ಸಾಂದರ್ಭಿಕ ಚಿತ್ರ 
ದೇಶ

ಪರಂಪರೆಗೆ ಮರಳಿದ ದುರ್ಗಾ ಉತ್ಸವ: ಪಶ್ಚಿಮ ಬಂಗಾಳದಲ್ಲಿ ಬದಲಾವಣೆ ಗಾಳಿ!

ಪಶ್ಚಿಮ ಬಂಗಾಳದಲ್ಲಿ ಹಲವು ದಶಕಗಳ ನಂತರ ಈ ಬಾರಿಯ ನವರಾತ್ರಿಯಲ್ಲಿ ಹಲವು ಮಹತ್ವದ ಬದಲಾವಣೆಗಳು ಕಂಡುಬಂದಿವೆ. 90 ವರ್ಷ ಹಳೆಯ ಮಂಟಪದಲ್ಲಿ (ದುರ್ಗೆಯನ್ನು ಕೂರಿಸುವ ಹಾಗೂ ಉತ್ಸವ ನಡೆಯುವ ಸ್ಥಳ) ದುರ್ಗೆಯು ಮತ್ತೆ ಸಾಂಪ್ರದಾಯಿಕ ಬಂಗಾಳಿ ರೂಪಕ್ಕೆ ಮರಳಿದ್ದರೆ, ಇನ್ನೊಂದೆಡೆ 82 ವರ್ಷ ಹಳೆಯ ಪೆಂಡಾಲ್ ತನ್ನ ಥೀಮ್ ‘ಪರಂಪರೆ’ ಎಂದೇ ಹೆಸರಿಟ್ಟಿದೆ.

ಪಶ್ಚಿಮ ಬಂಗಾಳದಲ್ಲಿ ಹಲವು ದಶಕಗಳ ನಂತರ ಈ ಬಾರಿಯ ನವರಾತ್ರಿಯಲ್ಲಿ ಹಲವು ಮಹತ್ವದ ಬದಲಾವಣೆಗಳು ಕಂಡುಬಂದಿವೆ. 90 ವರ್ಷ ಹಳೆಯ ಮಂಟಪದಲ್ಲಿ (ದುರ್ಗೆಯನ್ನು ಕೂರಿಸುವ ಹಾಗೂ ಉತ್ಸವ ನಡೆಯುವ ಸ್ಥಳ) ದುರ್ಗೆಯು ಮತ್ತೆ ಸಾಂಪ್ರದಾಯಿಕ ಬಂಗಾಳಿ ರೂಪಕ್ಕೆ ಮರಳಿದ್ದರೆ, ಇನ್ನೊಂದೆಡೆ 82 ವರ್ಷ ಹಳೆಯ ಪೆಂಡಾಲ್ ತನ್ನ ಥೀಮ್ ‘ಪರಂಪರೆ’ ಎಂದೇ ಹೆಸರಿಟ್ಟಿದೆ. 54 ವರ್ಷ ಹಳೆಯ ಮತ್ತೊಂದು ಪೆಂಡಾಲ್​ನಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಸಮಿತಿಯಲ್ಲಿ ಸಮಾನ ಸ್ಥಾನಮಾನ ನೀಡಲಾಗಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ನಡೆಯುತ್ತಿರುವ ಮೊದಲ ನವರಾತ್ರಿ ಉತ್ಸವ ಇದಾಗಿದ್ದು, ಕೋಲ್ಕತ್ತದ ಹಲವು ಪ್ರಮುಖ ಪೆಂಡಾಲ್​ಗಳು ದಶಕಗಳ ಹಳೆಯ ಪೂಜಾ ಪದ್ಧತಿ ಮತ್ತು ಸೊಗಡಿಗೆ ಮರಳಿವೆ. ಈ ಬಾರಿ ಒಟ್ಟು 55 ಸಾವಿರ ಮಂಟಪಗಳಲ್ಲಿ ದುರ್ಗೆ ವಿರಾಜಮಾನಳಾಗಿದ್ದಾಳೆ. ಬಿಜೆಪಿ ಸರ್ಕಾರವು ಪೆಂಡಾಲ್​ಗಳಿಗೆ ತಲಾ 1 ಲಕ್ಷ ರೂಪಾಯಿಯ ನೆರವು ನೀಡಿದೆ. ಹೀಗೆ ಈ ಬಾರಿಯ ಪಶ್ಚಿಮ ಬಂಗಾಳದ ನವರಾತ್ರಿ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಇವುಗಳ ಕುರಿತಾದ ವಿವರ ಇಲ್ಲಿದೆ.

