Rabies  
ದೇಶ

ದೆಹಲಿಯಲ್ಲಿ ನಾಯಿ ಕಡಿತದ ಆತಂಕ: ರೇಬೀಸ್ ಅಧಿಸೂಚಿತ ರೋಗವೆಂದು ಘೋಷಿಸಿದ ಸರ್ಕಾರ! Rabies

ಪ್ರಮುಖ ಮುಖ್ಯಾಂಶಗಳು

  • ರೇಬೀಸ್​ನ್ನು ಅಧಿಸೂಚಿತ ರೋಗವೆಂದು ಘೋಷಿಸಿದ ದೆಹಲಿ ಸರ್ಕಾರ
  • ಶಂಕಿತ ಅಥವಾ ದೃಢಪಡಿಸಿದ ರೇಬೀಸ್ ಪ್ರಕರಣವನ್ನು ತಕ್ಷಣವೇ ಆರೋಗ್ಯ ಇಲಾಖೆಗೆ ವರದಿ ಮಾಡಬೇಕು
  • ರೇಬೀಸ್ ನಿರ್ಮೂಲನೆಗೆ ರಾಜ್ಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತಿದೆ : ರಾಜ್ಯ ಆರೋಗ್ಯ ಸಚಿವ
ನವದೆಹಲಿ: ರಾಜಧಾನಿ ದೆಹಲಿಯಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಮಾನವ ರೇಬೀಸ್​ (Rabies) ನ್ನು ಅಧಿಸೂಚಿತ ರೋಗವೆಂದು ಘೋಷಿಸಿದೆ. ಇದರರ್ಥ ಯಾವುದೇ ಶಂಕಿತ ಅಥವಾ ದೃಢಪಡಿಸಿದ ರೇಬೀಸ್ ಪ್ರಕರಣವನ್ನು ತಕ್ಷಣವೇ ಆರೋಗ್ಯ ಇಲಾಖೆಗೆ ವರದಿ ಮಾಡುವುದು ಕಡ್ಡಾಯವಾಗಿದೆ.
ಈ ನಿರ್ಧಾರವು ರೇಬೀಸ್ ಪ್ರಕರಣಗಳನ್ನು ತ್ವರಿತವಾಗಿ ಮೇಲ್ವಿಚಾರಣೆ ಮಾಡಲು ಮತ್ತು ರೋಗಿಗೆ ಚಿಕಿತ್ಸೆ ನೀಡುವಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಎಂದು ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದೆಹಲಿಯಲ್ಲಿರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ವೈದ್ಯರು ರೇಬೀಸ್​ ಪ್ರಕರಣಗಳನ್ನು ತಕ್ಷಣ ವರದಿ ಮಾಡುವಂತೆ ಆದೇಶಿಸಲಾಗಿದೆ.
ರೇಬೀಸ್‌ನಿಂದಾಗಿ ಒಂದೇ ಒಂದು ಸಾವು ಕೂಡ ಸಂಭವಿಸದ ಹಾಗೆ ನೋಡಿಕೊಳ್ಳವುದು ನಮ್ಮ ಧ್ಯೇಯವಾಗಿದ್ದು, ನಾಯಿ ಕಡಿತದಿಂದ ಉಂಟಾಗುವ ರೇಬೀಸ್ ಸಾವುಗಳನ್ನು ತಡೆಗಟ್ಟಲು ದೆಹಲಿ ಸರ್ಕಾರ ರೇಬೀಸ್ ನಿರ್ಮೂಲನೆಗೆ ರಾಜ್ಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತಿದೆ ಎಂದು ಆರೋಗ್ಯ ಸಚಿವ ಪಂಕಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ರೇಬೀಸ್ ಎಂದರೇನು?
ರೇಬೀಸ್ ಒಂದು ವೈರಲ್ ಸೋಂಕಾಗಿದ್ದು, ಇದು ಸಾಮಾನ್ಯವಾಗಿ ನಾಯಿ, ಬೆಕ್ಕು ಮತ್ತು ಮಂಗಗಳ ಕಡಿತದಿಂದ ಉಂಟಾಗುತ್ತದೆ. ಇದು ಸೋಂಕಿತ ಪ್ರಾಣಿಯ ಲಾಲಾರಸದ ತೆರೆದ ಗಾಯದ ಕಚ್ಚುವಿಕೆ, ಗೀರುಗಾಯ ಅಥವಾ ಸಂಪರ್ಕದ ಮೂಲಕ ಮನುಷ್ಯರಿಗೆ ಹರಡಬಹುದು. ರೇಬೀಸ್ ವೈರಸ್ ಮಾನವನ ಮೆದುಳು ಮತ್ತು ನರಮಂಡಲದ ಮೇಲೆ ದಾಳಿ ಮಾಡುತ್ತದೆ. ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ವ್ಯಕ್ತಿಯು ಕೋಮಾಕ್ಕೆ ಹೋಗಬಹುದು ಅಥವಾ ಸಾಯುವ ಆತಂಕವಿರುತ್ತದೆ.

