ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವೆ ಕದನ ವಿರಾಮದ ಬಳಿಕ ಇಸ್ಲಾಮಾಬಾದ್ನಲ್ಲಿ ಮಾತುಕತೆ ಮತ್ತು ಒಪ್ಪಂದಕ್ಕೆ ಬರದಿದ್ರೆ, ಇರಾನ್ ಮೇಲೆ ಭಾರಿ ಪ್ರಮಾಣದಲ್ಲಿ ದಾಳಿ ಮಾಡಲು ಯುದ್ಧನೌಕೆಗಳಿಗೆ ಶಸ್ತ್ರಾಸ್ತ್ರಗಳನ್ನು ಮರುಲೋಡ್ ಮಾಡಲಾಗುತ್ತಿದೆ ಎಂದು ಅದ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ನ್ಯೂಯಾರ್ಕ್ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಟ್ರಂಪ್, ನಾವು ಯುದ್ದ ವಿಮಾನಗಳನ್ನು ಮರುಹೊಂದಿಸುವ ಹಂತದಲ್ಲಿದ್ದೇವೆ. ಹಡಗುಗಳಿಗೆ ಇದುವರೆಗೆ ತಯಾರಿಸಲಾಗದ ಅತ್ಯುತ್ತಮ ಆಯುಧಗಳನ್ನು ತುಂಬಿಸುತ್ತಿದ್ದೇವೆ. ಹಿಂದೆ ಮಾಡಿದ್ದಕ್ಕಿಂತ ಉತ್ತಮವಾಗಿದೆ. ಅವರು ಒಪ್ಪಂದಕ್ಕೆ ಬರದಿದ್ರೆ ನಾವು ಅವುಗಳನ್ನು ಕಾರ್ಯಾಚರಣೆಯಲ್ಲಿ ಬಳಸಲಿದ್ದೇವೆ ಎಂದು ಬೆದರಿಕೆ ಹಾಕಿದ್ದಾರೆ.
ಇರಾನ್‌ನ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಮಾತುಕತೆಗಾಗಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಪಾಕಿಸ್ತಾನಕ್ಕೆ ತೆರಳಿದ ನಂತರ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಈ ಮೊದಲು ಮಾತನಾಡಿದ್ದ ಜೆ.ಡಿ.ವ್ಯಾನ್ಸ್ ಇರಾನ್ ಜೊತೆಗಿನ ಮಾತುಕತೆಗಳು ಸಕರಾತ್ಮಕದಲ್ಲಿವೆ. ಆದಾಗ್ಯೂ ಅಮೆರಿಕ ಜೊತೆ ಆಟವಾಡಲು ಯತ್ನಿಸಬಾರದು ಎಂದು ಎಚ್ಚರಿಸಿದ್ದರು.
ಮಾತುಕತೆಗೂ ಮೊದಲು ಇರಾನ್ ಎರಡು ಬೇಡಿಕೆ
ಇಸ್ಲಾಮಾಬಾದ್ನಲ್ಲಿ ಮಾತುಕತೆಗೂ ಮುನ್ನ ಶುಕ್ರವಾರ(ಏ. 10) ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್, ಲೆಬನಾನ್‌ನಲ್ಲಿ ಕದನ ವಿರಾಮ ಮತ್ತು ನಿರ್ಬಂಧಿತ ಇರಾನಿನ ಸ್ವತ್ತುಗಳ ಬಿಡುಗಡೆ ಈ ಎರಡು ಅಂಶಗಳನ್ನು ಪರಸ್ಪರ ಒಪ್ಪಿಕೊಂಡಿದ್ದು, ಇನ್ನೂ ಜಾರಿಗೆ ತಂದಿಲ್ಲ. ಮಾತುಕತೆಗಳು ಪ್ರಾರಂಭವಾಗುವ ಮೊದಲು ಈ ಎರಡು ವಿಷಯಗಳನ್ನು ಪೂರೈಸಬೇಕು ಎಂದು ಹೇಳಿದ್ದಾರೆ.
ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವೆ ನಡೆಯುತ್ತಿರುವ ಕದನ ಮತ್ತು ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್‌ನ ನಿರಂತರ ನಿಯಂತ್ರಣದ ಮುಂದುವರೆದ ಮಧ್ಯೆ ಈ ಮಾತುಕತೆಗಳು ನಡೆಯುತ್ತಿವೆ. ಇನ್ನೂ ಇರಾನ್ ಇಸ್ರೇಲ್ ಲೆಬನಾನ್‌ನಲ್ಲಿ ತನ್ನ ದಾಳಿಯನ್ನು ನಿಲ್ಲಿಸದ ಹೊರತು ಶನಿವಾರದ ಮಾತುಕತೆ ಮುಂದುವರಿಯುವುದಿಲ್ಲ ಎಂದು ಹೇಳಿದೆ. ಆದರೆ ಇಸ್ರೇಲ್ ದಾಳಿ ನಿಲ್ಲಿಸಲ್ಲ ಎಂದಿದೆ (ಏಜೆನ್ಸೀಸ್).