ಪಶ್ಚಿಮ ಬಂಗಾಳದ ದುರ್ಗಾ ಪೂಜೆ (ನವರಾತ್ರಿ ಉತ್ಸವ) ಧಾರ್ವಿುಕ ಆಚರಣೆಯಷ್ಟೇ ಅಲ್ಲದೆ, ನಾಡಿನ ಕಲೆ, ಸಂಸ್ಕೃತಿ ಮತ್ತು ಸಾಮಾಜಿಕ ಬದುಕಿನ ಜೀವನಾಡಿಯಾಗಿದೆ. ಕಳೆದ ಕೆಲವು ದಶಕಗಳಿಂದ ಆಧುನಿಕ ಮತ್ತು ಪಾಶ್ಚಿಮಾತ್ಯ ಪ್ರಭಾವದ ಕಲಾತ್ಮಕ ವಿನ್ಯಾಸಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿತ್ತು. ಆದರೆ ಈ ಬಾರಿ, ಕೋಲ್ಕತ್ತದ 90 ವರ್ಷಗಳಷ್ಟು ಹಳೆಯ ಪೆಂಡಾಲ್ ಸೇರಿದಂತೆ ಹಲವು ಕಡೆಗಳಲ್ಲಿ ದೇವಿ ದುರ್ಗೆಯನ್ನು ಸಾಂಪ್ರದಾಯಿಕ ಬಂಗಾಳಿ ರೂಪದಲ್ಲೇ (ಏಕಚಾಲಾ- ಒಂದೇ ಚೌಕಟ್ಟಿನಲ್ಲಿರುವ ಪಾರಂಪರಿಕ ಪ್ರತಿಮೆ) ಪ್ರತಿಷ್ಠಾಪಿಸಲಾಗಿದ್ದು, ಜನಸಾಮಾನ್ಯರ ಸಹಭಾಗಿತ್ವ ಕೂಡ ಹೆಚ್ಚಿದೆ.

ಚಿನ್ನ, ಬೆಳ್ಳಿ ಅಥವಾ ಕೃತಕ ಆಭರಣಗಳ ಆಡಂಬರಕ್ಕೆ ಕಡಿವಾಣ ಹಾಕಿ, ನೈಸರ್ಗಿಕ ಶೃಂಗಾರಕ್ಕೆ ಆದ್ಯತೆ ನೀಡಲಾಗಿದೆ. ಹಲವು ಪೆಂಡಾಲ್​ಗಳಲ್ಲಿ ದೇವಿಯ ಅಲಂಕಾರಕ್ಕೆ ಸಂಪೂರ್ಣವಾಗಿ ಕಮಲದ ಹೂವುಗಳನ್ನು ಬಳಸಿರುವುದು ಸಾತ್ವಿಕತೆ ಮತ್ತು ಪರಿಸರಸ್ನೇಹಿ ಸಂದೇಶವನ್ನು ಸಾರಿದೆ. ಅಷ್ಟಮಿ ಮತ್ತು ನವಮಿ ಸಂಧಿಸುವ ನಿರ್ದಿಷ್ಟ ಮುಹೂರ್ತದಲ್ಲಿ 108 ಮಣ್ಣಿನ ದೀಪಗಳನ್ನು ಬೆಳಗಿಸಿ, 108 ನೀಲಿ/ಕೆಂಪು ಕಮಲದ ಹೂವುಗಳನ್ನು ಅರ್ಪಿಸುವ ಶಾಸ್ತ್ರೋಕ್ತ ಪದ್ಧತಿಗೆ ಪ್ರಾಶಸ್ತ್ಯ ನೀಡಲಾಗಿದೆ. ಆಧುನಿಕತೆಯ ಅಬ್ಬರ ಮತ್ತು ಕೃತಕತೆಯ ನಡುವೆ ಬಂಗಾಳದ ಅಸ್ಮಿತೆಯಾದ ಸಾಂಪ್ರದಾಯಿಕ ಡಾಕಿ (ಢಾಕ್ ವಾದನ), ಧುನುಚಿ ನೃತ್ಯ, ಅಲ್ಪೋನಾ (ಅಕ್ಕಿ ಹಿಟ್ಟಿನ ರಂಗೋಲಿ) ಮತ್ತು ಶುದ್ಧ ಧಾರ್ವಿುಕ ಪದ್ಧತಿಗಳಿಗೆ ಈ ಬಾರಿ ಮರುಜೀವ ಬಂದಿರುವುದು ಉತ್ಸವಕ್ಕೆ ವಿಶಿಷ್ಟ ಶೋಭೆಯನ್ನು ತಂದುಕೊಟ್ಟಿದೆ.

