ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ
- ಶೇ.80ರಷ್ಟು ಪೆಟ್ರೋಲ್ ಮತ್ತು 20ರಷ್ಟು ಎಥೆನಾಲ್
- ಇಂಜಿನ್ ಡ್ಯಾಮೇಜ್, ಮೈಲೇಜ್ ಡ್ರಾಪ್ ವದಂತಿಗಳಿಗೆ ಕಿವಿಗೊಡಬೇಡಿ ಎಂದ ಕೇಂದ್ರ ಸಚಿವರು
- ಅಗ್ಗದ ಬೆಲೆಗೆ E85 ಶೀಘ್ರದಲ್ಲೇ ಲಭ್ಯ
ನವದೆಹಲಿ: ಈಗಾಗಲೇ ಪೆಟ್ರೋಲ್ಗೆ ಶೇ.20ರಷ್ಟು ಎಥೆನಾಲ್ ಮಿಕ್ಸ್ ಮಾಡುತ್ತಿರುವುದಕ್ಕೆ ದೇಶವ್ಯಾಪಿ ಅನೇಕ ವಾಹನ ಸವಾರರು ಕೇಂದ್ರ ಸರ್ಕಾರದ ನಡೆಗೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಥೆನಾಲ್ ಮಿಶ್ರಿತ ಇಂಧನದಿಂದ 2023ಕ್ಕೂ ಹಿಂದಿನ ವಾಹನಗಳ ಇಂಜಿನ್ಗೆ ಪೆಟ್ಟು ಮತ್ತು ಮೈಲೇಜ್ ಕುಸಿತವಾಗುತ್ತಿದೆ ಎಂದು ಅನೇಕರು ಗಂಭೀರವಾಗಿ ಆರೋಪಿಸಿದ್ದಾರೆ.
ವಾಹನ ಸವಾರರು ಅದರಲ್ಲೂ 2023ರ ಕೆಳಗಿನ ವಾಹನಗಳ ಮಾಲೀಕರು, ಎಥೆನಾಲ್ ಮಿಶ್ರಿತ ಪೆಟ್ರೋಲ್ನಿಂದ ನಮಗೆ ಸಮಸ್ಯೆಗಳು ಕಾಡುತ್ತಿವೆ. ಈ10 ಹಾಕಿ ಇಲ್ಲವೇ ಬಿಟ್ಟುಬಿಡಿ ಎಂದು ಹೇಳುತ್ತಿರುವ ಹಲವಾರು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಈ ವಿಷಯ ಸರ್ಕಾರದ ಬಾಗಿಲನ್ನು ಬಡಿದ ಬೆನ್ನಲ್ಲೇ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರತಿಕ್ರಿಯಿಸಿದ್ದಾರೆ.
ಎಥೆನಾಲ್ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ. ಇದರ ಬಳಕೆಯಿಂದ ಇಂಜಿನ್ ಹಾನಿ, ಇತರೆ ಸಮಸ್ಯೆ ಎಂಬ ಮಾತುಗಳು ಕೇವಲ ವದಂತಿಯಷ್ಟೇ. ಪರಿಸರ ಸಂರಕ್ಷಣೆ ಮತ್ತು ಇಂಧನ ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬನೆಯತ್ತ ಕೊಂಡೊಯ್ಯುವ ಪ್ರಮುಖ ಯೋಜನೆ ಇದಾಗಿದೆ. ಸುಜುಕಿ ಈಗಾಗಲೇ 1.5 ಕೋಟಿ ವಾಹನಗಳಿಗೆ ಸೇವೆ ಒದಗಿಸಿದೆ. ಆದರೆ, ಎಥೆನಾಲ್ನಿಂದಾಗಿ ಇಂಜಿನ್ ಹಾನಿಯಾದ ಒಂದೇ ಒಂದು ಪ್ರಕರಣವೂ ಇಲ್ಲಿಯವರೆಗೆ ದಾಖಲಾಗಿಲ್ಲ ಎಂದರು.
ವಾಹನ ತಯಾರಕರು ಮತ್ತು ಮೆಕ್ಯಾನಿಕ್‌ಗಳು ಯಾವುದೇ ಪ್ರಮುಖ ಸಮಸ್ಯೆಗಳನ್ನು ಗುರುತಿಸಿಲ್ಲ. ಈ20 ಪೆಟ್ರೋಲ್ ಬಳಸಿದರೆ ವಾಹನದ ವಾರಂಟಿ ರದ್ದಾಗುತ್ತದೆ ಮತ್ತು ವಿಮಾ ಕಂಪನಿಗಳು ಕ್ಲೈಮ್‌ಗಳನ್ನು ರಿಜೆಕ್ಟ್ ಮಾಡುತ್ತವೆ ಎಂಬ ದೂರುಗಳು ಕೇಳಿಬಂದಿವೆ. ಈಗ ಅಂತಹ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆರಿಹರಿಸಲಾಗಿದೆ. ವಾರಂಟಿ ಅಥವಾ ವಿಮೆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ವಾಹನ ಸವಾರರಿಗೆ ಭರವಸೆ ನೀಡಿದರು.
