ಇ20 ಜನತಾ ಪಾರ್ಟಿ 
ದೇಶ

ಧರ್ಮೇಂದ್ರ ಪ್ರಧಾನ್​ ಆಯ್ತು ಈಗ ನಿತಿನ್​ ಗಡ್ಕರಿ ಮೇಲೆ ಕಣ್ಣು... ಈ ಬಾರಿ ಸಮರ ಸಾರಿದ್ದು CJP ಅಲ್ಲ EJP!

ಪ್ರಮುಖ ಮುಖ್ಯಾಂಶಗಳು

  • ನೀಟ್​ ಸೋರಿಕೆ ವಿರುದ್ಧ ಸಿಜೆಪಿ ಪ್ರತಿಭಟನೆ ಮುಗಿದ ಬೆನ್ನಲ್ಲೇ ಗಾಡಿ ಮಾರ್ಚ್​
  • ದೆಹಲಿಯಲ್ಲಿ ಬೃಹತ್ ವಾಹನಗಳ ರ‍್ಯಾಲಿಗೆ 'ಟೀಮ್ ಭಾರತ್' ಕರೆ
  • ಈ ಬಾರಿ ಸಮರ ಸಾರಿದ್ದು CJP ಅಲ್ಲ EJP
ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಿರಂತರವಾಗಿ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸಿದ ಸಿಜೆಪಿ ಪಕ್ಷವು ಕಡೆಗೂ ಕೇಂದ್ರ ಶಿಕ್ಷಣ ಸಚಿವ ಸ್ಥಾನದಿಂದ ಧರ್ಮೇಂದ್ರ ಪ್ರಧಾನ್ ಅವರನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಯಿತು. ಸದ್ಯ ಒಂದು ತಲೆಬಿಸಿ ಮುಗಿತು ಎಂದು ಕೇಂದ್ರ ಸರ್ಕಾರ ನಿಟ್ಟುಸಿರು ಬಿಡುವಷ್ಟರಲ್ಲೇ ಮತ್ತೊಂದು ಗಂಡಾಂತರ ಎದುರಾಗಿದೆ. ಅದೇ ಈ ಈಜೆಪಿ!
ಧರ್ಮೇಂದ್ರ ಪ್ರಧಾನ್​ರನ್ನು ಟಾರ್ಗೆಟ್​ ಮಾಡಿ ರಾಜೀನಾಮೆ ಕೊಡುವಂತೆ ಮಾಡಿದ ಸಿಜೆಪಿ ಪಕ್ಷದಂತೆಯೇ ಈಗ ಇಜೆಪಿ ಅಂದರೆ ಇ20 ಜನತಾ ಪಾರ್ಟಿ ಎಂಬ ಹೊಸ ಪಕ್ಷವು, ಕೇಂದ್ರ ಸರ್ಕಾರ ಪ್ರಸ್ತುತ ಜಾರಿಗೊಳಿಸಿರುವ ಇ20 ಪೆಟ್ರೋಲ್​ ನೀತಿಯನ್ನು ವಿರೋಧಿಸಿ ಬೃಹತ್ ರ‍್ಯಾಲಿಗೆ ಕರೆ ನೀಡಿದೆ. 2023ರ ಕೆಳಗಿನ ವಾಹನಗಳಿಗೆ ಉಂಟಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವಂತೆ ಒಂದಷ್ಟು ಬೇಡಿಕೆಗಳನ್ನು ಮುಂದಿಟ್ಟು ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಟೀಮ್ ಭಾರತ್ ತಿಳಿಸಿದೆ. 
ಸಿಜೆಪಿಯ ಹಾದಿ ಹಿಡಿದಿರುವ ಇಜೆಪಿ, ಸೋಷಿಯಲ್ ಮೀಡಿಯಾದಲ್ಲಿ ಹೊಸ ಪಕ್ಷ ಕಟ್ಟಿರುವುದಾಗಿ ಹೇಳಿಕೊಂಡಿದೆ. ಇದು ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ದೊಡ್ಡ ಎಚ್ಚರಿಕೆಯಾಗಿದೆ. ಇ20 ಜನತಾ ಪಾರ್ಟಿ ಎಂಬ ಹೆಸರಿನಲ್ಲಿ ಖಾತೆಯೊಂದು ಓಪನ್ ಆಗಿದ್ದು, ಸದ್ಯ 34 ಸಾವಿರ ಮಂದಿ ಅದಾಗಲೇ ಫಾಲೋವರ್ಸ್​ ಸಂಖ್ಯೆಗೆ ಸೇರ್ಪಡೆಯಾಗಿದ್ದಾರೆ. ಕೆಲವೇ ಸಮಯದಲ್ಲಿ ಯುವಕರು ಪಕ್ಷ ಸೇರಿಕೊಳ್ಳುತ್ತಿದ್ದು, ಇದೇ ಜುಲೈ 31ರಂದು ದೆಹಲಿಯಲ್ಲಿ ನಡೆಯಲಿರುವ ಬೃಹತ್​ ರ‍್ಯಾಲಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.
'ಲೇಟೆಸ್ಟ್ಲಿ' ವರದಿ ಪ್ರಕಾರ, ನೀಟ್​ ಸೋರಿಕೆ ಹಾಗೂ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಟ್ಟು ಹಿಡಿದಿದ್ದ ಸಿಜೆಪಿ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ ಅಂತ್ಯಗೊಂಡ ಬೆನ್ನಲ್ಲೇ ಇದೇ ಜುಲೈ 31ರಂದು ದೆಹಲಿಯಲ್ಲಿ ಇ20 ಪೆಟ್ರೋಲ್ ನೀತಿಯನ್ನು ವಿರೋಧಿಸಿ ಬೃಹತ್ ವಾಹನ ಪ್ರತಿಭಟನೆಗೆ ಕರೆ ನೀಡಲಾಗಿದೆ. 'ಟೀಮ್ ಭಾರತ್' ಎಂಬ ನಾಗರಿಕ ಸಂಘಟನೆಯು 'ಗಾಡಿ ಮಾರ್ಚ್, ಗಾಂಧಿ ಮಾರ್ಚ್' ಹೆಸರಿನಲ್ಲಿ ಈ ವಿನೂತನ ರ‍್ಯಾಲಿಯನ್ನು ಆಯೋಜಿಸಿದೆ.
ರಾಜಕೀಯ ವಿಶ್ಲೇಷಕ ಹಾಗೂ 'ಟೀಮ್ ಭಾರತ್'ನ ರೂವಾರಿ ತಹ್ಸೀನ್ ಪೂನಾವಾಲಾ ಈ ಕುರಿತಂತೆ ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಬೃಹತ್ ಪ್ರತಿಭಟನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ ಮುಖ್ಯವಾಗಿ, ರ‍್ಯಾಲಿಯಲ್ಲಿ ಕಾರು ಹಾಗೂ ಬೈಕ್ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ವಿನಂತಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಯುವಜನತೆ ರೀ-ಟ್ವೀಟ್​ ಮಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ.