ಮುಖ್ಯವಾಗಿ, ರಾಜ್ಯದಲ್ಲಿ ಸರ್ಕಾರ ಬದಲಾಗಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ನ ಒಂದೂವರೆ ದಶಕಗಳ ಆಳ್ವಿಕೆಯು ಕೊನೆಗೊಂಡಿದ್ದು, ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಿದೆ. ಅಲ್ಲದೆ, ದೈವಭಕ್ತರಾಗಿರುವ, ಸನಾತನ ಪರಂಪರೆಯನ್ನು ಗೌರವಿಸುವ ಸುವೆಂದು ಅಧಿಕಾರಿ ಮುಖ್ಯಮಂತ್ರಿಯಾಗಿರುವುದರಿಂದ ದುರ್ಗಾ ಉತ್ಸವ ಆಯೋಜಕರಲ್ಲಿ ಹೊಸ ಹುಮ್ಮಸ್ಸು ಮೂಡಿದೆ. ಹಾಗಾಗಿಯೇ, ಈ ಬಾರಿ ಆಯೋಜಕರು ನಿರಾಂತಕವಾಗಿ ಮತ್ತು ಪರಂಪರೆಯ ಸೊಗಡಿನೊಂದಿಗೆ ಉತ್ಸವ ಆಯೋಜಿಸಿರುವುದು ವಿಶೇಷ.

ಸಮಿತಿಯಲ್ಲಿ ಮಹಿಳೆಯರು

ಶ್ರೀಭೂಮಿ ಸ್ಪೋರ್ಟಿಂಗ್ ಕ್ಲಬ್​ನ ಅಧ್ಯಕ್ಷ ಕನಕ್ ದೇವನಾಥ್ ಅವರು, ಪೂಜಾ ಸಮಿತಿಯಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಸಮಾನ ಪಾಲುದಾರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಎಲ್ಲರೂ ಸಮಾನರು ಎಂಬ ಚಿಂತನೆಯಡಿ ಸಾರ್ವಜನಿಕ ಸಹಭಾಗಿತ್ವಕ್ಕೆ ಒತ್ತು ನೀಡಲಾಗಿದೆ. ದಶಕಗಳ ಬಳಿಕ ಮೊದಲ ಬಾರಿಗೆ ದೇವಿಯ ಶೃಂಗಾರವನ್ನು ಆಭರಣಗಳ ಬದಲಿಗೆ ಕಮಲದ ಹೂವುಗಳಿಂದ ಮಾಡಲಾಗಿದೆ.

