ಗಡಿ ನಿಯಂತ್ರಣ ರೇಖೆ ಬಳಿ ಶಂಕಿತ ಪಾಕ್ ಡ್ರೋನ್ ಪತ್ತೆ 
ದೇಶ

ಪಾಕ್‌ನಿಂದ ಡ್ರೋನ್ ಎಂಟ್ರಿ? ಪೂಂಚ್‌ನಲ್ಲಿ ಭದ್ರತಾ ಪಡೆಗಳ ಹೈ ಅಲರ್ಟ್ | Drone entry from Pakistan?

ಪ್ರಮುಖ ಮುಖ್ಯಾಂಶಗಳು

  • ಜಮ್ಮು-ಕಾಶ್ಮೀರದ ಪೂಂಚ್ ಬಳಿ ಪಾಕಿಸ್ತಾನ ಮೂಲದ ಶಂಕಿತ ಡ್ರೋನ್ ಪತ್ತೆ
  • ಗಡಿ ಭಾಗದಲ್ಲಿ ಹಾರಾಟ ನಡೆಸಿದ ಬಳಿಕ ಪಾಕ್​​ನತ್ತ ಮರಳಿದ ಡ್ರೋನ್
  • ನಿಯಂತ್ರಣ ರೇಖೆ ದಾಟಿ ಬಂದ ಡ್ರೋನ್ ಬಗ್ಗೆ ಸೇನೆಯಿಂದ ಶೋಧ
ಜಮ್ಮು-ಕಾಶ್ಮೀರ: ಗಡಿಯಲ್ಲಿ ಮತ್ತೆ ಡ್ರೋನ್‌ ಸದ್ದು ಶುರುವಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಹಾರಾಟ ನಡೆಸಿರುವುದು ಭದ್ರತಾ ಪಡೆಗಳ ಆತಂಕಕ್ಕೆ ಕಾರಣವಾಗಿದೆ.
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಬಳಿ ಈ ಶಂಕಿತ ಡ್ರೋನ್‌ ಕಾಣಿಸಿಕೊಂಡಿದೆ. ಬಳಿಕ ಮಂಗಲ್ನಾರ್-ದಬ್ರೋಟ್ ಭಾಗದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿದ ಡ್ರೋನ್‌ ಪಾಕಿಸ್ತಾನದ ಕಡೆಗೆ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್‌ ಹಾರಾಟದ ಮಾಹಿತಿ ಸಿಗುತ್ತಿದ್ದಂತೆ LoC ಕಾವಲಿನಲ್ಲಿದ್ದ ಸೇನಾ ಪಡೆಗಳು ಗಡಿಯಲ್ಲಿ ನಿಗಾ ಮತ್ತಷ್ಟು ಬಿಗಿಗೊಳಿಸಿವೆ. ಬೆಳಗ್ಗೆಯೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್‌ನಿಂದ ಯಾವುದಾದರೂ ಅನುಮಾನಾಸ್ಪದ ವಸ್ತು ಅಥವಾ ಸಾಮಗ್ರಿ ಕೆಳಗೆ ಬಿದ್ದಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೇಟೆ

ಇದೇ ವೇಳೆ, ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಬೃಹತ್ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ, ಜೋಫರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಶೋಧ ನಡೆದಿದೆ.

ರಾಜೌರಿಯಲ್ಲೂ ಹೈ ಅಲರ್ಟ್

ರಾಜೌರಿಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್‌ ಶುರುವಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಓಡಾಡುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ತೀವ್ರ ಕಾರ್ಯಾಚರಣೆಗೆ ಇಳಿದಿವೆ.
ಆದರೆ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಭದ್ರತಾ ಪಡೆಗಳ ಕಣ್ಣಿಗೆರ ಬಿದ್ದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಡಿ ಪ್ರದೇಶದಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ಚಟುವಟಿಕೆ ನಡೆಯದಂತೆ ಸೇನೆ ಮತ್ತು ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ,(ಏಜೇನ್ಸೀಸ್​).