2027ರ ವಿಶ್ವಕಪ್‌ಗೆ ರೋಹಿತ್-ವಿರಾಟ್​ಗೆ ಸ್ಥಾನ ಸಿಗೋದು ಡೌಟ್? ಬಿಸಿಸಿಐ ಕಾರ್ಯದರ್ಶಿ ಸೈಕಿಯಾ ಹೇಳಿದ್ದೇನು! 
ದೇಶ

2027ರ ವಿಶ್ವಕಪ್‌ಗೆ ರೋಹಿತ್-ವಿರಾಟ್​ಗೆ ಸ್ಥಾನ ಸಿಗೋದು ಡೌಟ್? ಬಿಸಿಸಿಐ ಕಾರ್ಯದರ್ಶಿ ಸೈಕಿಯಾ ಹೇಳಿದ್ದೇನು! Devajit Saikia

ನವದೆಹಲಿ: ಭಾರತೀಯ ಕ್ರಿಕೆಟ್‌ನ ಜೀವಾಳವಾಗಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಅಭಿಮಾನಿಗಳಿಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ(Devajit Saikia) ಅವರ ಇತ್ತೀಚಿನ ಹೇಳಿಕೆ ತೀವ್ರ ಆತಂಕ ಮೂಡಿಸಿದೆ. 2027ರ ಏಕದಿನ ವಿಶ್ವಕಪ್‌ಗೆ ಟೀಮ್ ಇಂಡಿಯಾ ಭರ್ಜರಿ ಸಿದ್ಧತೆಗಳನ್ನು ಆರಂಭಿಸುತ್ತಿರುವ ಬೆನ್ನಲ್ಲೇ, ಈ ಇಬ್ಬರು ದಿಗ್ಗಜ ಆಟಗಾರರ ಭವಿಷ್ಯದ ಕುರಿತು ಸೈಕಿಯಾ ನೀಡಿರುವ ಹೇಳಿಕೆ ಈಗ ಹೊಸ ಚರ್ಚೆಗೆ ಗ್ರಾಸವಾಗಿದೆ. ರೋಹಿತ್ ಮತ್ತು ಕೊಹ್ಲಿ ಅವರಂತಹ ಹಿರಿಯ ಆಟಗಾರರ ಭವಿಷ್ಯವನ್ನು ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ. ಅಂತಿಮ ನಿರ್ಧಾರಗಳು ಕೇವಲ ಬಿಸಿಸಿಐ ಬೋರ್ಡ್‌ರೂಮ್‌ನಲ್ಲಿ ಮಾತ್ರ ಪ್ರಕಟವಾಗಲಿವೆ ಎಂದು ಸೈಕಿಯಾ ಹೇಳಿರುವುದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ.

ಸ್ಥಾನ ಇನ್ನೂ ಖಚಿತವಾಗಿಲ್ಲವೇ?: ಅಭಿಮಾನಿಗಳಲ್ಲಿ ಮೂಡಿದ ಆತಂಕ

ಕಳೆದ ಹಲವು ವರ್ಷಗಳಿಂದ ಭಾರತ ತಂಡಕ್ಕೆ ಅಸಂಖ್ಯಾತ ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿರುವ ರೋಹಿತ್ ಮತ್ತು ವಿರಾಟ್, ೨೦೨೭ರ ಏಕದಿನ ವಿಶ್ವಕಪ್ ಆಡುವ ಬಲವಾದ ಕನಸು ಹೊಂದಿದ್ದಾರೆ. ಆದರೆ, ಬಿಸಿಸಿಐ ಕಾರ್ಯದರ್ಶಿ ಅವರ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ವಿಶ್ವಕಪ್ ತಂಡದಲ್ಲಿ ಇವರಿಬ್ಬರ ಸ್ಥಾನ ಇನ್ನೂ ನೂರಕ್ಕೆ ನೂರರಷ್ಟು ಖಚಿತವಾಗಿಲ್ಲ ಎಂಬ ಮುನ್ಸೂಚನೆ ಸಿಗುತ್ತಿದೆ.
ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಸೈಕಿಯಾ, ಮಂಡಳಿಯ ಮುಖ್ಯಸ್ಥನಾಗಿ ನಾನು ಹೇಳುವುದೇನೆಂದರೆ, ನಮ್ಮಲ್ಲಿ ಅನುಭವಿ ತಜ್ಞರ ದೊಡ್ಡ ಬಳಗವೇ ಇದೆ. ಪ್ರತಿ ಪ್ರಮುಖ ನಿರ್ಧಾರದ ಹಿಂದೆಯೂ ಕ್ರಿಕೆಟ್ ಸಮಿತಿ, ಆಯ್ಕೆಗಾರರು, ಸಪೋರ್ಟ್ ಸ್ಟಾಫ್, ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಹಾಗೂ ಸ್ವತಃ ಆಯಾ ಆಟಗಾರರ ಅಭಿಪ್ರಾಯಗಳನ್ನು ಪರಿಗಣಿಸಲಾಗುತ್ತದೆ. ಇವರ ನಡುವೆ ನಿರಂತರ ಸಂವಾದ ನಡೆಯುತ್ತಲೇ ಇರುತ್ತದೆ ಎಂದಿದ್ದಾರೆ.