ತೃತೀಯ ಲಿಂಗಿಗಳೇ ಕೇಂದ್ರಬಿಂದು

ಹರಿದೇವ್​ಪುರದ ಪೆಂಡಾಲ್​ನಲ್ಲಿ ಮೊದಲ ಬಾರಿಗೆ ಡ್ಯುಯಾಲಿಟಿ (ದ್ವೈತತೆ) ಥೀಮ್ ಅಳವಡಿಸಲಾಗಿದೆ. ತೃತೀಯಲಿಂಗಿ ಸಮುದಾಯವನ್ನು ಕೇಂದ್ರದಲ್ಲಿರಿಸಲಾಗಿದೆ. 69 ವರ್ಷಗಳಲ್ಲಿ ಮೊದಲ ಬಾರಿಗೆ ಏಕಾದಶಿಯಂದು ತೃತೀಯ ಲಿಂಗಿಗಳೊಂದಿಗೆ ‘ಸಿಂದೂರ್ ಖೇಲಾ’ ಆಚರಿಸಲಾಗುತ್ತಿದೆ. ‘ಈ ಬದಲಾವಣೆ ಕಷ್ಟಕರ ವಾಗಿತ್ತು, ಆದರೆ ಈಗ ಸಮಾಜದಲ್ಲಿ ಜಾಗೃತಿ ಮೂಡಿರುವುದರಿಂದ ಸಮಾನತೆಗಾಗಿ ನಾವು ಈ ಹೆಜ್ಜೆ ಇಟ್ಟಿದ್ದೇವೆ’ ಎಂದು ಸಮಿತಿ ಹೇಳಿದೆ.

ಡಿಜೆ ಗದ್ದಲಕ್ಕೆ ವಿದಾಯ

ಪಶ್ಚಿಮ ಬಂಗಾಳದಲ್ಲಿ ಥೀಮ್ ಪೂಜೆಯನ್ನು ಆರಂಭಿಸಿದ ಜಗತ್ ಮುಖರ್ಜಿ ಪೆಂಡಾಲ್​ನಲ್ಲಿ ಮೊದಲ ಬಾರಿಗೆ ಡಿಜೆ ಬಳಕೆಗೆ ನಿಷೇಧ ಹೇರಲಾಗಿದೆ. ಪೆಂಡಾಲ್​ನ ಕಾರ್ಯದರ್ಶಿ ದ್ವೈಪಾಯನ್ ರಾಯ್ ಪ್ರಕಾರ, ‘ಈ ಬಾರಿಯ ಪೂಜೆ ಸಂಪೂರ್ಣ ಸಾಂಪ್ರದಾಯಿಕ ಪದ್ಧತಿಯಿಂದ ಕೂಡಿದ್ದು, ಮರೆತುಹೋದ ಪರಂಪರೆಯನ್ನು ಮತ್ತೆ ಸ್ಥಾಪಿಸುವ ಪ್ರಯತ್ನ ಮಾಡಿದ್ದೇವೆ’ ಎಂದಿದ್ದಾರೆ.

82 ವರ್ಷಗಳ ನಂತರ ಪರಂಪರೆ ಥೀಮ್

ಪ್ರಮುಖ ಪೆಂಡಾಲ್ ಚಾಲ್ತಾ ಬಾಗಾನ್ ಪರಂಪರೆಯ ಥೀಮ್ಲ್ಲಿ ಈ ಬಾರಿಯ ನವರಾತ್ರಿ ಆಚರಿಸುತ್ತಿದೆ. ಚಾಲ್ತಾಬಾಗಾನ್ ಪೆಂಡಾಲ್​ನ ಪ್ರಧಾನ ಕಾರ್ಯದರ್ಶಿ ಮೌಸಮ್ ಮುಖರ್ಜಿ ಹೇಳುವಂತೆ, ‘82 ವರ್ಷಗಳ ನಂತರ ನಾವು ಪರಂಪರೆಗೆ ಮರಳಿದ್ದೇವೆ. ವಿಗ್ರಹದಲ್ಲಿ ದೇವಿಯ ಪಾದಗಳನ್ನು ಯಾವಾಗಲೂ ತೆರೆದಿಟ್ಟು, ಭಕ್ತಾದಿಗಳಿಗೆ ಯಾವ ಸಮಯಕ್ಕೂ ದರ್ಶನ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.

