ಲಂಡನ್‌ನಲ್ಲಿ ವಿಜಯ್ ಮಲ್ಯ, ನೀರವ್ ಮೋದಿಗೆ ನೀಡಿದ್ದ ಖಡಕ್ ಎಚ್ಚರಿಕೆ ಏನು?
- ಮಲ್ಯ-ನೀರವ್ ಮೋದಿ ಸೀಕ್ರೆಟ್ ಭೇಟಿ
- ಲಂಡನ್‌ನಲ್ಲಿ ವಿಜಯ್ ಮಲ್ಯ, ನೀರವ್ ಮೋದಿಗೆ ನೀಡಿದ್ದ ಖಡಕ್ ಎಚ್ಚರಿಕೆ ಏನು?
- 'ಡೈಮಂಡ್ ಕಿಂಗ್' ಪಾಡ್‌ಕಾಸ್ಟ್‌ನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ರಹಸ್ಯ
ನವದೆಹಲಿ: ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ವಂಚಿಸಿ ಲಂಡನ್‌ಗೆ ಪರಾರಿಯಾಗಿರುವ ಆರ್ಥಿಕ ಅಪರಾಧಿಗಳಾದ ವಿಜಯ್ ಮಲ್ಯ ಮತ್ತು ನೀರವ್ ಮೋದಿ (Vijay Mallya on Nirav Modi) ಕುರಿತಾದ ರೋಚಕ ಸಂಗತಿಗಳು ಈಗ ಹೊರಬಿದ್ದಿವೆ.
ಭಾರತದಿಂದ ಓಡಿಹೋಗಿ ಲಂಡನ್‌ನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಈ ಇಬ್ಬರು ಕುಖ್ಯಾತ ವಂಚಕರು ಪರಸ್ಪರ ಭೇಟಿಯಾಗಿದ್ದರು ಮತ್ತು ಗುಪ್ತವಾಗಿ ಸಭೆ ನಡೆಸಿದ್ದರು ಎಂಬ ಸ್ಪೋಟಕ ಮಾಹಿತಿ ಡೈಮಂಡ್ ಕಿಂಗ್ (Diamond King) ಎನ್ನುವ ಹೊಸ ಪಾಡ್‌ಕ್ಯಾಸ್ಟ್‌ನಲ್ಲಿ ಬಹಿರಂಗವಾಗಿದೆ.
ಭಾರತದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಹಗರಣ ನಡೆಸಿ ದೇಶ ಬಿಟ್ಟಿದ್ದ ನೀರವ್ ಮೋದಿ, ಲಂಡನ್‌ನಲ್ಲಿ ಮುಕ್ತವಾಗಿ ಓಡಾಡುತ್ತಿದ್ದ ದಿನಗಳನ್ನು ಈ ಪಾಡ್‌ಕ್ಯಾಸ್ಟ್ ಬಿಚ್ಚಿಟ್ಟಿದೆ. ವಿಜಯ್ ಮಲ್ಯ ಅವರು ಲಂಡನ್‌ನ ಪ್ರತಿಷ್ಠಿತ ರೀಜೆಂಟ್ಸ್ ಪಾರ್ಕ್‌ನಲ್ಲಿರುವ ತಮ್ಮ ಬಹುಕೋಟಿ ಮೌಲ್ಯದ ಐಷಾರಾಮಿ ಟೌನ್‌ಹೌಸ್‌ಗೆ ನೀರವ್ ಮೋದಿಯನ್ನು ಆಹ್ವಾನಿಸಿದ್ದರು. ಈ ವೇಳೆ ಇಬ್ಬರೂ ತಾವು ದೇಶಭ್ರಷ್ಟರಾಗಿ ಬದುಕುತ್ತಿರುವ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದರು ಎಂದು ಇಲ್ಲಿ ತಿಳಿಸಲಾಗಿದೆ.
ಮಲ್ಯ ಮಾತನ್ನು ಲೆಕ್ಕಿಸದ ನೀರವ್ ಮೋದಿ!
ವಿಜಯ್ ಮಲ್ಯ ಮತ್ತು ನೀರವ್ ಮೋದಿ ಇಬ್ಬರೂ ಸಂಪರ್ಕದಲ್ಲಿದ್ದರು. ಆದರೆ, ಮಲ್ಯ, ನೀರವ್ ಮೋದಿಗೆ ಒಂದು ಸಲಹೆ ನೀಡಿದ್ದರು. ನೀನು ಹೀಗೆ ಬಹಿರಂಗವಾಗಿ ಓಡಾಡಬೇಡ, ನೀನು ವಿವೇಕವಿಲ್ಲದೆ, ಮೂರ್ಖನಂತೆ ವರ್ತಿಸುತ್ತಿದ್ದೀಯಎಂದು ಮಲ್ಯ ಎಚ್ಚರಿಸಿದ್ದರು.
ಆದರೆ, ನೀರವ್ ಮೋದಿ, ವಿಜಯ್ ಮಲ್ಯ ಮಾತನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಮಲ್ಯ ಅವರಂತೆ ತಾನೂ ಬಿಂದಾಸ್ ಆಗಿ ತಿರುಗಾಡಬಹುದು ಎಂದು ನೀರವ್ ತಪ್ಪಾಗಿ ಊಹಿಸಿಕೊಂಡಿದ್ದರು ಎನ್ನಲಾಗಿದೆ.