6 ಪ್ರಮುಖ ಬೇಡಿಕೆಗಳೇನು?

  1. ಇ10 ಪೆಟ್ರೋಲ್‌ಗೆ ತಾಂತ್ರಿಕವಾಗಿ ವಿನ್ಯಾಸಗೊಳಿಸಲಾದ ಹಳೆಯ ವಾಹನಗಳಿಗೆ ಸೂಕ್ತವಾದ ಇ10 ಇಂಧನವನ್ನು ತಕ್ಷಣವೇ ಲಭ್ಯಗೊಳಿಸಬೇಕು. 
  2. ಪ್ರಸ್ತುತ ಮಾರಾಟದಲ್ಲಿರುವ ಇ20 ಪೆಟ್ರೋಲ್ ದರದಲ್ಲಿ ಶೇ.20ರಷ್ಟು ಬೆಲೆ ಇಳಿಕೆ ಮಾಡಬೇಕು
  3. ಪ್ರಸ್ತುತ ಲೀಟರ್‌ಗೆ ಸುಮಾರು 165ರಿಂದ 170 ರವರೆಗೆ ಮಾರಾಟವಾಗುತ್ತಿರುವ ಎಥನಾಲ್ ರಹಿತ ಶುದ್ಧ ಪೆಟ್ರೋಲ್ ಬೆಲೆಯನ್ನು ಇಳಿಸಬೇಕು
  4. ಇ20 ಇಂಧನ ನೀತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಹಾಗೂ ಅಧ್ಯಯನ ವರದಿಗಳನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಬೇಕು
  5. 2023ರ ಹಿಂದಿನ ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು
  6. ನಿತಿನ್ ಗಡ್ಕರಿ ಅವರು ಎಥೆನಾಲ್‌ಗೆ ಸಂಬಂಧಿಸಿದಂತೆ ಹಿತಾಸಕ್ತಿ ಸಂಘರ್ಷದಲ್ಲಿ ತೊಡಗಿದ್ದಾರೆ, (ಏಜೆನ್ಸೀಸ್).