ಕುಡಿತದ ಅಮಲಿನಲ್ಲಿದ್ದ ವ್ಯಕ್ತಿಯಿಂದ 15 ಅಡಿ ಉದ್ದದ ಹೆಬ್ಬಾವಿನೊಂದಿಗೆ ಬರಿಗೈಯಲ್ಲಿ ಸಾಹಸ
- ಕುಡಿತದ ಅಮಲಿನಲ್ಲಿದ್ದ ವ್ಯಕ್ತಿಯಿಂದ 15 ಅಡಿ ಉದ್ದದ ಹೆಬ್ಬಾವಿನೊಂದಿಗೆ ಬರಿಗೈಯಲ್ಲಿ ಸಾಹಸ
- ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದ ಘಟನೆ
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ಬಾರಾಬಂಕಿ: ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ನಡೆದ ಒಂದು ಅಚ್ಚರಿಯ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಮಾಂಸದ ಅಂಗಡಿಯೊಳಗೆ ನುಗ್ಗಿದ ಬೃಹತ್ ಗಾತ್ರದ ಹೆಬ್ಬಾವೊಂದು ಜನರನ್ನು ಬೆಚ್ಚಿಬೀಳಿಸಿತು.
ಆದರೆ, ಅಲ್ಲಿದ್ದ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ (Drunk Man Fight with Snake) ಯಾವುದೇ ಭಯವಿಲ್ಲದೆ ನೇರವಾಗಿ ಬೃಹತ್ ಹಾವಿನ ಜತೆಗೆ ಕುಸ್ತಿಯಾಡಿ, ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಮಾಂಸದ ಅಂಗಡಿಗೆ ಬಂದ ಅತಿಥಿ!
ಶುಕ್ರವಾರ (ಆ.14) ಸಂಜೆ ಎಂದಿನಂತೆ ಅಂಗಡಿಗಳು ವ್ಯಾಪಾರದಲ್ಲಿ ಬ್ಯುಸಿಯಾಗಿದ್ದವು. ಅಷ್ಟರಲ್ಲಿ ಸುಮಾರು 15 ಅಡಿ ಉದ್ದದ ಬೃಹತ್ ಹೆಬ್ಬಾವೊಂದು ನೇರವಾಗಿ ಮಾಂಸದ ಅಂಗಡಿಯೊಳಗೆ ನುಗ್ಗಿದೆ. ಅಂಗಡಿಯಲ್ಲಿದ್ದ ಮೇಕೆಗಳ ಮೇಲೆ ಕಣ್ಣಿಟ್ಟ ಆ ಹಾವು, ಅವುಗಳಲ್ಲಿ ಒಂದನ್ನು ಬೇಟೆಯಾಡಲು ಹೊಂಚುಹಾಕಿತ್ತು. ಅಷ್ಟರಲ್ಲಿ ಅಂಗಡಿಯ ಮಾಲೀಕರ ಕಣ್ಣಿಗೆ ಈ ದೈತ್ಯ ಸರೀಸೃಪ ಬಿದ್ದಿದ್ದು, ಕೂಡಲೇ ಅವರು ಗಾಬರಿಯಿಂದ ಹೊರಗೋಡಿ ಬಂದಿದ್ದಾರೆ.
ಎಂಟ್ರಿ ಕೊಟ್ಟ ಕುಡುಕ ಹೀರೋ ಸುರೇಶ್!
ಅಂಗಡಿಯ ಮುಂದೆ ಜನ ಜಮಾಯಿಸಿ ಭಯದಿಂದ ನಡುಗುತ್ತಿದ್ದಾಗ, ಅಲ್ಲಿಗೆ ಸುರೇಶ್ ಎಂಬ ವ್ಯಕ್ತಿ ಎಂಟ್ರಿ ಕೊಟ್ಟಿದ್ದಾರೆ. ಅಂದು ಸುರೇಶ್ ಕುಡಿದ ಅಮಲಿನಲ್ಲಿದ್ದು, ಜನರೆಲ್ಲಾ ಹಾವನ್ನು ಕಂಡು ಜೀವಭಯದಿಂದ ದೂರ ನಿಂತಿದ್ದರೆ, ಸುರೇಶ್ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ನೇರವಾಗಿ ಹಾವಿನ ಬಳಿಗೆ ಹೋಗಿದ್ದಾರೆ.
