ಯುಪಿ ಸಿಎಂ ಯೋಗಿ ಆದಿತ್ಯನಾಥ್
ಲಖನೌ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಮಂದಿರಕ್ಕೆ ನೀಡಿದ ದೇಣಿಗೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಶುಕ್ರವಾರ(ಜೂ. 19) ಯುಪಿ ಸಿಎಂ ಯೋಗಿ ಆದಿತ್ಯನಾಥ್(CM Yogi Adityanath) ಪ್ರತಿಕ್ರಿಯಿಸಿದ್ದು, ಆರೋಪಿ ಯಾರೇ ಆಗಿದ್ರು ಬಿಡಲ್ಲ ಎಂದು ಹೇಳಿದ್ದಾರೆ.
ಅಯೋಧ್ಯೆಗೆ ಭೇಟಿ ನೀಡಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಮ ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಹೇಳಿಕೆಗಳನ್ನು ನೀಡದಂತೆ ಅವರು ಜನರನ್ನು ಮನವಿ ಮಾಡಿದ್ದಾರೆ. ಆರೋಪಿ ಯಾರೇ ಆಗಿರಲಿ, ಅವರನ್ನು ಯಾವುದೇ ಸಂದರ್ಭದಲ್ಲೂ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಈ ವಿಷಯದ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ ಮತ್ತು ಈ ವಿಷಯದಲ್ಲಿ ಯಾರಿಗಾದರೂ ಯಾವುದೇ ಪುರಾವೆಗಳಿದ್ದರೆ, ಅವರು ಅದನ್ನು ಎಸ್‌ಐಟಿಗೆ ಸಲ್ಲಿಸಬೇಕು. ದೇವಾಲಯದ ಟ್ರಸ್ಟ್‌ನ ಕೋರಿಕೆಯ ಮೇರೆಗೆ ಈ ವಿಷಯದ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚಿಸಲಾಗಿದೆ. ಸಮಸ್ಯೆಗಳನ್ನು ಎಸ್‌ಐಟಿ ಬೆಳಕಿಗೆ ತರುವ ನಿರೀಕ್ಷೆಯಿದೆ ಎಂದಿದ್ದಾರೆ.
ಭಕ್ತರು ತಾಳ್ಮೆಯಿಂದಿರಿ ಮತ್ತು ದೇವಾಲಯದ ಬಗ್ಗೆ ಹರಡುತ್ತಿರುವ ಅನೇಕ ತಪ್ಪು ಮಾಹಿತಿಯನ್ನು ನಂಬಬೇಡಿ. ದೇವಾಲಯದ ಖ್ಯಾತಿಗೆ ಕಳಂಕ ತರುವ ಪ್ರಯತ್ನಗಳಿಂದ ದೂರವಿರಿ. ಕಾಂಗ್ರೆಸ್ ಮತ್ತು ಎಸ್‌ಪಿ ರಾಮ ಮಂದಿರ ಆಂದೋಲನಕ್ಕೆ ಅಡ್ಡಿಯಾಗಿದ್ದವು. ಕರಸೇವಕರ ಮೇಲೆ ಕ್ರಮಕೈಗೊಂಡಿದ್ದರು. ಈಗ ಅದೇ ಪಕ್ಷಗಳು ದೇವಾಲಯದ ಬಗ್ಗೆ ಕಳವಳ ವ್ಯಕ್ತಪಡಿಸುವಂತೆ ನಟಿಸುತ್ತಿವೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ನ್ಯಾಯಾಲಯದಲ್ಲಿ ರಾಮ ಮಂದಿರ ಆಂದೋಲನವನ್ನು ತಡೆದಿದೆ. ಸಮಾಜವಾದಿ ಪಕ್ಷ ಕರಸೇವಕರ ಮೇಲೆ ಗುಂಡು ಹಾರಿಸಲು ಮತ್ತು ಜೈ ಶ್ರೀ ರಾಮ್ ಎಂದು ಜಪಿಸಿದವರ ವಿರುದ್ಧ ಬಲಪ್ರಯೋಗಕ್ಕೆ ಆದೇಶಿಸಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ (ಏಜೆನ್ಸೀಸ್).