ಸಿಎಂ ಎಂ.ಕೆ.ಸ್ಟಾಲಿನ್ 
ದೇಶ

ಬಿಜೆಪಿ ಜೊತೆ ಸೇರಿ ದ್ರಾವಿಡರ ನಾಯಕ ತಮಿಳುನಾಡಿಗೆ ದ್ರೋಹ ಬಗೆದಿದ್ದಾನೆ; ಪಳನಿಸ್ವಾಮಿ ವಿರುದ್ಧ ಸಿಎಂ ಎಂ.ಕೆ,ಸ್ಟಾಲಿನ್ ವಾಗ್ದಾಳಿ | CM M K Stalin

ಚೆನ್ನೈ: ಚುನಾವಣೆಯ ಪ್ರಚಾರದಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್(CM M K Stalin), ದ್ರಾವಿಡದ ನಾಯಕನೊಬ್ಬ ಬಿಜೆಪಿ ಜೊತೆ ಸೇರಿಕೊಂಡು ತಮಿಳುನಾಡಿನ ಹಿತಾಸಕ್ತಿಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪುದುಕೊಟ್ಟೈಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಬಿಜೆಪಿ ಜೊತೆಗೆ ಎಐಎಡಿಎಂಕೆ ತಮಿಳುನಾಡಿಗೆ ದ್ರೋಹ ಬಗೆದಿದೆ. ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿ ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಎತ್ತುವಲ್ಲಿ ವಿಫಲರಾಗಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಕೇಂದ್ರದ ನಾಯಕರು ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಜಾರಿಗೆ ತರಲು ನೋಡ್ತಿದ್ದಾರೆ. ಆದ್ರೆ ಪಳನಿಸ್ವಾಮಿ ಅದನ್ನೂ ಪ್ರಶ್ನಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಣವನ್ನು ಕೇಸರಿಕರಣ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ₹10,000 ಕೋಟಿ ನೀಡಿದರೂ ಹಿಂದಿ ಹೇರಿಕೆಯನ್ನು ರಾಜ್ಯ ಒಪ್ಪುವುದಿಲ್ಲ. ತಮಿಳುನಾಡಿಗೆ ₹2,000 ಕೋಟಿ ಬಾಕಿ ಬಿಡುಗಡೆ ಮಾಡುವಲ್ಲಿ ಕೇಂದ್ರ ವಿಫಲವಾಗಿದೆ. ತಮಿಳಿಗೆ ಹೋಲಿಸಿದರೆ ಸಂಸ್ಕೃತಕ್ಕೆ ಹೆಚ್ಚಿನ ಬಜೆಟ್ ಹಂಚಿಕೆ ಮಾಡಿದ್ದಾರೆ. ಅದರ ಬಗ್ಗೆಯೂ ಪಳನಿಸ್ವಾಮಿ ಯಾಕೆ ಕಳವಳ ವ್ಯಕ್ತಪಡಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ವಕ್ಫ್ ಮಂಡಳಿಯ ತಿದ್ದುಪಡಿಯಂತಹ ಶಾಸನಗಳನ್ನು ಇಪಿಎಸ್ ಬೆಂಬಲಿಸುತ್ತಿದ್ದಾರೆ. ಇದು ಅಲ್ಪಸಂಖ್ಯಾತರಿಗೆ ಮಾಡಿದ ದ್ರೋಹವಾಗಿದೆ. ಇಂಡಿಯಾ ಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ್ರೆ, ನೀಟ್ ಪರೀಕ್ಷೆ ರದ್ದು ಮಾಡುವ ಭರವಸೆ ನೀಡಿದೆ. ಅದೇ ರೀತಿ ಕೇಂದ್ರ ಸರ್ಕಾರವನ್ನು ಪಳನಿಸ್ವಾಮಿ ಒತ್ತಾಯಿಸಿದ್ದಾರೆಯೇ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ ಮತ್ತು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ ಅವರು,ಮೋದಿ ಮತ್ತು ಫಡ್ನವೀಸ್ ತಿರುಪರಾಂಕುಂದ್ರಂ ಮತ್ತು ಮಧುರೈಗೆ ಭೇಟಿ ನೀಡಿದ್ದರು, ಆದರೆ ತಮಿಳರ್ ಥಾಯ್ ಮಡಿ ಕೀಳಡಿಗೆ ಹೋಗಲಿಲ್ಲ. ಕೀಳಡಿ ವರದಿಯ ಬಿಡುಗಡೆಯನ್ನು ವಿಳಂಬ ಮಾಡಲು ಕಾರಣವೇನು? ಎಂದಿದ್ದಾರೆ (ಏಜೆನ್ಸೀಸ್).