ತಮ್ಮ ಪ್ರಾಣದ ಬಗ್ಗೆಯೂ ಯೋಚಿಸದೆ ಬರಿಗೈಯಿಂದಲೇ ಆ ದೈತ್ಯ ಹೆಬ್ಬಾವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಹಾವು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಸುರೇಶ್ ಕೈಯನ್ನು ಸುತ್ತಿಕೊಂಡು ಬಿಗಿಯಲು ಆರಂಭಿಸಿದೆ. ಅಷ್ಟೇ ಅಲ್ಲ, ಒಂದೆರಡು ಬಾರಿ ಸುರೇಶ್‌ಗೆ ಕಚ್ಚಿಯೂ ಬಿಟ್ಟಿದೆ. ಆದರೂ ಕುಡಿತದ ಅಮಲಿನಲ್ಲಿದ್ದ ಸುರೇಶ್ ಮಾತ್ರ ಕ್ಯಾರೆ ಎನ್ನಲಿಲ್ಲ. ಹೆಬ್ಬಾವುಗಳಿಗೆ ವಿಷವಿಲ್ಲ ಎಂಬ ಧೈರ್ಯವೋ ಅಥವಾ ಕುಡಿತದ ಮೈಮರೆವೋ, ಹೆಬ್ಬಾವಿನ ಎದುರು ಕಿಂಚಿತ್ತೂ ಭಯಪಡದೆ ಸೆಣಸಾಡಿದ್ದಾರೆ.
ಕುತ್ತಿಗೆಗೆ ಹಾವನ್ನು ಸುತ್ತಿಕೊಂಡು ಆಟ!
ಹಾವಿನ ಜತೆ ಸ್ವಲ್ಪ ಹೊತ್ತು ಹೋರಾಟ ನಡೆಸಿದ ಸುರೇಶ್, ಕೊನೆಗೂ ಅದನ್ನು ತನ್ನ ಹತೋಟಿಗೆ ತೆಗೆದುಕೊಂಡಿದ್ದಾರೆ. ನಂತರ ಹಾವನ್ನು ಎತ್ತಿಕೊಂಡು ಯಾರೂ ಊಹಿಸದ ಸಾಹಸ ಮಾಡಿದ್ದಾರೆ. ಆ 15 ಅಡಿ ಹಾವನ್ನು ತನ್ನ ಭುಜಗಳ ಸುತ್ತಲೂ ಹಾರದಂತೆ ಸುತ್ತಿಕೊಂಡು, ಸಾರ್ವಜನಿಕವಾಗಿ ಅದರೊಂದಿಗೆ ಆಟವಾಡಲು ಆರಂಭಿಸಿದ್ದಾರೆ.
ಹಾವಿನ ಜತೆ ಸಾಕಷ್ಟು ಸಮಯ ಮಜಾ ಮಾಡಿದ ನಂತರ, ಸುರೇಶ್ ಅದನ್ನು ಒಂದು ದೊಡ್ಡ ಪಾತ್ರೆಯೊಳಗೆ ಸುರಕ್ಷಿತವಾಗಿ ಹಾಕಿದ್ದಾರೆ. ಬಳಿಕ ಆ ಪಾತ್ರೆಯನ್ನು ತೆಗೆದುಕೊಂಡು ಹೋಗಿ ಸಮೀಪದ ಚರಂಡಿಯ ಬಳಿ ಬಿಡುಗಡೆ ಮಾಡಿದ್ದಾರೆ, (ಏಜನ್ಸೀಸ್).