ದೆಹಲಿ, ಹರಿಯಾಣ, ಉತ್ತರಾಖಂಡದಲ್ಲಿ ಮುಂದುವರಿದ ಮಳೆ! ಉತ್ತರ ಪ್ರದೇಶದಲ್ಲಿ ವರುಣಾರ್ಭಟಕ್ಕೆ ನಾಲ್ವರು ಬಲಿ 
ದೇಶ

ದೆಹಲಿ, ಹರಿಯಾಣ, ಉತ್ತರಾಖಂಡದಲ್ಲಿ ಮುಂದುವರಿದ ಮಳೆ! ಉತ್ತರ ಪ್ರದೇಶದಲ್ಲಿ ವರುಣಾರ್ಭಟಕ್ಕೆ ನಾಲ್ವರು ಬಲಿ

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾಗದಲ್ಲಿ ಭಾರಿ ಮಳೆ
  • ಹರಿಯಾಣ, ಯುಪಿ, ಮಧ್ಯಪ್ರದೇಶದಲ್ಲೂ ನಿಲ್ಲದ ವರುಣಾರ್ಭಟ
  • ಮಳೆಯ ಅವಾಂತರಕ್ಕೆ ಉತ್ತರ ಪ್ರದೇಶದಲ್ಲಿ ನಾಲ್ವರು ದುರ್ಮರಣ
ನವದೆಹಲಿ: ನಿನ್ನೆ (ಆ.24) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುರಿದ ಭಾರಿ ಮಳೆಗೆ ನಗರದ ಹಲವು ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿತು. ಇದರಿಂದ ಟ್ರಾಫಿಕ್ ಜಾಮ್​ ಸಮಸ್ಯೆಗಳು ವಾಹನ ಸವಾರರು ತೀರ ಪರದಾಡುವಂತಾಯಿತು. ನಿರಂತರ ಮಳೆಯ ಹಿನ್ನೆಲೆ ಇದೀಗ ದೆಹಲಿ, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆ ರೆಡ್​ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಿದೆ.
ಹರಿಯಾಣದ ಗುರುಗ್ರಾಮದಲ್ಲಿ ಮತ್ತೆ ಧಾರಕಾರ ಮಳೆಯಾಗಿದ್ದು, ಉದ್ಯೋಗಿಗಳಿಗೆ ಸಾಧ್ಯವಾದರೆ ವರ್ಕ್​ಫ್ರಮ್​ ಹೋಮ್​ ಮಾಡಲು ಜಿಲ್ಲಾಡಳಿತ ಸೂಚಿಸಿದೆ. ಮತ್ತೊಂದೆಡೆ, ಶಾಲಾ-ಕಾಲೇಜುಗಳಿಗೆ ಮುಂದಿನ ಎರಡು ದಿನಗಳ ಕಾಲ ರಜೆಯನ್ನು ಘೋಷಿಸಿದೆ. ಶಾಲಾ ಆಡಳಿತ ಮಂಡಳಿಗಳು, ವಿದ್ಯಾರ್ಥಿಗಳಿಗೆ ಆನ್​ಲೈನ್​ ಮೂಲಕ ಪಾಠ ಹೇಳಿಕೊಡಲು ಮುಂದಾಗುವಂತೆ ತಿಳಿಸಲಾಗಿದೆ.
ಇನ್ನು, ಉತ್ತರ ಪ್ರದೇಶದ 65 ನಗರಗಳಲ್ಲಿ ಸೋಮವಾರ ಸುರಿದ ಭಾರಿ ಮಳೆಗೆ ನಾಲ್ವರು ಜೀವ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಮಥುರಾದಲ್ಲಿ ವರುಣನ ಆರ್ಭಟಕ್ಕೆ ರಸ್ತೆಗಳು ಮತ್ತು ವಸತಿ ಪ್ರದೇಶಗಳು ಮುಳುಗಿ ಹೋಗಿವೆ. ರಾಜಧಾನಿ ದೆಹಲಿ-ಎನ್‌ಸಿಆರ್‌ನಲ್ಲಿ ಗಾಳಿ ಸಮೇತ ಮಳೆಯಿರುವ ಹಿನ್ನೆಲೆ ಈಗಾಗಲೇ ಎರಡು ಅಂತಾರಾಷ್ಟ್ರೀಯ ಸೇರಿ ಒಟ್ಟು 15 ವಿಮಾನಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. 25 ವಿಮಾನಗಳ ಹಾರಾಟ ರದ್ದಾದರೆ, 380 ಫ್ಲೈಟ್​ಗಳು ವಿಳಂಬವಾಗಿದೆ,(ಏಜೆನ್ಸೀಸ್).