ರೇಬೀಸ್​ ರೋಗದ ಲಕ್ಷಣಗಳು

ರೇಬೀಸ್‌ನ ಲಕ್ಷಣಗಳಲ್ಲಿ, ಮೊದಲನೆಯ ಲಕ್ಷಣ ಎಂದರೆ ಕಚ್ಚಿದ ಸ್ಥಳದ ಸುತ್ತಲೂ ಜುಮ್ಮೆನಿಸುವಿಕೆ ಮತ್ತು ತುರಿಕೆ ಉಂಟಾಗುತ್ತದೆ. ಕಚ್ಚಸಿಕೊಂಡ ವ್ಯಕ್ತಿಗೆ ನಿರಂತರ ಜ್ವರ ಮತ್ತು ಸ್ನಾಯು ನೋವನ್ನು ಅನುಭವಿಸುತ್ತಾನೆ. ನಂತರ ರೇಬೀಸ್​ ಸೋಂಕು ಮೆದುಳಿಗೆ ತಗುಲಿ ನರಮಂಡಲ ಹಾನಿಗೊಳಗಾಗುತ್ತದೆ. ನಂತರದಲ್ಲಿ ನೀರು ಮತ್ತು ಫ್ಯಾನಿನ ಗಾಳಿಗೆ ವ್ಯಕ್ತಿ ಹೆದರುತ್ತಾನೆ.

ರೇಬೀಸ್​ ರೋಗ ತಡೆಯುವ ಉಪಾಯ

ರೇಬೀಸ್ಎಂಬುದು ಅತ್ಯಂತ ಅಪಾಯಕಾರಿ ಮತ್ತು ಮಾರಣಾಂತಿಕ ಕಾಯಿಲೆಯಾಗಿದ್ದು, ಒಮ್ಮೆ ಲಕ್ಷಣಗಳು ಕಾಣಿಸಿಕೊಂಡ ನಂತರ ಯಾವುದೇ ಖಚಿತವಾದ ಗುಣಪಡಿಸುವ ಚಿಕಿತ್ಸೆ ಇಲ್ಲ. ಆದ್ದರಿಂದ, ರೇಬೀಸ್ ಬರದಂತೆ ತಡೆಯುವುದು ಅಥವಾ ಸೋಂಕು ತಗುಲಿದ ತಕ್ಷಣ ಚಿಕಿತ್ಸೆ ಪಡೆಯುವುದು ಜೀವ ಉಳಿಸಲು ಇರುವ ಏಕೈಕ ಮಾರ್ಗವಾಗಿದೆ.
ಸೋಂಕಿತ ಪ್ರಾಣಿ ಕಚ್ಚಿದ ತಕ್ಷಣ ಗಾಯವನ್ನು ಹರಿಯುವ ನೀರು ಮತ್ತು ಸೋಪಿನಿಂದ ಕನಿಷ್ಠ 15 ನಿಮಿಷಗಳ ಕಾಲ ಚೆನ್ನಾಗಿ ತೊಳೆಯುವುದು ಅತ್ಯಂತ ಪ್ರಮುಖ ಹಂತವಾಗಿದೆ. ಇದರಿಂದ ವೈರಸ್‌ನ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಗಾಯಕ್ಕೆ ಮೆಣಸಿನ ಪುಡಿ, ಸಗಣಿ ಅಥವಾ ಅರಿಶಿನದಂತಹ ಮನೆಮದ್ದುಗಳನ್ನು ಹಚ್ಚಬಾರದು, ಬದಲಿಗೆ ಅಯೋಡಿನ್ ಅಥವಾ ಆಲ್ಕೋಹಾಲ್ ಹೊಂದಿರುವ ನಂಜುನಿರೋಧಕ ದ್ರಾವಣವನ್ನು ಬಳಸಬೇಕು.
ವೈದ್ಯಕೀಯ ಚಿಕಿತ್ಸೆಯಲ್ಲಿ ಮುಖ್ಯವಾಗಿ ಪೋಸ್ಟ್-ಎಕ್ಸ್‌ಪೋಸರ್ ಪ್ರೊಫಿಲ್ಯಾಕ್ಸಿಸ್ ಎಂಬ ಲಸಿಕೆಗಳ ಸರಣಿಯನ್ನು ನೀಡಲಾಗುತ್ತದೆ. ಪ್ರಾಣಿ ಕಚ್ಚಿದ 24 ಗಂಟೆಗಳ ಒಳಗಾಗಿ ಮೊದಲ ಲಸಿಕೆಯನ್ನು ಪಡೆಯುವುದು ಸೂಕ್ತ. ನಂತರ ವೈದ್ಯರು ಸೂಚಿಸಿದ ವೇಳಾಪಟ್ಟಿಯಂತೆ ಎಲ್ಲಾ ಡೋಸ್‌ಗಳನ್ನು ಪೂರ್ಣಗೊಳಿಸಬೇಕು,(ಏಜನ್ಸೀಸ್).