ಇ-ರಿಕ್ಷಾಗೆ ಬೆಂಕಿ ಹಚ್ಚುತ್ತಿರುವ ಮಹಿಳೆ, ಉರಿಯುತ್ತಿರುವ ಇ-ರಿಕ್ಷಾ 
ದೇಶ

ಬಡವನ ಪಾಲಿಗೆ ಬೆಂಕಿಯಾದ ಇ-ರಿಕ್ಷಾ: ಏಜೆನ್ಸಿ ಮುಂದೆ ರಿಕ್ಷಾ ಸುಟ್ಟು ಹಾಕಿದ ಮಹಿಳೆ! ವಿಡಿಯೋ ವೈರಲ್ | E-Rickshaw

ಪ್ರಮುಖ ಮುಖ್ಯಾಂಶಗಳು

  • ಬಡತನದಿಂದ ಹೊರಬರಲು ಖರೀದಿಸಿದ್ದ ಇ-ರಿಕ್ಷಾ
  • ಪದೇ-ಪದೇ ರಿಕ್ಷಾ ಕೆಟ್ಟು ನಿಲ್ಲುತ್ತಿದ್ದರಿಂದ ಬೇಸತ್ತಿದ್ದ ಮಹಿಳೆ
  • ಮನನೊಂದ ಮಹಿಳೆಯಿಂದ ರಿಕ್ಷಾಗೆ ಬೆಂಕಿ ಇಟ್ಟ ಮಹಿಳೆ
ಶಿವಪುರಿ: ಬಡತನದಿಂದ ಮೇಲೆಳಲು ಖರೀದಿಸಿದ ಇ-ರಿಕ್ಷಾ (E-Rickshaw) ಪದೇ ಪದೇ ಕೆಟ್ಟು ನಿಲ್ಲುತ್ತಿದ್ದನ್ನು ಸಹಿಸದ ಮಹಿಳೆಯೊಬ್ಬಳು ರಿಕ್ಷಾ ಖರೀದಿ ಮಾಡಿದ ಏಜೆನ್ಸಿಯ ಮುಂದೆಯೇ ವಾಹನಕ್ಕೆ ಬೆಂಕಿಇಟ್ಟ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ವರದಿಯಾಗಿದೆ.
ಅದು ಕೇವಲ ಒಂದು ವಾಹನವಾಗಿರಲಿಲ್ಲ; ಆ ಕುಟುಂಬದ ಪಾಲಿಗೆ ಬಡತನದಿಂದ ಹೊರಬರಲು ಸಹಾಯವಾಗಬಲ್ಲ ಆಶಾಕಿರಣವಾಗಿತ್ತು. ತನ್ನ ಮೂವರು ಮಕ್ಕಳ ಹಸಿವು ನೀಗಿಸಲು, ದಿನಗೂಲಿ ನಂಬಿ ಬದುಕುತ್ತಿದ್ದ ದಂಪತಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಒಂದು ಇ-ರಿಕ್ಷಾ ಖರೀದಿಸಿದ್ದರು.
ಆದರೆ, ಆ ರಿಕ್ಷಾವೇ ಇಂದು ಅವರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಕೊನೆಗೆ ಬೇಸತ್ತ ಮಹಿಳೆಯೊಬ್ಬರು ಏಜೆನ್ಸಿಯ ಮುಂದೆಯೇ ಪೆಟ್ರೋಲ್ ಸುರಿದು ತಮ್ಮ ರಿಕ್ಷಾವನ್ನು ಸುಟ್ಟು ಹಾಕಿದ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ.

ಏನಿದು ಘಟನೆ?