ಅನಗತ್ಯ ವೆಚ್ಚಕ್ಕೆ ಕಡಿವಾಣ

ಈ ಬಾರಿ ‘ತ್ರೀಧಾರ ಸಮ್ಮಿಲನಿ’ ಪೆಂಡಾಲ್​ನಲ್ಲಿ ಕಾರ್ನಿವಲ್​ನಂತಹ ಅದ್ದೂರಿ ಸಂಭ್ರಮಾಚರಣೆ ಇಲ್ಲ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿದ್ದು, ಪ್ರಶಾಂತ ವಾತಾವರಣದಲ್ಲಿ ದೇವಿಯ ಸುರಾಸುರ ರೂಪ ಗೋಚರಿಸುತ್ತಿದೆ ಎಂದಿದ್ದಾರೆ ಪೆಂಡಾಲ್​ನ ಕಾರ್ಯದರ್ಶಿ ಶುಭೋಜಿತ್ ಚಕ್ರವರ್ತಿ. ಈ ಹಿಂದೆ ತ್ರೀಧಾರದ ಬೃಹತ್ ಥೀಮ್ ವಿಗ್ರಹವನ್ನು ವಿಸರ್ಜನೆ ಮಾಡದೆ ಮ್ಯೂಸಿಯಂನಲ್ಲಿಯೂ ಇಡಲಾಗಿತ್ತು ಎಂಬುದು ಗಮನಾರ್ಹ.

ನವರಾತ್ರಿಯ ಪ್ರಮುಖ ವೈಶಿಷ್ಟ್ಯಗಳು

ವಿಶಿಷ್ಟ ಮೂರ್ತಿ ಸಂಯೋಜನೆ: ದುರ್ಗಾ ದೇವಿಯು ಕೇವಲ ಮಹಿಷಾಸುರಮರ್ದಿನಿಯಾಗಿ ಮಾತ್ರವಲ್ಲದೆ, ತನ್ನ ಮಕ್ಕಳಾದ ಲಕ್ಷ್ಮಿ (ಸಂಪತ್ತು), ಸರಸ್ವತಿ (ಜ್ಞಾನ), ಕಾರ್ತಿಕೇಯ (ಶೌರ್ಯ) ಮತ್ತು ಗಣೇಶನೊಂದಿಗೆ (ಸಿದ್ಧಿ) ತವರುಮನೆಗೆ ಭೇಟಿ ನೀಡುವ ತಾಯಿಯ ರೂಪದಲ್ಲಿ ಪೂಜಿಸಲ್ಪಡುತ್ತಾಳೆ.

ಮಣ್ಣಿನ ಕಲೆ: ಕೋಲ್ಕತ್ತದ ಪ್ರಸಿದ್ಧ ಕುಂಬಾರರ ಬಡಾವಣೆ ಕುಮಾರತುಲಿಯಲ್ಲಿ ಗಂಗಾ ನದಿಯ ಜೇಡಿಮಣ್ಣಿನಿಂದ ತಿಂಗಳುಗಳ ಕಾಲ ಪರಿಶ್ರಮಪಟ್ಟು ಈ ಅದ್ಭುತ ಪ್ರತಿಮೆಗಳನ್ನು ರಚಿಸಲಾಗುತ್ತದೆ. ಮಹಾಲಯದ ದಿನದಂದು ದೇವಿಯ ಕಣ್ಣುಗಳನ್ನು ಬಿಡಿಸುವ ಚಕ್ಷು ದಾನ (ಕಣ್ಣು ದಾನ) ಕ್ರಿಯೆ ಅತ್ಯಂತ ಪವಿತ್ರವಾದದ್ದು.

