Nitin Gadkari | ಕೇಂದ್ರ ಸಚಿವ ನಿತಿನ್ ಗಡ್ಕರಿ
ನವದೆಹಲಿ: ವಾಹನ ಸವಾರರು ಎಥನಾಲ್ ಮಿಶ್ರಿತ ಪೆಟ್ರೋಲ್ ಬಳಸಲು ಇಷ್ಟಪಡದಿದ್ದರೆ, ನೂರಕ್ಕೆ ನೂರರಷ್ಟು ಶುದ್ಧ ಪೆಟ್ರೋಲ್ ಅನ್ನೇ ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಅದಕ್ಕಾಗಿ ಅವರು ಹೆಚ್ಚಿನ ಬೆಲೆಯನ್ನು ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇ20 ಇಂಧನದ ಕುರಿತು ಕೇಳಿಬರುತ್ತಿರುವ ಟೀಕೆಗಳು ಮತ್ತು ಆತಂಕಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಸರ್ಕಾರದ ಎಥನಾಲ್ ಮಿಶ್ರಣ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಒಂದೇ ಒಂದು ದೂರು ಕೂಡ ಬಂದಿಲ್ಲ!...
ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಚಿವ ಗಡ್ಕರಿ, ಇ20 ಇಂಧನ ಬಳಕೆಯಿಂದ ವಾಹನಗಳ ಇಂಜಿನ್ ಹಾಳಾಗುತ್ತದೆ ಎಂಬ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಇವೆಲ್ಲವೂ ತಪ್ಪು ಮಾಹಿತಿಯಿಂದ ಕೂಡಿದ ಅಪಪ್ರಚಾರಗಳು ಎಂದು ಕರೆದಿರುವ ಅವರು, ಇ20 ಇಂಧನ ಬಳಕೆಯಿಂದ ಇಂಜಿನ್ ದೋಷ ಉಂಟಾಗಿರುವ ಬಗ್ಗೆ ಸರ್ಕಾರಕ್ಕೆ ಇದುವರೆಗೆ ಯಾವುದೇ ಒಂದೇ ಒಂದು ದೂರು ಕೂಡ ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಇ20 ಪೆಟ್ರೋಲ್ ಲಭ್ಯವಿರುವ ಬಂಕ್‌ಗಳಲ್ಲಿ ಇ10 ಇಂಧನವನ್ನೂ ಸಹ ಪರ್ಯಾಯವಾಗಿ ಒದಗಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭಾರತವು ಈಗಾಗಲೇ ದೇಶಾದ್ಯಂತ ಶೇಕಡಾ 20 ರಷ್ಟು ಎಥನಾಲ್ ಮಿಶ್ರಣದ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದೆ ಮತ್ತು ದೇಶದ ಮೂಲೆ ಮೂಲೆಗಳಲ್ಲೂ ಇ20 ಇಂಧನ ಲಭ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಇ10 ಇಂಧನವನ್ನು ಪ್ರತ್ಯೇಕವಾಗಿ ನೀಡುವುದು ಅಸಾಧ್ಯದ ಮಾತು ಎಂದು ತಿಳಿಸಿದ್ದಾರೆ.
ಆಕ್ರೋಶದ ಹಿಂದೆ ರಾಜಕೀಯ ಪಿತೂರಿ
ಇಂಧನ ಬಂಕ್‌ಗಳಲ್ಲಿ ಗ್ರಾಹಕರಿಗೆ ವಿಭಿನ್ನ ಪ್ರಮಾಣದ ಎಥನಾಲ್ ಮಿಶ್ರಿತ ಇಂಧನಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡುವ ನಿರ್ಧಾರವು ಪೆಟ್ರೋಲಿಯಂ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ ಎಂದು ಗಡ್ಕರಿ ಹೇಳಿದ್ದಾರೆ. ಆದಾಗ್ಯೂ, ಈಗಾಗಲೇ ದೇಶದ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಶೇಕಡಾ 85 ರಷ್ಟು ಎಥನಾಲ್ ಮಿಶ್ರಿತ ಇ85 ಇಂಧನ ಲಭ್ಯವಿದ್ದು, ಇದನ್ನು ಫ್ಲೆಕ್ಸ್ ಫ್ಯುಯೆಲ್ ವಾಹನಗಳಲ್ಲಿ ಬಳಸಬಹುದಾಗಿದೆ. ದೇಶದ ಅರ್ಧ ಡಜನ್‌ಗೂ ಹೆಚ್ಚು ವಾಹನ ತಯಾರಕ ಕಂಪನಿಗಳು ಇಂತಹ ಫ್ಲೆಕ್ಸ್ ಫ್ಯುಯೆಲ್ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿವೆ. ಇ85 ಇಂಧನವು ಇ20 ಗಿಂತಲೂ ಕಡಿಮೆ ದರದಲ್ಲಿ ಸಿಗುವುದರಿಂದ ಗ್ರಾಹಕರಿಗೆ ಮುಂದಿನ ದಿನಗಳಲ್ಲಿ ಇಂಧನ ಆಯ್ಕೆಯ ಉತ್ತಮ ಅವಕಾಶಗಳು ಲಭ್ಯವಾಗಲಿವೆ ಎಂದು ಅವರು ಭರವಸೆ ನೀಡಿದ್ದಾರೆ.
ಇ20 ಇಂಧನದ ವಿರುದ್ಧ ನಡೆಯುತ್ತಿರುವ ಆಕ್ರೋಶದ ಹಿಂದೆ ರಾಜಕೀಯ ಪಿತೂರಿ ಅಡಗಿದ್ದು, ನನ್ನನ್ನು ಮತ್ತು ಸರ್ಕಾರದ ಯಶಸ್ವಿ ಎಥನಾಲ್ ನೀತಿಯನ್ನು ಗುರಿಯಾಗಿಸಿಕೊಂಡು ರಾಜಕೀಯ ಪ್ರೇರಿತ ಅಪಪ್ರಚಾರದ ವ್ಯವಸ್ಥಿತ ಅಭಿಯಾನವನ್ನು ನಡೆಸಲಾಗುತ್ತಿದೆ. ಇ20 ಇಂಧನವು ಇಂಜಿನ್‌ಗಳಿಗೆ ಹಾನಿ ಮಾಡುತ್ತದೆ ಎಂಬುದು ಕೇವಲ ಸುಳ್ಳು ಸುದ್ದಿ. ಈ ಹಿಂದೆ ಇ10 ಇಂಧನಕ್ಕೆ ಪೂರಕವಾಗಿದ್ದ ಎಲ್ಲಾ ವಾಹನಗಳು ಈಗ ಇ20 ಇಂಧನಕ್ಕೂ ಅತ್ಯಂತ ಸುರಕ್ಷಿತವಾಗಿ ಒಗ್ಗಿಕೊಳ್ಳುತ್ತವೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದರೂ, ಯಾವೊಬ್ಬ ವಾಹನ ಮಾಲೀಕನೂ ಇಂಜಿನ್ ಸಮಸ್ಯೆಯ ಬಗ್ಗೆ ಅಧಿಕೃತ ದೂರು ನೀಡಿಲ್ಲ ಎಂದು ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ(ಏಜೆನ್ಸೀಸ್).