ತೇವೆ, ಅಭಿಷೇಕ್ ಚೇತರಿಸಿಕೊಳ್ಳಲಿ ಎಂದು ಆಶಿಸಿದ್ದರು. ಇದಕ್ಕೆ ಸೂರ್ಯಕುಮಾರ್ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ್ದು, ಪಾಕಿಸ್ತಾನಕ್ಕೆ ಅಭಿಷೇಕ್ ಆಡುವುದು ಬೇಕಿದ್ದರೆ, ಖಂಡಿತ ಅವರು ನಾಳೆ ಆಡುತ್ತಾರೆ ಎಂದು ಅವರ ಲಭ್ಯತೆಯನ್ನು ಖಚಿತಪಡಿಸಿದ್ದಾರೆ. ಇದು ಭಾರತದ ಬ್ಯಾಟಿಂಗ್ ಶಕ್ತಿಗೆ ಆನೆಬಲ ಬಂದಂತಾಗಿದೆ.
ಪಾಕಿಸ್ತಾನಕ್ಕೆ ಪಿಚ್ ಲಾಭ..?
ಈಗಾಗಲೇ ಕೊಲೊಂಬೊದಲ್ಲಿ ಪಂದ್ಯಗಳನ್ನು ಆಡಿರುವ ಪಾಕಿಸ್ತಾನ ತಂಡಕ್ಕೆ ಇಲ್ಲಿನ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಅರಿವಿದೆ ಎಂದು ಸೂರ್ಯ ಒಪ್ಪಿಕೊಂಡಿದ್ದಾರೆ. ಅವರು ಇಲ್ಲಿ ಹೆಚ್ಚು ಪಂದ್ಯ ಆಡಿರುವುದರಿಂದ ಅವರಿಗೆ ಸ್ವಲ್ಪ ಅನುಕೂಲವಿದೆ. ಆದರೆ ನಮ್ಮ ಗಮನ ನಮ್ಮ ಆಟದ ಮೇಲಿದೆಯೇ ಹೊರತು ಅವರ ಮೇಲಲ್ಲ ಎಂದು ಸೂರ್ಯ ಸ್ಪಷ್ಟಪಡಿಸಿದ್ದಾರೆ.
ಹಿನ್ನೆಲೆ ಮತ್ತು ರಾಜಕೀಯ ಬಿಕ್ಕಟ್ಟು
ಪಾಕಿಸ್ತಾನ ಸರ್ಕಾರ ಮೊದಲು ಈ ಪಂದ್ಯವನ್ನು ಬಹಿಷ್ಕರಿಸಲು ಕರೆ ನೀಡಿತ್ತು. ಆದರೆ ಕೊನೆಯ ಕ್ಷಣದಲ್ಲಿ ಯು-ಟರ್ನ್ ಹೊಡೆದು ಪಂದ್ಯಕ್ಕೆ ಅನುಮತಿ ನೀಡಿದೆ. ಆದರೂ, ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಅಭಿಮಾನಿಗಳು ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ತಂಡದ ಮೇಲೆ ಮಾನಸಿಕ ಒತ್ತಡ ಹೆಚ್ಚಿದೆ,(ಏಜೆನ್ಸೀಸ್).