ಪ್ರಧಾನಿ ಮೋದಿ ಬೆನ್ನಿಗೆ ನಿಂತ ನಟ, ಸಂಸದ ಕಮಲ್ ಹಾಸನ್
- ಮಧ್ಯಪ್ರಾಚ್ಯದಲ್ಲಿ ಮುಗಿಯದ ಸಂಘರ್ಷ
- ದೇಶದ ಸಂಪನ್ಮೂಲಗಳನ್ನು ಮಿತವಾಗಿ ಬಳಸಿ ಎಂದಿದ್ದ ಪ್ರಧಾನಿ ಮೋದಿ
- ಪ್ರಧಾನಿ ಮೋದಿ ಬೆನ್ನಿಗೆ ನಿಂತ ನಟ, ಸಂಸದ ಕಮಲ್ ಹಾಸನ್
- ರಾಜಕೀಯ ಮರೆತು ನಾವೆಲ್ಲಾ ಒಂದಾಗಬೇಕು
ತಮಿಳುನಾಡು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ದೇಶದಲ್ಲಿ ಮುಂದೆ ಸಂಭವಿಸಬಹುದಾದ ಆಪತ್ತನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ನೀಡಿರುವ, ಸಂಪನ್ಮೂಲಗಳ ಮಿತ ಬಳಕೆಯ ಕರೆಯನ್ನು ಬಹುಭಾಷಾ ನಟ ಹಾಗೂ ರಾಜ್ಯಸಭಾ ಸಂಸದ ಕಮಲ್ ಹಾಸನ್ (Kamal Haasan on Narendra Modi) ಸ್ವಾಗತಿಸಿದ್ದಾರೆ.
ತಮ್ಮ ಎಕ್ಸ್ (ಟ್ವಿಟರ್) ಖಾತೆಯನ್ನು ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ಭಾರತ ಈ ಮೊದಲು ಸಲ ಹಲವಾರು ಯುದ್ಧ, ಕೊರತೆ ಹಾಗೂ ಜಾಗತಿಕ ಬಿಕ್ಕಟ್ಟನ್ನು, ತ್ಯಾಗ ಮತ್ತು ಬಲಿದಾನದ ಮೂಲಕ ಮೆಟ್ಟಿ ನಿಂತಿದ್ದೆವೆ. ಈಗ ಮತ್ತೆ ನಮ್ಮಲ್ಲಿ ರಾಷ್ಟ್ರೀಯ ಭಾವನೆ ಎಚ್ಚರಗೊಳ್ಳುವ ಸಂದರ್ಭ ಬಂದಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಬೆನ್ನಿಗೆ ನಿಂತ ಕಮಲ್!
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ನಿಮಗೆಲ್ಲಾ ತಿಳಿದಿದೆ. ಅಲ್ಲಿ ನಡೆಯುತ್ತಿರುವ ಸಂಘರ್ಷದಿಂದ ನಾವು ಕಷ್ಟಪಡುವಂತಾಗಿದೆ. ಆದರೆ ನಾವು ನಮ್ಮ ಪ್ರಧಾನಿಗಳು ಹೇಳಿದಂತೆ ದೇಶದ ಸಂಪತ್ತನ್ನು ಅನಗತ್ಯವಾಗಿ ಬಳಸದೆ, ಶಕ್ತಿಯ ಉಳಿತಾಯ ಮಾಡಬೇಕಿದೆ.
ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಕಳೆದ ಹತ್ತು ವರ್ಷಗಳಲ್ಲಿ ಸೋಲಾರ್ ಶಕ್ತಿ ಕ್ಷೇತ್ರದಲ್ಲಿ ಭಾರತ ಗಣನೀಯ ಸಾಧನೆ ಮಾಡಿದೆ ಎಂದು ಕಮಲ್ ಹಾಸನ್ ಶ್ಲಾಘಿಸಿದ್ದಾರೆ. ಹಾಗೆಯೇ ಕಲ್ಲಿದ್ದಲು ಬಳಕೆ ಕಡಿಮೆಯಾಗಿ ಪರಮಾಣು ಶಕ್ತಿ ವೃದ್ಧಿ ಹೊಂದಿರುವುದು ಒಳ್ಳೆಯ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.
ವಾಜಪೇಯಿ ಮಾತನ್ನು ನೆನೆದ ನಟ!
ವಿಡಿಯೋದಲ್ಲಿ ಮಾತನಾಡುತ್ತಾ ಕಮಲ್ ಹಾಸನ್, ಈಗಾಗಲೇ ಸುಮಾರು 60 ದೇಶಗಳಲ್ಲಿ ಇಂಧನ ಬಳಕೆಗೆ ಸಂಬಂಧಿಸಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾವು ಇಂಧನ ಬಳಕೆಯನ್ನು ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು ಎಂದು ಅವರು ಹೇಳಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದಂತೆ, ಸರ್ಕಾರಗಳು ಬರುತ್ತವೆ, ಹೋಗುತ್ತವೆ ಆದರೆ ಈ ದೇಶ ಉಳಿಯಬೇಕು, ಆದ್ದರಿಂದ ಈ ಕಠಿಣ ಸ್ಥಿತಿಯಲ್ಲಿ ನಾವು ಪಕ್ಷದ ರಾಕಜೀಯ ಮಾಡುವುದಕ್ಕಿಂತ ರಾಷ್ಟ್ರದ ಹಿತಕ್ಕಾಗಿ ಒಂದಾಗಬೇಕಿದೆ ಎಂದು ಅವರು ಹೇಳಿದ್ದಾರೆ, (ಏಜನ್ಸೀಸ್).