- ಈ ಡಿಜಿಟಲ್ ದುನಿಯಾದಲ್ಲಿ ಬಹುತೇಕರು ಯೂಟ್ಯೂಬ್ ಅವಲಂಬಿಸಿದ್ದಾರೆ
- ಅನೇಕ ಸಂಗತಿಗಳನ್ನು ಯೂಟ್ಯೂಬ್ ನೋಡಿಯೇ ಕಲಿಯುತ್ತಿದ್ದಾರೆ
- ಯೂಟ್ಯೂಬ್ ಎಷ್ಟು ಉಪಕಾರಿಯೋ? ಅಷ್ಟೇ ಅಪಾಯಕಾರಿ ಎಂಬುದನ್ನು ಮರೆಯಬಾರದು
- ಯೂಟ್ಯೂಬ್ ನೋಡಿ ಟ್ರೀಟ್ಮೆಂಟ್ ನೀಡಲು ಹೋಗಿ ಪ್ರಾಣ ಹೋದ ಎಷ್ಟೋ ಉದಾಹರಣೆಗಳಿವೆ
ಲಖನೌ: ಈ ಡಿಜಿಟಲ್ ದುನಿಯಾದಲ್ಲಿ ಬಹುತೇಕರು ಯೂಟ್ಯೂಬ್ ( YouTube ) ಅವಲಂಬಿಸಿದ್ದಾರೆ. ಅನೇಕ ಸಂಗತಿಗಳನ್ನು ಯೂಟ್ಯೂಬ್ ನೋಡಿಯೇ ಕಲಿಯುತ್ತಿದ್ದಾರೆ. ಅಡುಗೆಯಿಂದ ಹಿಡಿದು ಮೊಬೈಲ್, ಕಂಪ್ಯೂಟರ್ ರಿಪೇರಿ ಮತ್ತು ಶಿಕ್ಷಣ ಸೇರಿದಂತೆ ಅನೇಕ ಸಂಗತಿಗಳನ್ನು ಕಲಿತುಕೊಳ್ಳುವವರಿದ್ದಾರೆ. ಅನೇಕ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಯೂಟ್ಯೂಬ್ ಎಷ್ಟು ಉಪಕಾರಿಯೋ? ಅಷ್ಟೇ ಅಪಾಯಕಾರಿ ಎಂಬುದನ್ನು ಮರೆಯಬಾರದು. ಏಕೆಂದರೆ, ಯೂಟ್ಯೂಬ್ ನೋಡಿ ಟ್ರೀಟ್ಮೆಂಟ್ ನೀಡಲು ಹೋಗಿ ಪ್ರಾಣ ಕಳೆದುಕೊಂಡ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇದೀಗ ಮತ್ತೊಂದು ಅಂಥದ್ದೇ ಅನಾಹುತ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ.
ಅಕ್ರಮ ಕ್ಲಿನಿಕ್ ಇಟ್ಟುಕೊಂಡಿರುವ ವ್ಯಕ್ತಿಯೊಬ್ಬ, ತನ್ನ ಸೋದರಳಿಯನ ಜತೆ ಸೇರಿಕೊಂಡು ಯೂಟ್ಯೂಬ್ ವಿಡಿಯೋ ಟ್ಯುಟೋರಿಯಲ್ ನೋಡಿ ಶಸ್ತ್ರಚಿಕಿತ್ಸೆ ಮಾಡಿದ ಪರಿಣಾಮ ಮಹಿಳೆಯೊಬ್ಬರು ದುರಂತ ಸಾವಿಗೀಡಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ. ಆರೋಪಿಗಳು ಸರ್ಕಾರಿ ಮಾನ್ಯತೆಯ ಯಾವುದೇ ದಾಖಲೆಗಳಿಲ್ಲದೇ ಅಕ್ರಮವಾಗಿ ಕ್ಲಿನಿಕ್ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಳನ್ನು ಮುನಿಶ್ರಾ ರಾವತ್ ಎಂದು ಗುರುತಿಸಲಾಗಿದೆ. ಈಕೆ ತೆಹಬಹಾದ್ದೂರ್ ರಾವತ್ ಎಂಬುವರ ಪತ್ನಿ. ಕಿಡ್ನಿ ಕಲ್ಲು ಕಾಯಿಲೆಯಿಂದ ಬಲಳುತ್ತಿದ್ದ ಆಕೆಯನ್ನು ಡಿಸೆಂಬರ್ 5ರಂದು ಕೋಠಿಯಲ್ಲಿರುವ ಶ್ರೀ ದಾಮೋದರ್ ಔಷಧಾಲಯಕ್ಕೆ ಪತಿ ಕರೆದೊಯ್ದಿದ್ದ. ಹೊಟ್ಟೆಯಲ್ಲಿ ಕಲ್ಲುಗಳಿರುವ ಕಾರಣ ನೋವು ಉಂಟಾಗಿದೆ. ತಕ್ಷಣ ಶಸ್ತ್ರಚಿಕಿತ್ಸೆ ಮಾಡಬೇಕಿದೆ ಎಂದು ಕ್ಲಿನಿಕ್ನ ಆಪರೇಟರ್ ಜ್ಞಾನ್ ಪ್ರಕಾಶ್ ಮಿಶ್ರಾ ಹೇಳಿದ್ದ. ಅಲ್ಲದೆ, ಶಸ್ತ್ರಚಿಕಿತ್ಸೆ ನಡೆಸಲು ಸುಮಾರು 25 ಸಾವಿರ ರೂಪಾಯಿ ಖರ್ಚಾಗುತ್ತದೆ ಎಂದಿದ್ದ.