ಮೈಲೇಜ್ ಡ್ರಾಪ್ ಆಗಬಹುದು! ಆದ್ರೆ...
ಎಥೆನಾಲ್ ಸಾಮಾನ್ಯ ಪೆಟ್ರೋಲ್ಗಿಂತ ಸ್ವಲ್ಪ ಕಡಿಮೆ ಕ್ಯಾಲೋರಿಫಿಕ್ ಮೌಲ್ಯವನ್ನು ಹೊಂದಿರುವುದರಿಂದ ಮೈಲೇಜ್ನಲ್ಲಿ ಸ್ವಲ್ಪ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಸಚಿವರು ಒಪ್ಪಿಕೊಂಡರು. ಆದರೆ, ಎಥೆನಾಲ್ನ ಲಾಭವೇ ಹೆಚ್ಚು ಎಂದು ಮತ್ತೊಮ್ಮೆ ವಾದಿಸಿದರು. ಕೇವಲ ಮೈಲೇಜ್ ಆಧಾರಿಸಿ ನಿರ್ಧಾರ ಕೈಗೊಳ್ಳಬೇಡಿ. ಪರಿಸರ ಸ್ನೇಹಿ ತಂತ್ರಜ್ಞಾನದತ್ತ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದರು.
ಶೀಘ್ರದಲ್ಲೇ ಅಗ್ಗದ E85
ಗ್ರಾಹಕರಿಗೆ ಸಮಾಧಾನ ತರುವ ಮತ್ತೊಂದು ಪ್ರಮುಖ ವಿಷಯವನ್ನು ಪ್ರಸ್ತಾಪಿಸಿದ ಸಚಿವರು, ಶೇ.85ರಷ್ಟು ಎಥೆನಾಲ್ ಅನ್ನು ಒಳಗೊಂಡಿರುವ ಈ85 ಇಂಧನವನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು. ಈ ಇಂಧನವು ಲೀಟರ್ಗೆ 20 ರೂ. ದರದಲ್ಲಿ ಗ್ರಾಹಕರ ಕೈಸೇರುವ ಸಾಧ್ಯತೆ ಇದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಫ್ಲೆಕ್ಸ್-ಇಂಧನ ವಾಹನಗಳು (ಎಫ್‌ಎಫ್‌ವಿ) ಮಾತ್ರ ಈ85 ಅನ್ನು ಬಳಸಬಹುದು ಎಂದು ಸ್ಪಷ್ಟಪಡಿಸಿದರು.
E25 ಇನ್ನೂ ಟೆಸ್ಟಿಂಗ್ ಹಂತದಲ್ಲಿದೆ
ಪ್ರಸ್ತುತ ಕೇವಲ ಪ್ರಾಯೋಗಿಕ ಹಂತದಲ್ಲಿರುವುದರಿಂದ ಈ20 ಫೈನಲ್ ಎಂದು ನೀವೇ ನಿರ್ಧರಿಸಬೇಡಿ. ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಭವಿಷ್ಯದಲ್ಲಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ಎಥೆನಾಲ್ ನೀತಿಯು ಎಲೆಕ್ಟ್ರಿಕ್ ವಾಹನಗಳಿಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗುವುದಿಲ್ಲ. ನಾನು ಎಲೆಕ್ಟ್ರಿಕ್ ವಾಹನಗಳ ಯೋಜನೆಗೆ ಸಂಪೂರ್ಣ ಬೆಂಬಲಿಸುತ್ತೇನೆ. ಅಂತೆಯೇ ಜೈವಿಕ ಇಂಧನ ಮತ್ತು ಎಲೆಕ್ಟ್ರಿಕ್ ವಾಹನಗಳು ಒಟ್ಟಾಗಿ ಭಾರತದ ಸಾರಿಗೆ ಕ್ಷೇತ್ರದ ಭವಿಷ್ಯವನ್ನು ನಿರ್ಮಿಸುತ್ತವೆ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ,(ಏಜೆನ್ಸೀಸ್).