Doomsday Fish  
ದೇಶ

ಸಮುದ್ರದ ಆಳದಿಂದ ದಡಕ್ಕೆ ಬಂದ 'ಡೂಮ್ಸ್‌ಡೇ ಫಿಶ್': ಸುನಾಮಿ-ಭೂಕಂಪದ ಭೀತಿಯಲ್ಲಿ ಕರಾವಳಿ ಜನ! | Doomsday Fish

ಮೆಕ್ಸಿಕೋ: ಸಮುದ್ರದ ಆಳದಲ್ಲಿ ವಾಸಿಸುವ, ಅತೀ ಅಪರೂಪದ ಮತ್ತು ನಿಗೂಢ ಎನ್ನಲಾದ ಎರಡು ಓರ್‌ಫಿಶ್ (Oarfish) ಮೀನುಗಳು(Doomsday Fish) ಮೆಕ್ಸಿಕೋದ ಕ್ಯಾಬೊ ಸ್ಯಾನ್ ಲ್ಯೂಕಾಸ್ ಕರಾವಳಿಯಲ್ಲಿ ಕಾಣಿಸಿಕೊಂಡಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿವೆ.
ಹೌದು, ಜಪಾನಿನ ಜಾನಪದ ನಂಬಿಕೆಗಳ ಪ್ರಕಾರ, ಈ ಮೀನುಗಳು ಕಾಣಿಸಿಕೊಂಡರೆ ಅದು ಮುಂಬರುವ ಭೀಕರ ನೈಸರ್ಗಿಕ ವಿಕೋಪಗಳ ಮುನ್ಸೂಚನೆ ಎಂದು ನಂಬಲಾಗಿದೆ. ಹೀಗಾಗಿಯೇ ಇದನ್ನು 'ಡೂಮ್ಸ್‌ಡೇ ಫಿಶ್' ಅಥವಾ 'ಪ್ರಳಯದ ಮೀನು' ಎಂದು ಕರೆಯಲಾಗುತ್ತದೆ.
ಮೋನಿಕಾ ಪಿಟ್ಟಿಂಗರ್ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ರಿಬ್ಬನ್ ಆಕಾರದ ಎರಡು ದೈತ್ಯ ಮೀನುಗಳು ಸಮುದ್ರದ ಆಳವಿಲ್ಲದ(ದಡದ ಅಂಚಿನಲ್ಲಿ) ನೀರಿನಲ್ಲಿ ಅಸಹಾಯಕ ಸ್ಥಿತಿಯಲ್ಲಿರುವುದನ್ನು ಕಾಣಬಹುದು. ಸಾಮಾನ್ಯವಾಗಿ ಸಮುದ್ರದ ಸುಮಾರು 3,000 ಅಡಿಗಳಷ್ಟು ಆಳದಲ್ಲಿ ಜೀವಿಸುವ ಈ ಮೀನುಗಳು ಕರಾವಳಿಗೆ ಬಂದಿರುವುದು ಪ್ರವಾಸಿಗರನ್ನು ಬೆಚ್ಚಿಬೀಳಿಸಿದೆ. ವಿಡಿಯೋದಲ್ಲಿ ಮಹಿಳೆಯೊಬ್ಬರು ಭಯ ಪಡದೆ ಆ ಮೀನುಗಳನ್ನು ಮತ್ತೆ ಸಮುದ್ರದ ಆಳಕ್ಕೆ ತಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.

ಜಪಾನ್ ಸಂಪ್ರದಾಯ ಮತ್ತು ನಂಬಿಕೆ

ಜಪಾನಿನ ಪುರಾಣಗಳ ಪ್ರಕಾರ, ಈ ಮೀನುಗಳನ್ನು "ರ್ಯುಗು ನೊ ಸುಕೈ" (Ryugu no tsukai) ಅಂದರೆ "ಸಮುದ್ರ ದೇವರ ಅರಮನೆಯ ಸಂದೇಶವಾಹಕ" ಎಂದು ಕರೆಯಲಾಗುತ್ತದೆ. ಭೂಕಂಪ ಅಥವಾ ಸುನಾಮಿ ಬರುವ ಮೊದಲು ಇವು ಮೇಲ್ಮೈಗೆ ಬರುತ್ತವೆ ಎಂಬ ಬಲವಾದ ನಂಬಿಕೆ ಜನಜನಿತವಾಗಿದೆ. ವಿಶೇಷವಾಗಿ 2011ರ ಜಪಾನ್ ಭೂಕಂಪದ ಮುನ್ನ ಇಂತಹ ಮೀನುಗಳು ಕಾಣಿಸಿಕೊಂಡಿದ್ದವು ಎಂಬುದು ಈ ಆತಂಕಕ್ಕೆ ಮುಖ್ಯ ಕಾರಣ.

ವಿಜ್ಞಾನಿಗಳು ಏನು ಹೇಳುತ್ತಾರೆ?

ಆದರೆ, ವಿಜ್ಞಾನಿಗಳು ಈ ನಂಬಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಓರ್‌ಫಿಶ್‌ಗಳು ಸಮುದ್ರದ ಮೇಲ್ಮೈಗೆ ಬರಲು ಹಲವು ನೈಸರ್ಗಿಕ ಕಾರಣಗಳಿರಬಹುದು ಎಂದು ಅವರು ವಿವರಿಸುತ್ತಾರೆ.
ಅನಾರೋಗ್ಯ ಅಥವಾ ಗಾಯ: ಮೀನುಗಳು ಅನಾರೋಗ್ಯಕ್ಕೆ ಒಳಗಾದಾಗ ಅಥವಾ ಅಸಹಾಯಕ ಸ್ಥಿತಿಯಲ್ಲಿದ್ದಾಗ ಪ್ರವಾಹಕ್ಕೆ ಸಿಲುಕಿ ದಡಕ್ಕೆ ಬರಬಹುದು.
ಸಮುದ್ರದ ಉಷ್ಣಾಂಶ: ಸಮುದ್ರದ ನೀರಿನ ಉಷ್ಣಾಂಶದಲ್ಲಿ ದಿಢೀರ್ ಬದಲಾವಣೆಯಾದಾಗ ಅಥವಾ ಬಲವಾದ ಸಮುದ್ರದ ಅಲೆಗಳ ಹೊಡೆತಕ್ಕೆ ಇವು ಮೇಲಕ್ಕೆ ಬರಬಹುದು.
ಆಹಾರದ ಹುಡುಕಾಟ: ಅಪರೂಪಕ್ಕೆ ಇವು ಆಹಾರ ಅರಸುತ್ತಾ ಆಳವಿಲ್ಲದ ಪ್ರದೇಶಕ್ಕೆ ಬರುವ ಸಾಧ್ಯತೆಯೂ ಇರುತ್ತದೆ.
ಒಟ್ಟಾರೆಯಾಗಿ, ಈ ಘಟನೆಯು ಒಂದೆಡೆ ಜನರಲ್ಲಿ ನೈಸರ್ಗಿಕ ವಿಕೋಪದ ಭಯ ಹುಟ್ಟಿಸಿದ್ದರೆ, ಇನ್ನೊಂದೆಡೆ ಸಮುದ್ರದ ಆಳದ ಅದ್ಭುತ ಜೀವಿಗಳ ದರ್ಶನವು ಪ್ರಕೃತಿ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ,(ಏಜೆನ್ಸೀಸ್​).