ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್-ಮಂತರ್ನಲ್ಲಿ ನಡೆದಿದ್ದ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ವಿರೋಧ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ಹೋರಾಟದಲ್ಲಿ ಮುನ್ನಲೆಗೆ ಬಂದ ಹೆಸರೇ ನೇಹಾ ಬೋರಾ.
ಈ ನೇಹಾ ಬೋರಾ 'ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್' (AISA) ಅಧ್ಯಕ್ಷರಾಗಿದ್ದು, ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಡುವ ರೀತಿ ಮತ್ತು ನೇರನುಡಿಗಳಿಂದ ಯುವಜನರ ಗಮನ ಸೆಳೆದಿದ್ದರು. ಇದೀಗ ನೇಹಾ ಬೋರಾ ತಮ್ಮ ವೈಯಕ್ತಿಕ ಲಿಂಗ ಗುರುತಿನ (Gender Identity) ಬಗ್ಗೆ ನೀಡಿರುವ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ನೇಹಾ ಬೋರಾ, ತಾವು ಪುರುಷ ಅಥವಾ ಸ್ತ್ರೀ ಎಂಬ ಚೌಕಟ್ಟಿಗೆ ಒಳಪಡುವುದಿಲ್ಲ, ಬದಲಾಗಿ ತಾನೊಬ್ಬ 'ನಾನ್-ಬೈನರಿ' ವ್ಯಕ್ತಿ ಎಂದು ಸ್ಪಷ್ಟಪಡಿಸಿದ್ದಾರೆ. "ಅನೇಕ ಮಾಧ್ಯಮಗಳು ಇಂದಿಗೂ ನನ್ನನ್ನು 'ಅವಳು' ಎಂದು ಸಂಬೋಧಿಸುತ್ತವೆ. ಆದರೆ ನಾನು ಸ್ತ್ರೀಯೂ ಅಲ್ಲ, ಪುರುಷನೂ ಅಲ್ಲ; ನನ್ನನ್ನು ಕೇವಲ ಒಬ್ಬ 'ವ್ಯಕ್ತಿ'ಯಾಗಿ ನೋಡಬೇಕು" ಎಂದು ಅವರು ತಿಳಿಸಿದ್ದಾರೆ.
ಮಾಧ್ಯಮಗಳಲ್ಲಿ ತಮ್ಮನ್ನು ತಪ್ಪಾಗಿ ಸಂಬೋಧಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ನೇಹಾ ಬೋರಾ, "ಒಂದೇ ಮಾತಿನಲ್ಲಿ ಜನರು ನನ್ನನ್ನು ಒಮ್ಮೆ 'ಅವಳು' ಎಂದರೆ, ಮತ್ತೊಮ್ಮೆ 'ಅವರು' ಎಂದು ಕರೆಯುತ್ತಾರೆ. ನಾನು ಇದನ್ನು ಸಹಜವಾಗಿ ಸ್ವೀಕರಿಸಿದ್ದೇನೆ. ನಾನ್-ಬೈನರಿ ವ್ಯಕ್ತಿಗಳನ್ನು ಹೇಗೆ ಕರೆಯಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಜನರಿಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಈಗ ಹಲವು ಮಾಧ್ಯಮಗಳು ನನ್ನನ್ನು 'ಒಬ್ಬ ವ್ಯಕ್ತಿ' ಎಂದು ಗುರುತಿಸಲು ಶುರುಮಾಡಿವೆ" ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ನಾನ್-ಬೈನರಿ ವ್ಯಕ್ತಿಗಳು ಟ್ರಾನ್ಸ್ಜೆಂಡರ್ಗಳಿಗಿಂತ ಭಿನ್ನವಾಗಿರುತ್ತಾರೆ. ಇವರನ್ನು ಕೇವಲ ಪುರುಷ ಅಥವಾ ಸ್ತ್ರೀ ಎಂದು ಗುರುತಿಸಲು ಸಾಧ್ಯವಿಲ್ಲ. ಕೆಲವರು ತಮ್ಮಲ್ಲಿ ಪುರುಷ ಮತ್ತು ಸ್ತ್ರೀ ಎರಡೂ ಗುಣಗಳಿವೆ ಎಂದು ಭಾವಿಸಿದರೆ, ಇನ್ನು ಕೆಲವರು ಯಾವುದೇ ಲಿಂಗದ ಹಣೆಪಟ್ಟಿ ಇಲ್ಲದೆ ಕೇವಲ 'ಮನುಷ್ಯ' ಅಥವಾ 'ವ್ಯಕ್ತಿ'ಯಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ನೇಹಾ ಬೋರಾ ಕೂಡ ಇದೇ ವರ್ಗಕ್ಕೆ ಸೇರಿದ್ದು, ತಮ್ಮನ್ನು ಯಾವುದೇ ಲಿಂಗದ ಚೌಕಟ್ಟಿನಲ್ಲಿ ಬಂಧಿಸಬಾರದು ಎಂದು ಹೇಳಿದ್ದಾರೆ.