ಕಲಾತ್ಮಕ ಪೆಂಡಾಲ್​ಗಳು: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತ ನಗರದಾದ್ಯಂತ ನಿರ್ವಿುಸಲಾಗುವ ಸಾವಿರಾರು ಪೆಂಡಾಲ್​ಗಳು ತಾತ್ಕಾಲಿಕ ಕಲಾ ಗ್ಯಾಲರಿಗಳಂತಿರುತ್ತವೆ. ಜಗತ್ತಿನ ಪ್ರಸಿದ್ಧ ವಾಸ್ತುಶಿಲ್ಪಗಳು, ಸಾಮಾಜಿಕ ಸಂದೇಶಗಳು, ಪರಿಸರ ಅಥವಾ ಸಮಕಾಲೀನ ವಿಚಾರಗಳನ್ನು ಆಧರಿಸಿ ಈ ಬೃಹತ್ ಮಂಟಪಗಳನ್ನು ವಿನ್ಯಾಸಗೊಳಿಸಲಾಗುತ್ತದೆ.

ಸಾಂಪ್ರದಾಯಿಕ ಧುನುಚಿ ನಾಚ್: ಪೂಜೆಯ ಸಂಜೆಗಳಲ್ಲಿ ಧೂಪದ ಪಾತ್ರೆಗಳನ್ನು ಕೈಯಲ್ಲಿ ಹಿಡಿದು ಸಾಂಪ್ರದಾಯಿಕ ಢಾಕ್ (ಡೋಲು) ನಾದಕ್ಕೆ ಹೆಜ್ಜೆ ಹಾಕುವ ಧುನುಚಿ ನಾಚ್ ರೋಮಾಂಚಕ ವಾತಾವರಣ ಸೃಷ್ಟಿಸುತ್ತದೆ.

ಸಿಂಧೂರ್ ಖೇಲಾ ಹಾಗೂ ಬಿಜೋಯಾ ದಶಮಿ: ವಿಜಯದಶಮಿಯಂದು ದೇವಿಯನ್ನು ಬೀಳ್ಕೊಡುವ ಮುನ್ನ ವಿವಾಹಿತ ಮಹಿಳೆಯರು ಪರಸ್ಪರ ಸಿಂಧೂರವನ್ನು ಹಚ್ಚಿಕೊಳ್ಳುವ ಸಿಂಧೂರ್ ಖೇಲಾ ಸಂಭ್ರಮ ನಡೆಯುತ್ತದೆ. ನಂತರ ಮೂರ್ತಿ ವಿಸರ್ಜನೆ ನಡೆದು, ಹಿರಿಯರ ಆಶೀರ್ವಾದ ಪಡೆದು ಸಿಹಿ ಹಂಚಿಕೊಳ್ಳುವ ‘ಶುಭೋ ಬಿಜೋಯಾ’ ಆಚರಣೆ ನಡೆಯುತ್ತದೆ.

ಯುನೆಸ್ಕೋ ಮನ್ನಣೆ: ಈ ಉತ್ಸವದ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಒಳಗೊಳ್ಳುವಿಕೆಯನ್ನು ಗುರುತಿಸಿ, 2021ರಲ್ಲಿ ಯುನೆಸ್ಕೊ ಕೋಲ್ಕತ್ತದ ದುರ್ಗಾ ಪೂಜೆಯನ್ನು ‘ಅಮೂರ್ತ ಸಾಂಸ್ಕೃತಿಕ ಪರಂಪರೆ’ ಎಂದು ಘೊಷಿಸಿದೆ.