ಮಧ್ಯಪ್ರದೇಶದ ಶಿವಪುರಿಯ ಫಕ್ಕರ್ ಕಾಲೋನಿಯ ನಿವಾಸಿ ಗುಡಿಯಾ ಮಹೌರ್ ಮತ್ತು ಅವರ ಪತಿ ನಾರಾಯಣ್ ಮಹೌರ್ ದಿನಗೂಲಿ ಕಾರ್ಮಿಕರು. ಪ್ರತಿದಿನದ ಅನಿಶ್ಚಿತ ಆದಾಯದಿಂದ ಬೇಸತ್ತಿದ್ದ ಅವರು, ಸ್ವಂತ ಕಾಲಿನ ಮೇಲೆ ನಿಲ್ಲಲು ನಿರ್ಧರಿಸಿ ಸುಮಾರು 2.5 ಲಕ್ಷ ರೂಪಾಯಿ ಖರ್ಚು ಮಾಡಿ ಒಂದು ಹೊಸ ಇ-ರಿಕ್ಷಾ ಖರೀದಿಸಿದ್ದರು. ಈ ವಾಹನದಿಂದ ಬರುವ ಆದಾಯದಲ್ಲಿ ಮಕ್ಕಳನ್ನು ಚೆನ್ನಾಗಿ ಓದಿಸಬಹುದು ಎಂಬುದು ಅವರ ಆಸೆಯಾಗಿತ್ತು.
ಆದರೆ, ರಿಕ್ಷಾ ಮನೆಗೆ ಬಂದ ಎರಡು ತಿಂಗಳಲ್ಲೇ ಕೈಕೊಡಲು ಆರಂಭಿಸಿತು. ಆಸೆಯಿಂದ ತಂದ ವಾಹನ ಪದೇ ಪದೇ ರಿಪೇರಿಗೆ ಬರತೊಡಗಿತು. ಕಳೆದ ನಾಲ್ಕು ತಿಂಗಳಿನಿಂದ ಈ ಇ-ರಿಕ್ಷಾ ಓಡುವುದಕ್ಕಿಂತ ಮನೆಯ ಮುಂದೆ ನಿಂತಿದ್ದೇ ಹೆಚ್ಚು ಎನ್ನುತ್ತಾರೆ ಗುಡಿಯಾ ಮಹೌರ್.
ಏಜೆನ್ಸಿಯ ನಿರ್ಲಕ್ಷ್ಯಕ್ಕೆ ಬಲಿಯಾದ ಬಡವನ ಕನಸು!
ಗುಡಿಯಾ ಅವರು ವಾಹನ ಖರೀದಿಸಿದ ಏಜೆನ್ಸಿಗೆ ಹತ್ತಾರು ಬಾರಿ ಅಲೆದಾಡಿದರು. ನಮ್ಮ ವಾಹನ ಸರಿಪಡಿಸಿಕೊಡಿ, ಇಲ್ಲದಿದ್ದರೆ ಸಾಲ ತೀರಿಸುವುದು ಹೇಗೆ? ಎಂದು ಅಂಗಲಾಚಿದರು. ಆದರೆ, ಏಜೆನ್ಸಿಯವರು ಮಾತ್ರ ಇವರ ಮಾತಿಗೆ ಕಿಮ್ಮತ್ತೇ ಕೊಡಲಿಲ್ಲ. ಸರಿಪಡಿಸಲು ನಿರಾಕರಿಸಿ ಅವರನ್ನು ಸತಾಯಿಸುತ್ತಲೇ ಬಂದರು.
ಒಂದೆಡೆ ಕೈಕೊಟ್ಟ ವಾಹನ, ಇನ್ನೊಂದೆಡೆ ತಲೆಯ ಮೇಲೆ ಕುಳಿತ ಸಾಲದ ಹೊರೆ. ಇ-ರಿಕ್ಷಾ ಓಡುತ್ತಿಲ್ಲದಿದ್ದರೂ, ಬ್ಯಾಂಕಿನವರು ಮಾತ್ರ ಕಂತು (EMI) ಕಟ್ಟುವಂತೆ ಪೀಡಿಸುತ್ತಿದ್ದರು. ಸಾಲ ತೀರಿಸಲಾಗದೆ, ಮಕ್ಕಳನ್ನು ಸಲಹಲಾಗದೆ ಕಂಗೆಟ್ಟ ಗುಡಿಯಾ, ಕೊನೆಗೆ ರೊಚ್ಚಿಗೆದ್ದು ಜನನಿಬಿಡ ಮಾರುಕಟ್ಟೆಯಲ್ಲಿರುವ ಅದೇ ಏಜೆನ್ಸಿಯ ಮುಂದೆ ರಿಕ್ಷಾವನ್ನು ನಿಲ್ಲಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

ವೈರಲ್ ಆಯ್ತು ವಿಡಿಯೋ: ಜನರ ಆಕ್ರೋಶ

ಮಹಿಳೆ ತನ್ನದೇ ವಾಹನಕ್ಕೆ ಬೆಂಕಿ ಹಚ್ಚುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಣ್ಣೀರು ಹಾಕುತ್ತಿದ್ದಾರೆ. ಕಂಪನಿಗಳು ಲಾಭ ಮಾಡಿಕೊಳ್ಳುತ್ತವೆ, ಆದರೆ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತವೆ ಎಂದು ಜನರು ಏಜೆನ್ಸಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಗುಡಿಯಾ ಮಾತುಗಳಲ್ಲಿ ಎದ್ದು ಕಾಣುತ್ತಿದ್ದ ನೋವು

ನನ್ನ ಹತ್ತಿರ ಬೇರೆ ದಾರಿಯೇ ಇರಲಿಲ್ಲ. ಸಾಲ ತೀರಿಸಲು ಹಣವಿಲ್ಲ, ರಿಕ್ಷಾ ರಿಪೇರಿಯಾಗುತ್ತಿಲ್ಲ. ಮನೆಯಲ್ಲಿ ಮಕ್ಕಳು ಹಸಿವಿನಿಂದ ಇದ್ದಾಗ ನಾನು ಈ ಕಬ್ಬಿಣದ ತುಂಡನ್ನು ಏನು ಮಾಡಲಿ? ಎಂದು ಅವರು ಆಕ್ರಂದನ ವ್ಯಕ್ತಪಡಿಸಿದ್ದಾರೆ.
ಇಂದು ನಮ್ಮ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಹವಾ ಜೋರಾಗಿದೆ. ಆದರೆ, ಇಂತಹ ಕಂಪನಿಗಳ ಆಫ್ಟರ್ ಸೇಲ್ಸ್ ಸರ್ವಿಸ್ ಎಷ್ಟರ ಮಟ್ಟಿಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಬಡವನೊಬ್ಬ ತನ್ನ ಜೀವನದ ಅತಿ ದೊಡ್ಡ ಉಳಿತಾಯವನ್ನು ಹಾಕಿ ವಾಹನ ಖರೀದಿಸಿದಾಗ, ಕಂಪನಿಗಳು ಅದಕ್ಕೆ ಸರಿಯಾದ ಸ್ಪಂದನೆ ನೀಡದಿದ್ದರೆ ಇಂತಹ ದುರಂತಗಳು ಸಂಭವಿಸುವುದು ಸಾಮಾನ್ಯವಾಗಿದೆ,(ಏಜನ್ಸೀಸ್).