ಈ ವಿಷಯವನ್ನು ಜನರಿಗೆ ಅರ್ಥಮಾಡಿಸುವುದು ಜ್ಞಾನೇಶ್ ಕುಮಾರ್ ಪ್ರಕರಣವನ್ನು ವಿವರಿಸಿದಷ್ಟೇ ಕಷ್ಟಕರವಾಗಿದೆ ಎಂದು ನೇಹಾ ಬೋರಾ ಅಭಿಪ್ರಾಯಪಟ್ಟಿದ್ದಾರೆ. "ಮೊದಲೆಲ್ಲಾ ಜನರಿಗೆ ಇದರ ಬಗ್ಗೆ ಏನೂ ತಿಳಿದಿರಲಿಲ್ಲ. ಆದರೆ ಈಗ ಕನಿಷ್ಠಪಕ್ಷ ಈ ಬಗ್ಗೆ ಚರ್ಚೆ ಶುರುವಾಗಿದೆ, ಇದೇ ಒಂದು ದೊಡ್ಡ ಬದಲಾವಣೆ" ಎಂದು ಅವರು ಹೇಳಿಕೊಂಡಿದ್ದಾರೆ.
ಮೂಲತಃ ಉತ್ತರಾಖಂಡದವರಾದ ನೇಹಾ ಬೋರಾ, ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಎಂ.ಎ ಪದವಿ ಪಡೆದಿದ್ದಾರೆ. ಸದ್ಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯ (JNU) ದಲ್ಲಿ ಪಿಎಚ್ಡಿ ಮಾಡುತ್ತಿರುವ ಇವರು, ಅಲ್ಲಿನ ಎಡಪಂಥೀಯ ವಿದ್ಯಾರ್ಥಿ ರಾಜಕಾರಣದ ಪ್ರಮುಖ ಮುಖವಾಗಿದ್ದಾರೆ.
ಈ ಹಿಂದೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಸೋನಮ್ ವಾಂಗ್ಚುಕ್ ಅವರೊಂದಿಗೆ ಜಂತರ್ ಮಂತರ್ನಲ್ಲಿ ನಡೆದ ಉಪವಾಸ ಸತ್ಯಾಗ್ರಹದಲ್ಲೂ ಇವರು ಕಾಣಿಸಿಕೊಂಡಿದ್ದರು. ಆ ಬಳಿಕ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಬೀದಿಗಿಳಿದು ಪ್ರತಿಭಟಿಸಿದ್ದರು. ಅಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೂ ನೇಹಾ ಬೋರಾ ಆಗಾಗ್ಗೆ ಕಾಣಿಸಿಕೊಳ್ಳುವ ಮೂಲಕ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದಾರೆ, (ಏಜೆನ್ಸೀಸ್).