ಮಾಧ್ಯಮಗಳಿಗೆ ಮಾಹಿತಿ ನೀಡಲು ಅನುಮತಿ ಇಲ್ಲ

ತಂಡದ ಆಂತರಿಕ ನಿರ್ಧಾರಗಳಿಗಾಗಿ ನಾವು ಯಾವುದೇ ಪ್ರತ್ಯೇಕ ಸಭೆ ನಡೆಸುವ ಅಗತ್ಯವಿಲ್ಲ, ಅದೊಂದು ನಿರಂತರ ಪ್ರಕ್ರಿಯೆ. ತಂಡದ ಭವಿಷ್ಯದ ಕಾರ್ಯತಂತ್ರಗಳಿಗೆ ಸಂಬಂಧಿಸಿದ ಇಂತಹ ಸೂಕ್ಷ್ಮ ವಿಷಯಗಳನ್ನು ಮಾಧ್ಯಮಗಳ ಮುಂದೆ ಅಥವಾ ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಸರಿಯಲ್ಲ. ಈ ಬಗ್ಗೆ ಮಾಧ್ಯಮಗಳ ಎದುರು ಮಾತನಾಡಲು ನನಗೆ ಅಧಿಕಾರವೂ ಇಲ್ಲ ಎಂದು ಸೈಕಿಯಾ ಸ್ಪಷ್ಟಪಡಿಸಿದ್ದಾರೆ. ಬಿಸಿಸಿಐನ ಈ ರಹಸ್ಯ ನೀತಿಯೇ ಈಗ ಅಭಿಮಾನಿಗಳ ನಿದ್ದೆ ಕೆಡಿಸಿದೆ.

2027ರ ವಿಶ್ವಕಪ್ ಅಖಾಡ ಎಲ್ಲಿದೆ?; ಆತಿಥ್ಯ ವಹಿಸಲಿದೆ ದಕ್ಷಿಣ ಆಫ್ರಿಕಾ!

ಖ್ಯಾತ ಕ್ರಿಕೆಟ್ ವೆಬ್‌ಸೈಟ್ 'ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಮುಂದಿನ ಏಕದಿನ ವಿಶ್ವಕಪ್ ಪಂದ್ಯಾವಳಿಯು 2027ರ ಅಕ್ಟೋಬರ್ 4 ರಿಂದ ನವೆಂಬರ್ 21 ರವರೆಗೆ ಜರುಗಲಿದೆ. ಈ ಬಾರಿ ದಕ್ಷಿಣ ಆಫ್ರಿಕಾ ದೇಶವು ಜಂಟಿಯಾಗಿ ಟೂರ್ನಿಯ ಸಿಂಹಪಾಲು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಒಟ್ಟು ನಡೆಯಲಿರುವ 54 ಪಂದ್ಯಗಳ ಪೈಕಿ ಕನಿಷ್ಠ ೪೧ ಪಂದ್ಯಗಳು ದಕ್ಷಿಣ ಆಫ್ರಿಕಾದಲ್ಲೇ ನಡೆಯಲಿವೆ.
ಉಳಿದಂತೆ ಜಿಂಬಾಬ್ವೆ ದೇಶಕ್ಕೆ 8 ರಿಂದ 10 ಪಂದ್ಯಗಳ ಆತಿಥ್ಯ ಸಿಗುವ ಸಾಧ್ಯತೆಯಿದ್ದು, ಅಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್ ಮತ್ತು ಬುಲವಾಯೊದ ಕ್ವೀನ್ಸ್ ಸ್ಟೇಡಿಯಂ ಜೊತೆಗೆ ಹೊಸದಾಗಿ ವಿಕ್ಟೋರಿಯಾ ಫಾಲ್ಸ್ ಮೈದಾನವೂ ಸೇರ್ಪಡೆಯಾಗಿದೆ. ಇನ್ನುಳಿದ 3 ಪಂದ್ಯಗಳು ನಮೀಬಿಯಾದಲ್ಲಿ ಜರುಗಲಿವೆ. ಇಂತಹ ಬಲಿಷ್ಠ ವೇದಿಕೆಯಲ್ಲಿ ರೋಹಿತ್ ಮತ್ತು ವಿರಾಟ್ ಭಾರತದ ಪರವಾಗಿ ಬ್ಯಾಟ್ ಬೀಸುತ್ತಾರಾ ಎಂಬುದೇ ಸದ್ಯದ ಕುತೂಹಲವಾಗಿದೆ,(ಏಜೆನ್ಸೀಸ್​).