ಉತ್ಸವದ ಇತಿಹಾಸ

  • ದಾಖಲೆಗಳ ಪ್ರಕಾರ, 16ನೇ ಶತಮಾನದ ಉತ್ತರಾರ್ಧದಲ್ಲಿ ಬಂಗಾಳದ ರಾಜಶಾಹಿ (ಇಂದಿನ ಬಾಂಗ್ಲಾದೇಶ) ಪ್ರದೇಶದ ರಾಜ ಕಂಸನಾರಾಯಣ್ ಮತ್ತು ತಹೇರ್​ಪುರದ ಜಮೀನ್ದಾರರು ಮೊದಲ ಬಾರಿಗೆ ವೈಭವೋಪೇತ ಶರತ್ಕಾಲದ ದುರ್ಗಾ ಪೂಜೆಯನ್ನು ಆಯೋಜಿಸಿದರು ಎಂಬ ಐತಿಹ್ಯವಿದೆ.

  • ಬಂಗಾಳದ ಶ್ರೀಮಂತ ಭೂಮಾಲೀಕರು (ಜಮೀನ್ದಾರರು ಮತ್ತು ರಜವಾಡಗಳು) 18ನೇ ಶತಮಾನದಲ್ಲಿ ತಮ್ಮ ಬಂಗಲೆಗಳಲ್ಲಿ ಬಾರಿರ್ ಪೂಜೆ (ಕುಟುಂಬಗಳಿಂದ ನಡೆಯುವ ಪೂಜೆ) ಆರಂಭಿಸಿದರು.

  • 1757ರ ಪ್ಲಾಸಿ ಕದನದ ನಂತರ, ನಬಕೃಷ್ಣ ದೇವ್ ಕೋಲ್ಕತ್ತದ ಶೋಭಾಬಜಾರ್​ನಲ್ಲಿ ಬೃಹತ್ ಮಟ್ಟದಲ್ಲಿ ಪೂಜೆಯನ್ನು ಆಯೋಜಿಸಿ ಬ್ರಿಟಿಷ್ ಅಧಿಕಾರಿಗಳನ್ನೂ ಆಹ್ವಾನಿಸಿದ್ದು ಇತಿಹಾಸದಲ್ಲಿ ಪ್ರಸಿದ್ಧವಾಗಿದೆ.

  • ಹೂಗ್ಲಿಯ ಗುಪ್ತಿಪಾರಾದಲ್ಲಿ 1790ರಲ್ಲಿ ಬಾರೊಯಾರಿ (ಹನ್ನೆರಡು ಜನ ಸ್ನೇಹಿತರು) ಒಟ್ಟಾಗಿ ಸಾರ್ವಜನಿಕ ದೇಣಿಗೆ ಸಂಗ್ರಹಿಸಿ ದುರ್ಗಾ ಪೂಜೆಯನ್ನು ಪ್ರಾರಂಭಿಸಿದರು (ಬಾರೊ= 12, ಯಾರ್= ಸ್ನೇಹಿತರು; ಆದ್ದರಿಂದ ‘ಬಾರೊಯಾರಿ’). 1910ರಲ್ಲಿ ಕೋಲ್ಕತ್ತದ ಬಾಗ್ಬಜಾರ್​ನಲ್ಲಿ ಮೊದಲ ಸಂಪೂರ್ಣ ಸಾರ್ವಜನಿಕ ಸಮುದಾಯ ಪೂಜೆ ಆರಂಭವಾಗಿ, ಇಡೀ ಹಬ್ಬ ಜನಸಾಮಾನ್ಯರ ಹಬ್ಬವಾಗಿ ಪರಿವರ್ತನೆಗೊಂಡಿತು.

  • ಬ್ರಿಟಿಷರ ಆಳ್ವಿಕೆಯಲ್ಲಿ ದುರ್ಗಾ ಪೂಜೆಯು ಸ್ವಾತಂತ್ರ ್ಯ ಹೋರಾಟಗಾರರನ್ನು ಒಗ್ಗೂಡಿಸಿ, ರಾಷ್ಟ್ರೀಯ ಜಾಗೃತಿ ಮೂಡಿಸುವ ಪ್ರಮುಖ ಸಾಂಸ್ಕೃತಿಕ ವೇದಿಕೆಯಾಗಿ ಬಳಕೆಯಾಯಿತು.