ಡಿಸಿಎಂ ಏಕನಾಥ್ ಶಿಂಧೆ 
ದೇಶ

ಅಮಿತ್ ಶಾ ಭೇಟಿ; ಬಿಜೆಪಿ ಮತ್ತು ಶಿವಸೇನೆ ಸಂಘರ್ಷ ಮಾಧ್ಯಮಗಳ ಸೃಷ್ಟಿ; ಏಕನಾಥ್ ಶಿಂಧೆ | DyCM Eknath Shinde

ನವದೆಹಲಿ: ಮಹಾರಾಷ್ಟ್ರದ ಮಹಾಯುತಿ ಸರ್ಕಾರದಲ್ಲಿ ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳ ನಡುವೆಯೂ ಶಿವಸೇನಾ ಮುಖ್ಯಸ್ಥ ಮತ್ತು ಡಿಸಿಎಂ ಏಕನಾಥ್ ಶಿಂಧೆ(DyCM Eknath Shinde) ದೆಹಲಿಯಲ್ಲಿ ಅಮಿತ್​ ಶಾ ಭೇಟಿ ಮಾಡಿದ್ದಾರೆ ಎಂದು ಬುಧವಾರ(ನ. 26) ವರದಿಯಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಭೇಟಿಯ ಕುರಿತು ಮಾತನಾಡಿರುವ ಅವರು, ರಾಜ್ಯ ಬಿಜೆಪಿ ನಾಯಕರ ವಿರುದ್ಧ ದೂರು ನೀಡಲು ದೆಹಲಿಗೆ ಹೋಗುವ ವ್ಯಕ್ತಿ ನಾನಲ್ಲ. ಮಹಾಯುತಿ ಮೈತ್ರಿಕೂಟದೊಳಗಿನ ಯಾವುದೇ ಸಮಸ್ಯೆಗಳನ್ನು ರಾಜ್ಯ ಮಟ್ಟದಲ್ಲಿ ಬಗೆಹರಿಸಲಾಗುವುದು. ಮತ್ತು ಬಿಜೆಪಿ-ಶಿವಸೇನಾ ಸಂಘರ್ಷ ಅನ್ನೋದು ಮಾಧ್ಯಮಗಳ ಸೃಷ್ಟಿ ಎಂದು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದ ನಿರ್ಧಾರ ತೆಗೆದುಕೊಳ್ಳುವಲ್ಲಿ ತಮ್ಮನ್ನು ಕಡೆಗಣಿಸಲಾಗಿದ್ದರಿಂದ ಶಿಂಧೆ ಅತೃಪ್ತರಾಗಿದ್ದರು ಮತ್ತು ಆದ್ದರಿಂದ ಶಾ ಅವರಿಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ದೆಹಲಿಗೆ ಧಾವಿಸಿದ್ದರು ಎಂಬ ವರದಿಗಳ ನಂತರ ಶಿಂಧೆ ಈ ಸ್ಪಷ್ಟೀಕರಣ ನೀಡಿದ್ದಾರೆ.
ಶಿವಸೇನೆ ಮತ್ತು ಬಿಜೆಪಿ ನಡುವಿನ ಘರ್ಷಣೆ ಮಾಧ್ಯಮಗಳ ಸೃಷ್ಟಿ. ಹಿಂದುತ್ವ ಸಿದ್ಧಾಂತವನ್ನು ಅನುಸರಿಸುವ ಎರಡೂ ಮೈತ್ರಿಕೂಟದ ಪಾಲುದಾರರ ನಡುವೆ ಯಾವುದೇ ಸಮಸ್ಯೆಗಳಿಲ್ಲ. ಸಿಎಂ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಸಭೆ ನಡೆಸಿದ್ದೇನೆ, ಅಲ್ಲಿ ಇಬ್ಬರೂ ಪರಸ್ಪರ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಬೇಟೆಯಾಡುವುದಿಲ್ಲ ಎಂದು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿರುವ ನನ್ನ ಪಕ್ಷದ ನಾಯಕರಿಗೆ ಬಿಜೆಪಿಯಿಂದ ಯಾರನ್ನೂ ಸೇರಿಸಿಕೊಳ್ಳಬಾರದು ಎಂದು ನಾನು ತಿಳಿಸಿದ್ದೇನೆ ಮತ್ತು ಬಿಜೆಪಿಯೂ ಅದೇ ಭರವಸೆಯನ್ನು ನೀಡಿದೆ. ಮೈತ್ರಿಕೂಟದಲ್ಲಿ ತೊಂದರೆ ಉಂಟುಮಾಡುವ ಏನನ್ನೂ ಮಾಡದಿರಲು ನಾವು ನಿರ್ಧರಿಸಿದ್ದೇವೆ. ರಾಜ್ಯ ಮಟ್ಟದ ಸಮಸ್ಯೆಗಳನ್ನು ಒಟ್ಟಿಗೆ ಕುಳಿತು ರಾಜ್ಯ ಮಟ್ಟದಲ್ಲಿ ಬಗೆಹರಿಸಲಾಗುವುದು ಎಂದಿದ್ದಾರೆ.
ನಾನು ತುಂಬಾ ಸಕಾರಾತ್ಮಕ ವ್ಯಕ್ತಿ, ಯಾವಾಗಲೂ ಸಕಾರಾತ್ಮಕ ವಿಧಾನವನ್ನು ಇಟ್ಟುಕೊಳ್ಳುತ್ತೇನೆ. ಎನ್‌ಡಿಎ ಮೈತ್ರಿಕೂಟದ ಪಾಲುದಾರನಾಗಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪ್ರಮಾಣವಚನ ಸಮಾರಂಭಕ್ಕೆ ನನ್ನನ್ನು ಬಿಹಾರಕ್ಕೆ ಆಹ್ವಾನಿಸಲಾಗಿತ್ತು, ಆದ್ದರಿಂದ ಬಿಹಾರಕ್ಕೆ ಹೋಗುವ ಮೊದಲು, ಬಿಹಾರದಲ್ಲಿ ಎನ್‌ಡಿಎ ಗೆಲುವಿಗೆ ಅಭಿನಂದಿಸಲು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ನಾನು ದೆಹಲಿಗೆ ಹೋಗಿದ್ದೆ ಎಂದು ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಾಯುತಿಯ ಹೆಚ್ಚಿನ ಅಭ್ಯರ್ಥಿಗಳು ಪರಸ್ಪರ ವಿರುದ್ಧವಾಗಿ ಸ್ಪರ್ಧಿಸುತ್ತಿದ್ದಾರೆ. ಆದರೆ ಪ್ರಚಾರದಲ್ಲಿ ಮೈತ್ರಿಕೂಟಕ್ಕೆ ಹಾನಿ ಮಾಡುವ ಮತ್ತು ಸಂಬಂಧವನ್ನು ಹದಗೆಡಿಸುವ ಯಾವುದೇ ಕೀಳು ಮಟ್ಟದ ಭಾಷೆಯನ್ನು ಬಳಸುವುದಿಲ್ಲ ಎಂದು ಇದೇ ವೇಳೆ ಶಿಂಧೆ ತಿಳಿಸಿದ್ದಾರೆ (ಏಜೆನ್ಸೀಸ್).