Sonam Wangchuk 
ದೇಶ

'ಫುನ್ಸುಖ್ ವಾಂಗ್ಡು​'ರನ್ನು ಸಾಯಲು ಬಿಡಬೇಡಿ'; ಸೋನಮ್ ವಾಂಗ್ಚುಕ್ ಹೋರಾಟದ ಪರ ನಿಂತ 3 ಈಡಿಯಟ್ಸ್' ಚತುರ್!

ನವದೆಹಲಿ: 3 ಈಡಿಯಟ್ಸ್​ ಸಿನಿಮಾದಲ್ಲಿ ಚತುರ್​​ ಪಾತ್ರದ ಮೂಲಕ ಹೆಚ್ಚು ಹೆಸರು ಮಾಡಿಕೊಂಡಿರುವ ​ ನಟ ಓಮಿ ವೈದ್ಯ ಅವರು ಸದ್ಯ ಶಿಕ್ಷಣ ತಜ್ಞ ಮತ್ತು ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್(Sonam Wangchuk) ಪರ ಮಾತನಾಡಿದ್ದಾರೆ.
ನೀಟ್ ಸೇರಿದಂತೆ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ನಡೆದ ವೈಫಲ್ಯಗಳ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ, ಕಾಕ್ರೋಚ್​​ ಜನತಾ ಪಾರ್ಟಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಅದರ ಭಾಗವಾಗಿ ಶಿಕ್ಷಣ ತಜ್ಞ ಮತ್ತು ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ 19ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆ ಅವರ ದೇಹದ ಆರೋಗ್ಯದಲ್ಲಿ ಏರುಪೇರುಂಟಾಗಿದೆ. ಇದನ್ನು ಉದ್ದೇಶಿಸಿ ಬಾಲಿವುಡ್​ ನಟ ಓಮ್ನಿ ವೈದ್ಯ ಮಾತನಾಡಿದ್ದಾರೆ.

ಓಮ್ನಿ ವೈದ್ಯ ಹೇಳಿದ್ದೇನು?

'ನನಗೆ ಫುನ್ಸುಖ್ ವಾಂಗ್ಡು ಸಾಯುವುದು ಇಷ್ಟವಿಲ್ಲ. ಹಲೋ ಇಡಿಯಟ್ಸ್, ಗುರುತಿಸಿದ್ರಾ? ನಾನು 3 ಇಡಿಯಟ್ಸ್ ಚಿತ್ರದ ಚತುರ್ ಮತ್ತು 'ದಿ ಆಫೀಸ್' ಸರಣಿಯ ಸಾದಿಕ್. ನಾನು ನಿಮ್ಮೊಂದಿಗೆ ಒಂದು ಪ್ರಮುಖ ಸಂದೇಶವನ್ನು ಹಂಚಿಕೊಳ್ಳಬೇಕಿದೆ. ನಾನು ಹೆಚ್ಚಾಗಿ ವಿಡಿಯೋ ಸಂದೇಶವನ್ನು ಕೊಡೋದಿಲ್ಲ. ಆದರೆ, ಇವತ್ತು ವಿಡಿಯೋ ಮಾಡುವ ಪರಿಸ್ಥಿತಿ ಇದೆ. ದಯವಿಟ್ಟು ನನ್ನ ಮಾತು ಕೇಳಿ' ಎಂದು ಮಾತನ್ನು ಆರಂಭಿಸಿದ್ದಾರೆ.
"3 ಇಡಿಯಟ್ಸ್' ಚಿತ್ರದಲ್ಲಿ ಅಮೀರ್ ಖಾನ್ ನಿರ್ವಹಿಸಿದ ಫುನ್ಸುಖ್ ವಾಂಗ್ಡು ಪಾತ್ರವು ನಿಜ ಜೀವನದ ಲಡಾಖ್ ಮೂಲದ ಇಂಜಿನಿಯರ್, ನಾವೀನ್ಯಕಾರ, ಶಿಕ್ಷಣ ತಜ್ಞ ಮತ್ತು ಸುಧಾರಕರಾದ ಸೋನಮ್ ವಾಂಗ್ಚುಕ್ ಅವರ ಜೀವನದಿಂದ ಪ್ರೇರಿತವಾಗಿದೆ ಎಂಬುದು ನಿಮಗೆ ತಿಳಿದಿದೆಯೇ? ನಾನು ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದೇನೆ. ಅವರು ಅತ್ಯಂತ ಸರಳ ಹಾಗೂ ಅದ್ಭುತ ವ್ಯಕ್ತಿತ್ವದವರಾಗಿದ್ದಾರೆ ಎಂದು ಕೊಂಡಾಡಿದ್ದಾರೆ.
ಮುಂದುವರೆದು, ಪ್ರಸ್ತುತ ದೀರ್ಘಾವಧಿಯ ಉಪವಾಸ ಸತ್ಯಾಗ್ರಹದಲ್ಲಿದ್ದಾರೆ. ಅವರ ರಕ್ತದ ಸಕ್ಕರೆ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಮಾಧ್ಯಮಗಳು ಇದನ್ನು ವರದಿ ಮಾಡುತ್ತಿವೆಯೋ ಇಲ್ಲವೋ ನನಗೆ ತಿಳಿದಿಲ್ಲ, ಆದರೆ ಇದು ಅತ್ಯಂತ ಗಂಭೀರವಾದ ವಿಷಯ. ನೀವು ಅವರ ನಿಲುವುಗಳನ್ನು ಒಪ್ಪಲಿ ಅಥವಾ ಬಿಡಲಿ, ಆದರೆ ಈ ವ್ಯಕ್ತಿ ಸಾವನ್ನಪ್ಪುವುದನ್ನು ನಾನು ಬಯಸುವುದಿಲ್ಲ. ನಿಮ್ಮ ದೈನಂದಿನ ಜೀವನದಿಂದ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು, ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಪ್ರಶಾಂತ್ ಭೂಷಣ್ ಹೇಳಿದ್ದಿಷ್ಟು!

ಪ್ರಸಿದ್ಧ ವಕೀಲ ಮತ್ತು ಕಾರ್ಯಕರ್ತ ಪ್ರಶಾಂತ್ ಭೂಷಣ್ ಅವರು ಕೂಡ ಓಮಿ ವೈದ್ಯ ಅವರ ಈ ವಿಡಿಯೋವನ್ನು ಹಂಚಿಕೊಂಡು, 3 ಇಡಿಯಟ್ಸ್ ಚಿತ್ರದ ಕನಿಷ್ಠ ಒಂದು ಪಾತ್ರವಾದರೂ ಸೋನಮ್ ವಾಂಗ್ಚುಕ್ ಅವರ ಬೆಂಬಲಕ್ಕೆ ನಿಂತಿದೆ. ಇತ್ತ ಅಮೀರ್ ಖಾನ್ ಏನು ಮಾಡುತ್ತಾರೆ ಎಂದು ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.