ಸಿಎಂ ಎಂ.ಕೆ.ಸ್ಟಾಲಿನ್ 
ದೇಶ

ಸೀಟು ಹಂಚಿಕೆ, ಮೈತ್ರಿ ಬಗ್ಗೆ ಯೋಚಿಸಬೇಡಿ; ಎಲ್ಲಾ ಕ್ಷೇತ್ರಗಳಲ್ಲಿ ನಾನೇ ಅಭ್ಯರ್ಥಿ; ಡಿಎಂಕೆ ಕಾರ್ಯಕರ್ತರಿಗೆ ಸಿಎಂ ಎಂ.ಕೆ.ಸ್ಟಾಲಿನ್ ಸೂಚನೆ | M K Stalin

ಚೆನ್ನೈ: ಮುಂಬರುವ ವಿಧಾನಸಭೆಯ ಚುನಾವಣೆಗೆ ಸಿದ್ದತೆ ನಡೆಸಿರುವ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಮಿತ್ರ ಪಕ್ಷಗಳ ಜೊತೆಗಿನ ಮೈತ್ರಿ, ಸೀಟು ಹಂಚಿಕೆ ಸಂಬಂಧ ಅನಗತ್ಯ ಅಭಿಪ್ರಾಯಗಳು, ಗೊಂದಲ ಸೃಷ್ಟಿಸುವ ಹೇಳಿಕೆಗಳ ಬಗ್ಗೆ ಚಿಂತಿಸಬೇಡಿ. ಅವೆಲ್ಲವನ್ನೂ ನಾನು ನಿಭಾಯಿಸುತ್ತೇನೆ, ನೀವು ಕ್ಷೇತ್ರದಲ್ಲಿ ಕೆಲಸ ಮಾಡಿ ಎಂದು ಸೂಚನೆ ನೀಡಿದ್ದಾರೆ.
ಪಕ್ಷದ ಪ್ರಧಾನ ಕಚೇರಿ ಅಣ್ಣಾ ಅರಿವಲಯಂನಲ್ಲಿ ನಡೆದ ಜಿಲ್ಲಾ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿರುವ ಅವರು, ಡಿಎಂಕೆಯನ್ನು ವಿರೋಧಿಸುವ ಮತ್ತು ಅನಗತ್ಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಮೈತ್ರಿ ಪಕ್ಷಗಳ ಕೆಲವು ಕಾರ್ಯಕರ್ತರ ಪಿತೂರಿಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಆಂತರಿಕ ಭಿನ್ನಾಭಿಪ್ರಾಯಗಳಿಂದ ವಿಚಲಿತರಾಗಬೇಡಿ, ಪಕ್ಷಗಳ ನಡುವೆ ಸೀಟು ಹಂಚಿಕೆಯನ್ನು ನಾನು ನೋಡಿಕೊಳ್ಳುತ್ತೇನೆ. ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿ ನಾನೇ ಅಭ್ಯರ್ಥಿ, ತಳಮಟ್ಟದ ಕೆಲಸವನ್ನು 100% ಬದ್ಧತೆಯೊಂದಿಗೆ ಕೆಲಸ ಮುಂದುವರಿಸಿ ಎಂದು ತಿಳಿಸಿದ್ದಾರೆ.
ಇನ್ನೂ ಚುನಾವಣೆಗೆ ಸಿದ್ದತೆ ನಡೆಸಿರುವ ಡಿಎಂಕೆ, ಸರಣಿ ಪ್ರಚಾರ ಕಾರ್ಯಕ್ರಮಗಳನ್ನು ಘೋಷಿಸಿದೆ. ಫೆಬ್ರವರಿ 1 ರಿಂದ ಮಾರ್ಚ್ 8 ರವರೆಗೆ ರಾಜ್ಯಾದ್ಯಂತ ಮನೆ ಮನೆಗೆ ಮಹಿಳಾ ಸಂಪರ್ಕ ಕಾರ್ಯಕ್ರಮ 'ವೆಲ್ಲಮ್ ತಮಿಳು ಪೆಂಕಲ್' ಅನ್ನು ಪ್ರಾರಂಭಿಸಲಿದೆ ಎನ್ನಲಾಗಿದೆ. ಜೊತೆಗೆ ಬೂತ್ ಮಟ್ಟದ ಕಾರ್ಯಕರ್ತರಿಗೆ ತರಬೇತಿ ಸಮಾವೇಶಗಳನ್ನು ಹಮ್ಮಿಕೊಂಡಿದೆ.
ಹಾಗೆಯೇ ಮಾರ್ಚ್ 8ರಂದು ತಿರುಚಿಯಲ್ಲಿ ಸ್ಟಾಲಿನ್ ಮುಂದುವರೆಯಲಿ; ತಮಿಳುನಾಡು ಗೆಲ್ಲಲಿ ಎಂಬ ಬೃಹತ್​ ಸಮ್ಮೇಳನವನ್ನು ಹಮ್ಮಿಕೊಂಡಿದೆ. ಅಲ್ಲಿ 10 ಲಕ್ಷ ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ (ಏಜೆನ್ಸೀಸ್).