ಮಲ್ಯ ಲಂಡನ್‌ನಲ್ಲಿ ಕಾನೂನು ಹೋರಾಟ ನಡೆಸುತ್ತಾ ಬದುಕುಳಿದಿರುವ ಶೈಲಿಯೇ ನೀರವ್‌ಗೆ ಅತಿಯಾದ ಆತ್ಮವಿಶ್ವಾಸವನ್ನು ತಂದುಕೊಟ್ಟಿತ್ತು. ಆದರೆ, ಆ ಆತ್ಮವಿಶ್ವಾಸವೇ ನೀರವ್ ಮೋದಿಗೆ ಮುಳುವಾಯಿತು. ಭಾರತ ಸರ್ಕಾರ ಮತ್ತು ತನಿಖಾ ಸಂಸ್ಥೆಗಳ ಕಣ್ಣಿಗೆ ಸುಲಭವಾಗಿ ಸಿಕ್ಕಿಬೀಳುವಂತೆ ನೀರವ್ ವರ್ತನೆ ಇತ್ತು ಎಂದು ಪಾಡ್‌ಕಾಸ್ಟ್‌ನಲ್ಲಿ ಹೇಳಲಾಗಿದೆ.
ಕಾಫಿ ಶಾಪ್‌ನಲ್ಲಿ ಪತ್ರಿಕೆ ಓದುತ್ತಿದ್ದ ವಜ್ರದ ವ್ಯಾಪಾರಿ!
ಇಂಟರ್‌ಪೋಲ್ ರೆಡ್ ನೋಟಿಸ್ ಜಾರಿಯಲ್ಲಿದ್ದರೂ, ನೀರವ್ ಮೋದಿ ಲಂಡನ್‌ನ ಆಕ್ಸ್‌ಫರ್ಡ್ ಸ್ಟ್ರೀಟ್‌ನಲ್ಲಿರುವ ಕೆಫೆಗಳಿಗೆ ಹೋಗುತ್ತಿದ್ದರು. ಅಲ್ಲಿ ಕುಳಿತು ಆರಾಮಾಗಿ ಕಾಫಿ ಕುಡಿಯುತ್ತಾ ಪತ್ರಿಕೆಗಳನ್ನು ಓದುತ್ತಿದ್ದರು. ಯಾರೂ ಗುರುತಿಸದಷ್ಟು ಧೈರ್ಯದಿಂದ ಅವರು ಎಲ್ಲೆಂದರಲ್ಲಿ ಓಡಾಡುತ್ತಿದ್ದರು. ಆದರೆ, ದಿನಗಳು ಕಳೆದಂತೆ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಅವರು ಎಚ್ಚೆತ್ತುಕೊಂಡರು.
ಸಾರ್ವಜನಿಕ ರೆಸ್ಟೋರೆಂಟ್‌ಗಳಿಗೆ ಹೋಗುವುದನ್ನು ನಿಲ್ಲಿಸಿದ ನೀರವ್, ತಮ್ಮ ಅಪಾರ್ಟ್‌ಮೆಂಟ್‌ಗೆ ಅಡುಗೆ ಮಾಡಲು ಖಾಸಗಿ ಅಡಿಗೆಯವರನ್ನು ನೇಮಿಸಿಕೊಳ್ಳಲು ಆರಂಭಿಸಿದರು. ಈ ಒಬ್ಬ ಅಡಿಗೆಯವನಿಗೆ ಗಂಟೆಗೆ 200 ರಿಂದ 300 ಪೌಂಡ್ (ಸುಮಾರು 20 ರಿಂದ 30 ಸಾವಿರ ರೂಪಾಯಿ)ಸಂಭಾವನೆ ನೀಡುತ್ತಿದ್ದರು. ಅಲ್ಲದೆ, ಒಮ್ಮೆ ಕೆಲಸಕ್ಕೆ ಬಂದ ಅಡಿಗೆಯವನನ್ನು ಮತ್ತೊಮ್ಮೆ ಕರಿಯುತ್ತಿರಲಿಲ್ಲ. ಅದರಲ್ಲೂ ಭಾರತೀಯ ಮೂಲದ ಅಡಿಗೆಯವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿರಲಿಲ್ಲ ಎಂದು ತಿಳಿದು ಬಂದಿದೆ.
ಬಂಧನ ಮತ್ತು ಇಂದಿನ ಸ್ಥಿತಿ!
ಮಾರ್ಚ್ 2019 ರಲ್ಲಿ ಲಂಡನ್‌ನ ಬೀದಿಗಳಲ್ಲಿ ಓಡಾಡುತ್ತಿದ್ದ ನೀರವ್ ಮೋದಿಯ ಬಗ್ಗೆ ಅಲ್ಲಿನ ವಜ್ರ ವ್ಯಾಪಾರಿಗಳು ನೀಡಿದ ನಿಖರ ಸುಳಿವೊಂದನ್ನು ನೀಡಿತ್ತು. ಈ ಮಾಹಿತಿಯನ್ನು ಆಧರಿಸಿ ಬ್ರಿಟಿಷ್ ಪೊಲೀಸರು ನೀರವ್ ಮೋದಿಯನ್ನು ಬಂಧಿಸಿದ್ದರು. ಅಂದಿನಿಂದ ಕಳೆದ ಏಳು ವರ್ಷಗಳಿಂದ ನೀರವ್ ಲಂಡನ್ ಜೈಲಿನಲ್ಲಿ ಬಂಧಿತರಾಗಿದ್ದು, ಬ್ರಿಟನ್ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ, (ಏಜನ್ಸೀಸ್).