ಇದಾದ ಬಳಿಕ ಸಂತ್ರಸ್ತೆಯ ಪತಿ, ಶಸ್ತ್ರಚಿಕಿತ್ಸೆಗು ಮುನ್ನ 20 ಸಾವಿರ ಹಣವನ್ನು ಮುಂಗಡವಾಗಿ ಪಾವತಿಸಿದರು. ಶಸ್ತ್ರಚಿಕಿತ್ಸೆ ಸಮಯದಲ್ಲಿ ಮಿಶ್ರಾ ಮದ್ಯದ ಅಮಲಿನಲ್ಲಿದ್ದರು ಮತ್ತು ಯೂಟ್ಯೂಬ್ ವಿಡಿಯೋ ನೋಡಿ ಆಪರೇಷನ್ ಮಾಡಲು ಆರಂಭಿಸಿದರು ಎಂದು ಮೃತ ಮುನಿಶ್ರಾ ಅವರ ಪತಿ ರಾವತ್ ದೂರಿನಲ್ಲಿ ತಿಳಿಸಿದ್ದಾರೆ.
ಮಿಶ್ರಾ, ನನ್ನ ಪತ್ನಿಯ ಹೊಟ್ಟೆಯನ್ನು ಆಳವಾಗಿ ಕೊಯ್ದನು ಮತ್ತು ಹಲವಾರು ರಕ್ತನಾಳಗಳನ್ನು ಕತ್ತರಿಸಿದನು ಎಂದು ಆರೋಪ ಮಾಡಿರುವ ರಾವತ್, ಡಿಸೆಂಬರ್ 6 ರಂದು ಸಂಜೆ ನನ್ನ ಪತ್ನಿ ಮೃತಪಟ್ಟಳು ಎಂದು ಹೇಳಿದ್ದಾರೆ. ಆಪರೇಷನ್ ಸಮಯದಲ್ಲಿ ಮಿಶ್ರಾಗೆ ಅವರ ಸೋದರಳಿಯ ವಿವೇಕ್ ಕುಮಾರ್ ಸಹಾಯ ಮಾಡಿದ್ದಾರೆ. ಹೀಗಾಗಿ ಇಬ್ಬರು ವಿರುದ್ಧವೂ ದೂರು ದಾಖಲಾಗಿದೆ.
ಮಿಶ್ರಾ ಅವರ ಸೋದರಳಿಯ ವಿವೇಕ್, ರಾಯ್‌ಬರೇಲಿಯಲ್ಲಿರುವ ಆಯುರ್ವೇದ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದ. ಸರ್ಕಾರಿ ಕೆಲಸದ ನೆಪದಲ್ಲಿ ಅಕ್ರಮ ಕ್ಲಿನಿಕ್ ಅನ್ನು ಹಲವಾರು ವರ್ಷಗಳಿಂದ ನಡೆಸುತ್ತಿದ್ದನ್ನು ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಲಿನಿಕ್ ಅನ್ನು ಈಗ ಸೀಲ್ ಮಾಡಲಾಗಿದ್ದು, ಮಿಶ್ರಾ ಮತ್ತು ಅವರ ಸೋದರಳಿಯ ವಿರುದ್ಧ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇದರ ಜೊತೆಗೆ 1989 ರ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಸೆಕ್ಷನ್‌ಗಳನ್ನು ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ, (ಏಜೆನ್ಸೀಸ್).