ನೂತನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯಬೇಡಿ, ಚುನಾವಣೆ ಬಳಿಕ ನಾವೇ ಅಧಿಕಾರಕ್ಕೆ ಬರೋದು ಎಂದು ಪಶ್ಚಿಮ ಬಂಗಾಳದ ಉನ್ನತ ಅಧಿಕಾರಿಗಳಿಗೆ ಬುಧವಾರ(ಜ. 28) ನೂತನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್(Nitin Naveen) ಎಚ್ಚರಿಕೆ ನೀಡಿದ್ದಾರೆ.
ಪಶ್ಚಿಮ ಬರ್ದ್ವಾನ್ ಜಿಲ್ಲೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿರುವ ಅವರು, ನಾನು ಪಶ್ಚಿಮ ಬಂಗಾಳದ ಎಲ್ಲಾ ಜಿಲ್ಲಾಧಿಕಾರಿಗಳು, ಎಸ್‌ಡಿಪಿಗಳಿಗೆ ಹೇಳುತ್ತಿದ್ದೇನೆ, ಪ್ರಸ್ತುತ ತೃಣಮೂಲ ಕಾಂಗ್ರೆಸ್ ಸರ್ಕಾರದ ದಿನಗಳು ಎಣಿಸಲ್ಪಟ್ಟಿವೆ. ಅವರ ತಾಳಕ್ಕೆ ತಕ್ಕಂತೆ ಕುಣಿಯಬೇಡಿ, ಕೈಗೊಂಬೆಗಳಾಗಬೇಡಿ. ನೀವು ಆಡಳಿತ ಸಿಬ್ಬಂದಿ. ಜನರ ಪರವಾಗಿ ನಿಂತುಕೊಳ್ಳಿ, ಬಿಜೆಪಿ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ ಎಂದು ಹೇಳಿದ್ದಾರೆ.
ಎಸ್ಐಆರ್ ಬಗ್ಗೆ ಸಿಎಂ ಬ್ಯಾನರ್ಜಿಯವರ ದುಃಖಕ್ಕೆ ಕಾರಣವೆಂದರೆ, ಚುನಾವಣೆ ಆಯೋಗ ಈ ಪ್ರಕ್ರಿಯೆ ಮೂಲಕ ಮತದಾರ ಪಟ್ಟಿಯಿಂದ ನುಸುಳುಕೋರರನ್ನು ತೆಗೆದು ಹಾಕಲು ಪ್ರಯತ್ನಿಸುತ್ತಿದೆ. ನೆನಪಿಡಿ ಬಾಂಗ್ಲಾದೇಶದಿಂದ ಬಂದ ಅಕ್ರಮ ನುಸುಳುಕೋರರಿಗೆ ಇಲ್ಲಿರಲು ಯಾವುದೇ ಹಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಅಧಿಕಾರಕ್ಕೆ ಬಂದ ನಂತರ ಹಲವಾರು ರಾಜ್ಯಗಳಲ್ಲಿ ಜಂಗಲ್ ರಾಜ್ ಅನ್ನು ಕೊನೆಗೊಳಿಸಿದ್ದೇವೆ. ಪಶ್ಚಿಮ ಬಂಗಾಳದಲ್ಲಿಯೂ ಅದನ್ನು ಕೊನೆಗೊಳಿಸುತ್ತೇವೆ. ಬಂಗಾಳದ ಎಲ್ಲಾ ತಳಮಟ್ಟದ ಬಿಜೆಪಿ ಕಾರ್ಯಕರ್ತರು ಅಂತಿಮ ಕ್ಷಣಗಣನೆಗೆ ಸಿದ್ಧರಾಗಿರಲು ನಾನು ಮನವಿ ಮಾಡುತ್ತೇನೆ. ಇಡೀ ಬಿಜೆಪಿ ಕುಟುಂಬ ನಿಮ್ಮ ಹಿಂದೆ ಇದೆ ಎಂದಿದ್ದಾರೆ (ಏಜೆನ್ಸೀಸ್).