Faf Du Plessis | ಫಾಫ್ ಡು ಪ್ಲೆಸಿಸ್
Faf Du Plessis: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ 'ಪ್ಲೇಯರ್ ಟ್ರೇಡ್' ಒಪ್ಪಂದದ ಬಳಿಕ ಐಪಿಎಲ್ ಅಖಾಡದಲ್ಲಿ ಅನೇಕ ಬದಲಾವಣೆಗಳಾಗಿದ್ದು, ಸಂಜು ಸ್ಯಾಮ್ಸನ್ ಸಿಎಸ್‌ಕೆ ಪಾಲಾದರೆ, ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ರಾಯಲ್ಸ್ ಪಾಳಯ ಸೇರಿದ್ದಾರೆ.
ಸದ್ಯ ಈ ಬದಲಾವಣೆಯು ರಾಜಸ್ಥಾನದ ಸ್ಫೋಟಕ ಓಪನರ್ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಶೈಲಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದು ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಕಳೆದ ಆವೃತಿಯವರೆಗೂ ಯಶಸ್ವಿ ಜೈಸ್ವಾಲ್ ಕ್ರೀಸ್‌ಗೆ ಬಂದ ತಕ್ಷಣ ಅಬ್ಬರಿಸುತ್ತಿದ್ದರು, ಇದರ ಹಿಂದಿದ್ದ ಕಾರಣವೆಂದರೆ ಅದು ಸಂಜು ಸ್ಯಾಮ್ಸನ್ ಎಂಬ ಅನುಭವಿ ಬ್ಯಾಟರ್. ಜೈಸ್ವಾಲ್ ರನ್ ಗಳಿಸುವ ಭರದಲ್ಲಿ ಬೇಗನೆ ಔಟಾದರೂ ಸ್ಯಾಮ್ಸನ್ ಇನ್ನಿಂಗ್ಸ್ ನಿಭಾಯಿಸುತ್ತಾರೆ ಎಂಬ ನಂಬಿಕೆ ತಂಡಕ್ಕಿತ್ತು. ಆದರೆ ಈಗ ಸಂಜು ನಿರ್ಗಮನದಿಂದಾಗಿ, ಜೈಸ್ವಾಲ್ ಕೇವಲ ಸ್ಫೋಟಕ ಬ್ಯಾಟರ್ ಆಗಿ ಉಳಿಯದೆ, ತಂಡದ ಆಧಾರಸ್ತಂಭವಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ವೈಭವ್ ಸೂರ್ಯವಂಶಿ ಜೊತೆ ಇನ್ನಿಂಗ್ಸ್ ಆರಂಭ!
ಸದ್ಯ ಸಂಜು ಅನುಪಸ್ಥಿತಿಯಲ್ಲಿ ೧೪ ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಇನ್ನಿಂಗ್ಸ್ ಆರಂಭಿಸಲಿದ್ದು, ಆಕ್ರಮಣಕಾರಿ ಆಟಕ್ಕೆ ಹೆಸರಾಗಿರುವ ವೈಭವ್ಗೆ ದೊಡ್ಡ ಬೌಲರ್‌ಗಳ ವಿರುದ್ಧ ಅನುಭವದ ಕೊರತೆ ಇದೆ. ಆದ್ದರಿಂದ ಆ ಯುವ ಕ್ರಿಕೆಟಿಗನೊಂದಿಗೆ ಬ್ಯಾಟಿಂಗ್ ನಡೆಸುವಾಗ, ಜೈಸ್ವಾಲ್ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕೇ ಅಥವಾ ತನ್ನ ಸಹಜ ಶೈಲಿಯಲ್ಲೇ ಆಡಬೇಕೇ ಎಂಬ ಗೊಂದಲ ಮೂಡಿದೆ.
ಫಾಫ್ ಡು ಪ್ಲೆಸಿಸ್ ನೀಡಿದ ಸಲಹೆ ಏನು?
ಈ ಕುರಿತು ಜಿಯೋಸ್ಟಾರ್‌ನ ಗೇಮ್ ಪ್ಲಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ದಕ್ಷಿಣ ಆಫ್ರಿಕಾದ ದಿಗ್ಗಜ ಫಾಫ್ ಡು ಪ್ಲೆಸಿಸ್, ಜೈಸ್ವಾಲ್ ವೃತ್ತಿಜೀವನದಲ್ಲಿ ಇದೊಂದು ಪ್ರಮುಖ ಕಲಿಕೆಯ ಘಟ್ಟ ಎಂದಿದ್ದಾರೆ.
ಜೈಸ್ವಾಲ್ ಅವರೊಂದಿಗೆ ಇದುವರೆಗೆ ಸಂಜು ಸ್ಯಾಮ್ಸನ್ ಎಂಬ ಸ್ಥಿರ ಪ್ರದರ್ಶನದ ಬ್ಯಾಟರ್ ಇದ್ದರು. ಈಗ ಆ ರಕ್ಷಣೆ ಇಲ್ಲದಿದ್ದಾಗ, ಅಭಿಮಾನಿಗಳು ಜೈಸ್ವಾಲ್ರನ್ನು ಹಿರಿಯ ಆಟಗಾರ ಎಂಬ ಜವಾಬ್ದಾರಿಯುತ ದೃಷ್ಟಿಯಿಂದ ನೋಡುತ್ತಾರೆ. ಆದರೆ, ಜೈಸ್ವಾಲ್ ಜವಾಬ್ದಾರಿಯ ಬಗ್ಗೆ ಹೆಚ್ಚು ಯೋಚಿಸುತ್ತಾ ತಮ್ಮ ನೈಸರ್ಗಿಕ ಆಟವನ್ನು ಬದಲಾಯಿಸಿಕೊಳ್ಳುವುದು ಸರಿಯಲ್ಲ ಎನ್ನುವುದು ಫ್ಲೆಸಿಸ್ ಅಭಿಪ್ರಾಯ.
ರಾಯಲ್ಸ್ ಮ್ಯಾನೇಜ್‌ಮೆಂಟ್ ಮುಂದಿರುವ ಸವಾಲು
ಸಂಜು ಸ್ಯಾಮ್ಸನ್ ಕೇವಲ ಬ್ಯಾಟರ್ ಆಗಿರಲಿಲ್ಲ, ತಂಡದ ನಾಯಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಈಗ ತಂಡದಲ್ಲಿ ಜಡೇಜಾ ಮತ್ತು ಸ್ಯಾಮ್ ಕರನ್ ಅಂತಹ ಆಲ್ ರೌಂಡರ್‌ಗಳು ಇದ್ದರೂ, ಟಾಪ್ ಆರ್ಡರ್‌ನಲ್ಲಿ ಸಂಜು ಅವರ ರನ್‌ಗಳ ಸ್ಥಿರತೆಯನ್ನು ತುಂಬುವವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ಜೈಸ್ವಾಲ್ ಮೇಲೆ ಹೆಚ್ಚಿನ ಒತ್ತಡ ಬಿದ್ದರೆ ಅದು ಅವರ ವೈಯಕ್ತಿಕ ಪ್ರದರ್ಶನದ ಮೇಲೆ ಪೆಟ್ಟು ಬೀಳುವ ಸಾಧ್ಯತೆಯೂ ಇದೆ(ಏಜೆನ್ಸೀಸ್).