Bhopal Donkey Ritual ಸಾಂದರ್ಭಿಕ ಚಿತ್ರ
Bhopal Donkey Ritual: ಮಧ್ಯಪ್ರದೇಶದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ, ಮಳೆರಾಯನನ್ನು ಒಲಿಸಿಕೊಳ್ಳಲು ಭೋಪಾಲ್‌ನಲ್ಲಿ ವಿಭಿನ್ನ ಆಚರಣೆಯೊಂದನ್ನು ನಡೆಸಲಾಗಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿ ಶನಿವಾರದಂದು ಕತ್ತೆಗಳಿಗೆ ಸಿಹಿಯಾದ 'ಗುಲಾಬ್ ಜಾಮೂನ್' ತಿನ್ನಿಸುವ ಮೂಲಕ ಜನರು ವಿಶಿಷ್ಟವಾಗಿ ಪೂಜೆ ಸಲ್ಲಿಸಿದ್ದಾರೆ.
ಮಳೆಗಾಗಿ ವಿನೂತನ ಆಚರಣೆ
ಭೋಪಾಲ್‌ನ ಕೋಲಾರ್ ರಸ್ತೆಯಲ್ಲಿ ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ವಿಶಿಷ್ಟ ಪೂಜಾ ವಿಧಿವಿಧಾನ ಜರುಗಿತು. ಮಳೆಯ ದೇವನಾದ ಇಂದ್ರದೇವನನ್ನು ಪ್ರಸನ್ನಗೊಳಿಸಲು ಈ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಇದರಲ್ಲಿ ಭಾಗವಹಿಸಿದ್ದ ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಕತ್ತೆಗಳಿಗೆ ಜಾಮೂನ್ ತಿನ್ನಿಸುವುದರ ಜೊತೆಗೆ, ರಾಜ್ಯದಲ್ಲಿನ ಬರಗಾಲದ ಪರಿಸ್ಥಿತಿ ನೀಗಲು ಮತ್ತು ಧಾರೆ ಎರೆದು ಮಳೆ ಸುರಿಸುವಂತೆ ವರುಣ ದೇವನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಭೋಪಾಲ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ
ಒಂದೆಡೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಕೊರತೆ ಎದುರಾಗಿದ್ದರೆ, ರಾಜಧಾನಿ ಭೋಪಾಲ್‌ನಲ್ಲಿ ಮಾತ್ರ ಹವಾಮಾನ ತದ್ವಿರುದ್ಧವಾಗಿದೆ. ಹವಾಮಾನ ಇಲಾಖೆಯ ಹಿರಿಯ ತಜ್ಞರಾದ ಎಸ್.ಎನ್. ಸಾಹು ನೀಡಿರುವ ಮಾಹಿತಿ ಪ್ರಕಾರ, ಮುಂಗಾರು ಆರಂಭವಾದಾಗಿನಿಂದ ಭೋಪಾಲ್‌ನಲ್ಲಿ ಇದುವರೆಗೆ 400.3 ಮಿಲಿಮೀಟರ್ ಮಳೆಯಾಗಿದೆ. ಇದು ಈ ಅವಧಿಯ ಸಾಮಾನ್ಯ ಸರಾಸರಿ ಮಳೆಗಿಂತ ಶೇಕಡಾ 44 ರಷ್ಟು ಹೆಚ್ಚಾಗಿದೆ. ಆದಾಗ್ಯೂ, ಭಾನುವಾರದಿಂದ ಮಧ್ಯಪ್ರದೇಶದಲ್ಲಿ ಮತ್ತೊಂದು ಸುತ್ತಿನ ಮಳೆಯ ಸರಮಾಲೆ ಆರಂಭವಾಗುವ ಸಾಧ್ಯತೆಯಿದೆ ಎಂದು ಅವರು ಮುನ್ಸೂಚನೆ ನೀಡಿದ್ದಾರೆ.
ಮಧ್ಯಪ್ರದೇಶದ ಒಟ್ಟು 35 ಜಿಲ್ಲೆಗಳಲ್ಲಿ ಈ ಬಾರಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಮಳೆಯ ಕೊರತೆಯಿಂದ ಕಂಗಾಲಾಗಿರುವ ಜಿಲ್ಲೆಗಳ ಪಟ್ಟಿಯಲ್ಲಿ ಛಿಂದ್ವಾರಾ, ದಾಮೋಹ್, ದಿಂಡೋರಿ, ಜಬಲ್ಪುರ್, ಕಟ್ನಿ, ಮೈಹರ್, ಮಾಂಡ್ಲಾ, ಮೌಗಂಜ್, ನರಸಿಂಗಪುರ, ಪಾಂಡುರ್ನಾ, ಪನ್ನಾ, ರೇವಾ, ಸಾಗರ್, ಸತ್ನಾ, ಸಿವೋನಿ, ಶಹದೋಲ್, ಸಿಧಿ, ಸಿಂಗ್ರೌಲಿ, ಟಿಕಮ್‌ಗಢ್ ಮತ್ತು ಉಮರಿಯಾ ಪ್ರಮುಖವಾಗಿವೆ.
ಇವುಗಳ ಜೊತೆಗೆ ಅಲಿರಾಜ್‌ಪುರ, ಬರ್ವಾನಿ, ಬೆತುಲ್, ದತಿಯಾ, ಧಾರ್, ಝಬುವಾ, ಮೊರೆನಾ, ನರ್ಮದಾಪುರಂ, ರೈಸನ್, ಶಿಯೋಪುರ್, ಶಿವಪುರಿ, ಅನುಪ್ಪುರ್, ಬಾಲಾಘಾಟ್, ಛತ್ತರಪುರ ಮತ್ತು ವಿದಿಶಾ ಜಿಲ್ಲೆಗಳೂ ಕೂಡ ತೀವ್ರ ಮಳೆ ಕೊರತೆಯನ್ನು ಎದುರಿಸುತ್ತಿದ್ದು, ಇಡೀ ರಾಜ್ಯದ ರೈತಾಪಿ ವರ್ಗ ಮುಂಗಾರು ಚುರುಕಾಗುವುದನ್ನೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ (ಏಜೆನ್ಸೀಸ್).