ಮನುಷ್ಯನನ್ನು ಕಚ್ಚುತ್ತಿರುವ ಬೀದಿನಾಯಿ, ಸುಪ್ರೀಂ ಕೋರ್ಟ್​ 
ದೇಶ

ನೀವು ಭಯಪಟ್ಟರೆ ನಾಯಿಗಳಿಗೆ ವಾಸನೆಯ ಮೂಲಕ ತಿಳಿಯುತ್ತದೆ; ನಂತರ ನಿಮ್ಮನ್ನು ಕಚ್ಚುತ್ತದೆ : ಸುಪ್ರೀಂ ಕೋರ್ಟ್‌ | Supreme Court

ನವದೆಹಲಿ: ತಮ್ಮನ್ನು ಕಂಡು ಭಯಪಡುವವರನ್ನು ವಾಸನೆಯ ಮೂಲಕ ಗುರುತಿಸಿ ನಾಯಿಗಳು ದಾಳಿ ಮಾಡುತ್ತವೆ ಎಂದು ಸುಪ್ರೀಂ ಕೋರ್ಟ್‌ (Supreme Court) ಗುರುವಾರ (ಜ.8) ಅಭಿಪ್ರಾಯಪಟ್ಟಿದೆ.
ದೇಶದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿ ಕಡಿತ ಘಟನೆಗಳ ಸಂಬಂಧ ದಾಖಲಾಗಿದ್ದ ಪ್ರಕರಣವನ್ನು ಆಲಿಸಿದ ನ್ಯಾಯಮೂರ್ತಿ ವಿಕ್ರಮ್ ನಾಥ್ , ಸಂದೀಪ್ ಮೆಹ್ತಾ ಹಾಗೂ ಎನ್‌.ವಿ.ಅಂಜಾರಿಯಾ ಅವರ ನ್ಯಾಯಪೀಠ, ತನಗೆ ಹೆದರುವ ಮನುಷ್ಯನ ವಾಸನೆಯನ್ನು ನಾಯಿ ಸದಾ ಗ್ರಹಿಸಬಲ್ಲದು. ಹಾಗೆ ಗ್ರಹಿಸಿ ಅದು ದಾಳಿ ಮಾಡುತ್ತದೆ. ಇದು ತಮ್ಮ ವೈಯಕ್ತಿಕ ಅನುಭವದ ಮಾತಾಗಿದೆ ಎಂದು ನ್ಯಾಯಮೂರ್ತಿಗಳು ಹೇಳಿದರು.
ನ್ಯಾಯಾಲಯದ ಕೋಣೆಯೊಳಗೆ ಹಾಜರಿದ್ದ ನಾಯಿ ಪ್ರೇಮಿಯೊಬ್ಬರು ಅಸಮ್ಮತಿ ಸೂಚಿಸಿ ತಲೆಯಾಡಿಸಿದಾಗ, ಮೇಡಂ ತಲೆಯಾಡಿಸದಿರಿ. ನೀವು ಭೀತರಾಗಿರುವುದು ಅವುಗಳಿಗೆ ತಿಳಿದರೆ ದಾಳಿ ಮಾಡುವ ಸಾಧ್ಯತೆ ಹೆಚ್ಚು, ನೀವು ಸಾಕಿರುವ ನಾಯಿಯೂ ಹಾಗೆ ಮಾಡಬಲ್ಲದು ಎಂದರು.
ಹಿರಿಯ ವಕೀಲ ಸಿ. ಯು. ಸಿಂಗ್‌ ವಾದ ಮಂಡಿಸಿ ನಾಯಿಗಳನ್ನು ಏಕಾಏಕಿ ತೆರವುಗೊಳಿಸಿದರೆ, ಇಲಿಗಳ ಸಂಖ್ಯೆ ಏರಿ ಅನಿರೀಕ್ಷಿತ ಪರಿಣಾಮ ಉಂಟಾಗುತ್ತದೆ. ಕಿಕ್ಕಿರಿದ ಆಶ್ರಯ ಕೇಂದ್ರಗಳಲ್ಲಿ ನಾಯಿಗಳನ್ನು ಇರಿಸುವುದು ಬೇರೆ ರೋಗಗಳು ಹರಡುವುದಕ್ಕೆ ಕಾರಣವಾಗಬಹದು ಎಂದರು.
ಇದೇ ವೇಳೆ ಹಿರಿಯ ನ್ಯಾಯವಾದಿ ಕೃಷ್ಣನ್‌ ವೇಣುಗೋಪಾಲ್‌, ಪ್ರಾಣಿಗಳ ಜನನ ನಿಯಂತ್ರಣ ನಿಯಮಾವಳಿ ಅಡಿಯಲ್ಲಿ ಕೇವಲ 66 ಕೇಂದ್ರಗಳಿಗೆ ಮಾನ್ಯತೆ ನೀಡಲಾಗಿದೆ. ಈ ಸಂಖ್ಯೆಯನ್ನು ಸಾಕಷ್ಟು ಹೆಚ್ಚಿಸಬೇಕಿದೆ. ರಾಜ್ಯ ಸರ್ಕಾರಗಳು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ಅರ್ಹತೆ ಇಲ್ಲದ ವ್ಯಕ್ತಿಗಳಿಗೆ ಅಧಿಕಾರ ನೀಡುತ್ತಿವೆ ಎಂದು ವಾದ ಮಂಡಿಸಿದರು.
ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣನ್‌, ನಾಯಿಗಳನ್ನು ತೆರವುಗೊಳಿಸುವುದು, ಸಂತಾನಹರಣ ಚಿಕಿತ್ಸೆ ಹಾಗೂ ಲಸಿಕೆಪ್ರಯೋಗ ಕೊನೆಯ ಹಂತವಾಗಿರಬೇಕು. ಶ್ವಾನಗಣತಿ, ಆಶ್ರಯ ಕೇಂದ್ರಗಳ ಲಭ್ಯತೆಯಂತಹ ಅಂಶಗಳಿಗೆ ಆದ್ಯತೆ ನೀಡಬೇಕು.
ಬೀದಿ ನಾಯಿ ಕಲ್ಯಾಣಕ್ಕಾಗಿ 2 ಲಕ್ಷ ರೂಪಾಯಿ ಠೇವಣಿ ಇರಿಸಿ ಪ್ರಕರಣದಲ್ಲಿ ಹಾಜರಾಗಬೇಕು ಎಂದು ಶ್ವಾನಪ್ರಿಯರು, ಎನ್‌ಜಿಒಗಳಿಗೆ ತಾನು ನೀಡಿದ್ದ ನಿರ್ದೇಶನವನ್ನು ಸುಪ್ರೀಂ ಕೋರ್ಟ್‌ ಹಿಂಪಡೆಯಬೇಕು. ಇಂತಹ ನಿಯಮ ವಿಧಿಸಿದರೆ ನ್ಯಾಯಾಲಯದ ಮೆಟ್ಟಿಲೇರಲು ವಾಣಿಜ್ಯ ಅಡ್ಡಿ ಎಂಬ ಭಾವನೆ ಮೂಡುತ್ತದೆ ಎಂದರು.
ಪ್ರಾಣಿಗಳ ಹಕ್ಕುಗಳಿಗಾಗಿ ಕೆಲಸ ಮಾಡುವ ಅಂತರರಾಷ್ಟ್ರೀಯ ಸಂಸ್ಥೆ ಪೆಟಾ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಶ್ಯಾಮ್‌ ದಿವಾನ್‌, ತಜ್ಞರ ಸಮಿತಿಯನ್ನು ರಚಿಸುವ ಅಗತ್ಯವಿದೆ, ನಾಯಿಗಳನ್ನು ನಿಯಂತ್ರಿಸಿದರೆ ಬೇರೆ ಸಮಸ್ಯೆಗಳು ತಲೆದೋರಬಹುದು ಎಂಬ ಮಾಹಿತಿಗೆ ವೈಜ್ಞಾನಿಕ ನೆಲೆಗಟ್ಟು ಇದೆ. ನಾಯಿಗಳನ್ನು ಗಿಜಿಗುಡುವ ಆಶ್ರಯ ಕೇಂದ್ರಗಳಲ್ಲಿಡುವುದು ಕ್ರೌರ್ಯ ಎಂದರು.
ಪ್ರಾಣಿ ದಯಾ ಸಂಘವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಕರುಣಾ ನಂದಿ, ಐಐಟಿ ದೆಹಲಿಯಲ್ಲಿ ಪ್ರಾಣಿಗಳ ಜನನ ನಿಯಂತ್ರಣ ನಿಯಮಾವಳಿಯನ್ನು ಯಶಸ್ವಿಯಾಗಿ ಜಾರಿ ಮಾಡಲಾಗಿದೆ. ಅಲ್ಲಿ ನಾಯಿಗಳು ಕಚ್ಚಿದ ಉದಾಹರಣೆ ಇಲ್ಲ. ಶಾಶ್ವತ ಬಂಧನದ ಅವಶ್ಯಕತೆಯೂ ಇಲ್ಲ. ಪ್ರಾಣಿಗಳ ಜನನ ನಿಯಂತ್ರಣ ನಿಯಮಾವಳಿಯನ್ನು ತಜ್ಞರ ಸಲಹೆ ಮೇರೆಗೆ ರೂಪಿಸಲಾಗಿದೆ. ರೇಬಿಸ್‌ಗೆ ತುತ್ತಾದ ನಾಯಿಗಳನ್ನು ಸಾಗಿಸಲು ಐಸೋಲೇಷನ್‌ ವಾಹನ ಅಗತ್ಯ. ನಾಯಿಗಳ ಶವ ಸುಡುವ ಯಂತ್ರಗಳನ್ನು ಸ್ಥಾಪಿಸುವುದು ಅಗತ್ಯ ಎಂದು ಪ್ರತಿಪಾದಿಸಿದರು.
ಮತ್ತೊಬ್ಬ ಹಿರಿಯ ನ್ಯಾಯವಾದಿ ಸುಮೀತ್ ಪುಷ್ಕರಣ, ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಿರುವುದನ್ನು ಬೆಂಬಲಿಸಿ ಆದೇಶವನ್ನು ಸಾಂಸ್ಥಿಕ ಪ್ರದೇಶಗಳಿಂದ ವಸತಿ ಪ್ರದೇಶಗಳಿಗೂ ವಿಸ್ತರಿಸಬೇಕು ಎಂದರು. ನಾಯಿಗಳಿಗೆ ಕೌನ್ಸೆಲಿಂಗ್ ಮಾಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟ. ಆದರೆ ನಾಯಿ ಮಾಲೀಕರಿಗೆ ಕೌನ್ಸೆಲಿಂಗ್ ಮಾಡಬಹುದು, ನಾಯಿ ಯಾರನ್ನಾದರೂ ಕಚ್ಚಿದ ನಂತರ ಅದನ್ನು ಹೊರಗೆ ಬಿಡಬಾರದು ಎಂದು ಸಲಹೆ ನೀಡಿದರು,(ಏಜನ್ಸೀಸ್).