neha kakkar 
ದೇಶ

ನನ್ನ ಪತಿಯನ್ನು ಎಳೆದು ತರಬೇಡಿ! ವಿಚ್ಛೇದನ ವದಂತಿಗೆ ಬ್ರೇಕ್ ಹಾಕಿದ ನೇಹಾ ಕಕ್ಕರ್..

ಪ್ರಮುಖ ಮುಖ್ಯಾಂಶಗಳು

  • ಸಂಬಂಧ ಮತ್ತು ಕೆಲಸಕ್ಕೆ ಗುಡ್ ಬೈ ಹೇಳಿದ ನೇಹಾ ಕಕ್ಕರ್?
  • ಡಿವೋರ್ಸ್ ಗಾಳಿ ಸುದ್ದಿಗೆ ನೇಹಾ ಕಕ್ಕರ್ ಖಡಕ್ ಪ್ರತಿಕ್ರಿಯೆ
  • ಸಂಬಂಧ ಮತ್ತು ಕೆಲಸದಿಂದ ವಿರಾಮ ಎಂದಿದ್ದೇಕೆ ಖ್ಯಾತ ಗಾಯಕಿ?
ಮುಂಬೈ: ಬಾಲಿವುಡ್‌ನ ಖ್ಯಾತ ಗಾಯಕಿ ನೇಹಾ ಕಕ್ಕರ್ ( neha kakkar) ಮತ್ತು ಅವರ ಪತಿ ರೋಹನ್‌ಪ್ರೀತ್ ಸಿಂಗ್ ನಡುವೆ ಎಲ್ಲವೂ ಸರಿಯಿಲ್ಲ, ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳು ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದವು. ಇದೀಗ ಈ ಎಲ್ಲಾ ವದಂತಿಗಳಿಗೆ ಸ್ವತಃ ನೇಹಾ ಕಕ್ಕರ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ನೇಹಾ ಕಕ್ಕರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ "ಜವಾಬ್ದಾರಿಗಳು, ಸಂಬಂಧಗಳು ಮತ್ತು ಕೆಲಸದಿಂದ ವಿರಾಮ ತೆಗೆದುಕೊಳ್ಳುವ ಸಮಯ ಬಂದಿದೆ. ನಾನು ಮತ್ತೆ ಬರುತ್ತೇನೋ ಇಲ್ಲವೋ ತಿಳಿಯದು. ಫೋಟೋಗ್ರಾಫರ್‌ಗಳು ತನ್ನನ್ನು ಫೋಟೋ ತೆಗೆಯಬೇಡಿ ಎಂದು ವಿನಂತಿಸಿದ್ದರು. ಈ ಪೋಸ್ಟ್ ಬೆನ್ನಲ್ಲೇ, ನೇಹಾ ಮತ್ತು ರೋಹನ್‌ಪ್ರೀತ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಚರ್ಚೆಗಳು ಆರಂಭವಾದವು.
ವದಂತಿಗಳು ಅತಿರೇಕಕ್ಕೆ ಹೋದಾಗ ಮತ್ತೊಂದು ಪೋಸ್ಟ್ ಹಂಚಿಕೊಂಡ ನೇಹಾ, "ದಯವಿಟ್ಟು ಈ ವಿಷಯದಲ್ಲಿ ನನ್ನ ಪತಿ ಅಥವಾ ನನ್ನ ಕುಟುಂಬವನ್ನು ಎಳೆದು ತರಬೇಡಿ. ಅವರು ಅತ್ಯಂತ ಪ್ರಾಮಾಣಿಕ ವ್ಯಕ್ತಿಗಳು ಮತ್ತು ಇಂದು ನಾನು ಏನಾಗಿದ್ದೇನೋ ಅದು ಅವರ ಬೆಂಬಲದಿಂದಾಗಿ. ನಾನು ಕೆಲವು ವ್ಯಕ್ತಿಗಳು ಮತ್ತು ಈ ಸಿಸ್ಟಮ್ ಬಗ್ಗೆ ಬೇಸರಗೊಂಡಿದ್ದೇನೆ ಅಷ್ಟೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವಾಗ ನಾನು ಅಷ್ಟು ಭಾವನಾತ್ಮಕವಾಗಿರಬಾರದಿತ್ತು ಎಂದು ಈಗ ಅನಿಸುತ್ತಿದೆ. ಮಾಧ್ಯಮಗಳು ಸಣ್ಣ ವಿಷಯವನ್ನು ಹೇಗೆ ಬೆಟ್ಟದಷ್ಟು ಮಾಡುತ್ತಾರೆ ಎಂಬುದು ನನಗೆ ತಿಳಿದಿದೆ. ಇದರಿಂದ ಪಾಠ ಕಲಿತಿದ್ದೇನೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ಮುಂದೆ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲಾರೆ. ಭಾವನಾತ್ಮಕವಾಗಿರುವ ನೇಹಾ ಈ ಪ್ರಪಂಚಕ್ಕೆ ಸ್ವಲ್ಪ ಜಾಸ್ತಿಯೇ ಎಮೋಷನಲ್ ಆಗಿಬಿಟ್ಟಳು. ಸದ್ಯದಲ್ಲೇ ದೊಡ್ಡ ಮಟ್ಟದ ಸುದ್ದಿಯೊಂದಿಗೆ (Bang) ನಾನು ಮತ್ತೆ ಮರಳುತ್ತೇನೆ, ಧನ್ಯವಾದಗಳು" ಎಂದು ಪೋಸ್ಟ್ ಕೊನೆಗೊಳಿಸಿದ್ದಾರೆ.
ನೇಹಾ ಕಕ್ಕರ್ ಮತ್ತು ರೋಹನ್‌ಪ್ರೀತ್ ಸಿಂಗ್ 2020ರ ಅಕ್ಟೋಬರ್‌ನಲ್ಲಿ ವಿವಾಹವಾಗಿದ್ದರು. ಸದ್ಯ ಗಾಯಕಿ ತನ್ನ ವೈಯಕ್ತಿಕ ಶಾಂತಿಗಾಗಿ ವಿರಾಮ ಕೋರಿದ್ದಾರೆ ಎಂಬುದು ಸ್ಪಷ್ಟವಾಗಿದೆ.