ಹರಟೆ ಹೊಡೆಯುತ್ತಿದ್ದವರ ಮೇಲೆ ಏಕಾಏಕಿ ಎರಗಿದ ಬೀದಿ ನಾಯಿ
ವೈರಲ್: ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ X (ಟ್ವಿಟರ್) ನಲ್ಲಿ ವೈರಲ್ ಆಗುತ್ತಿರುವ ಒಂದು ಸಿಸಿಟಿವಿ ದೃಶ್ಯ ನೋಡಿದರೆ ಎಂತಹವರಿಗೂ ಎದೆನಡುಕ ಉಂಟಾಗುವುದು ಗ್ಯಾರಂಟಿ. ಯಾವುದೇ ಪ್ರಚೋದನೆ ಇಲ್ಲದಿದ್ದರೂ ನಾಯಿಯೊಂದು ಜನರ ಮೇಲೆ ಸತತವಾಗಿ ನಡೆಸಿದ ಭೀಕರ ದಾಳಿಯ ವಿಡಿಯೋ (Viral Video) ಈಗ ಸಾರ್ವಜನಿಕ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ.
ನಡೆದಿದ್ದೇನು?
ವೈರಲ್ ಆಗಿರುವ ಈ ವಿಡಿಯೋ ಕ್ಲಿಪ್‌ನಲ್ಲಿ ಮೂವರು ವ್ಯಕ್ತಿಗಳು ಹೊರಗಡೆ ಕುಳಿತು ಹರಟೆ ಹೊಡೆಯುತ್ತಿರುವುದು ಕಾಣಿಸುತ್ತದೆ. ಸುತ್ತಮುತ್ತ ಯಾವುದೇ ಅಪಾಯದ ಮುನ್ಸೂಚನೆ ಇರಲಿಲ್ಲ. ಆದರೆ, ಅಷ್ಟರಲ್ಲೇ ಎಲ್ಲಿಂದಲೋ ಬಂದ ನಾಯಿಯೊಂದು ಮಿಂಚಿನ ವೇಗದಲ್ಲಿ ಹಿಂದಿನಿಂದ ಬಂದು ಕುಳಿತಿದ್ದ ವ್ಯಕ್ತಿಯ ಮೇಲೆರಗುತ್ತದೆ. ಆ ದಾಳಿಯ ತೀವ್ರತೆಗೆ ಆ ವ್ಯಕ್ತಿ ಕುಳಿತಿದ್ದ ಕುರ್ಚಿಯಿಂದಲೇ ಕೆಳಕ್ಕೆ ಉರುಳುತ್ತಾನೆ.
ಅಲ್ಲಿಗೆ ಈ ದಾಳಿ ನಿಲ್ಲುವುದಿಲ್ಲ. ನಾಯಿ ತನ್ನ ಆಕ್ರಮಣಶೀಲತೆಯನ್ನು ಇನ್ನಷ್ಟು ಹೆಚ್ಚಿಸಿ ಪಕ್ಕದ ಹಾಸಿಗೆಯ ಮೇಲೆ ಕುಳಿತಿದ್ದ ಮತ್ತೊಬ್ಬ ವ್ಯಕ್ತಿಯ ಕಾಲನ್ನು ಬಲವಾಗಿ ಕಚ್ಚುತ್ತದೆ. ತಕ್ಷಣ ಆತ ನಾಯಿಯನ್ನು ದೂರ ತಳ್ಳಿದರೂ, ಅದು ಹಿಂದೆ ಸರಿಯುವ ಬದಲು ಮತ್ತೆ ಮತ್ತೆ ದಾಳಿ ಮಾಡಲು ಮುಂದಾಗುತ್ತದೆ.
ಹತ್ತಿರದಲ್ಲೇ ನಡೆದು ಹೋಗುತ್ತಿದ್ದ ಮೂರನೇ ವ್ಯಕ್ತಿಯನ್ನೂ ಬಿಡದ ನಾಯಿ, ಅವನ ಮೇಲೆಯೂ ಜಿಗಿಯಲು ಪ್ರಯತ್ನಿಸುತ್ತದೆ. ಮೊದಲ ಬಲಿಪಶು ಪ್ಲಾಸ್ಟಿಕ್ ಕುರ್ಚಿಯನ್ನು ಅಡ್ಡ ಹಿಡಿದು ಪ್ರಾಣಿಯನ್ನು ತಡೆಯಲು ಹರಸಾಹಸ ಪಡುತ್ತಾನೆ. ಆದರೆ ನಾಯಿ ಕುರ್ಚಿಯನ್ನೇ ಕಚ್ಚಿ ಸೀಳಲು ಪ್ರಯತ್ನಿಸುತ್ತದೆ.
ಇದು ಖಂಡಿತ ರೇಬೀಸ್ ನಾಯಿ
ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ ಜನರಲ್ಲಿ ರೇಬೀಸ್ ರೋಗದ ಬಗ್ಗೆ ಭೀತಿ ಶುರುವಾಗಿದೆ. ನಾಯಿಯ ಅಸಹಜ ನಡವಳಿಕೆಯನ್ನು ಕಂಡ ನೆಟ್ಟಿಗರು ಇದು ರೇಬೀಸ್ ಲಕ್ಷಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆ ನಾಯಿಗೆ ರೇಬೀಸ್ ಇರುವುದು ನೂರಕ್ಕೆ ನೂರು ಖಚಿತ. ಕಚ್ಚಿಸಿಕೊಂಡವರು ತಕ್ಷಣ ಆಸ್ಪತ್ರೆಗೆ ಧಾವಿಸಬೇಕು, ಎಂದು ಒಬ್ಬ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದು, ನಾನು ಯಾವಾಗಲೂ ಬೀದಿಯಲ್ಲಿ ನಡೆಯುವಾಗ ಕಬ್ಬಿಣದ ವಾಕಿಂಗ್ ಸ್ಟಿಕ್ ಇಟ್ಟುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ತಜ್ಞರು ಏನು ಹೇಳುತ್ತಾರೆ?
ಪಶುವೈದ್ಯಕೀಯ ತಜ್ಞರ ಪ್ರಕಾರ, ಒಂದು ಪ್ರಾಣಿ ಯಾವುದೇ ಕಾರಣವಿಲ್ಲದೆ ಅತಿಯಾದ ಆಕ್ರಮಣಶೀಲತೆ ತೋರಿಸುತ್ತಿದ್ದರೆ, ಅದು ರೇಬೀಸ್ ವೈರಲ್ ಸೋಂಕಿನ ಲಕ್ಷಣವಾಗಿರಬಹುದು. ರೇಬೀಸ್ ಎನ್ನುವುದು ಪ್ರಾಣಿಗಳ ಕಡಿತ ಅಥವಾ ಅವುಗಳ ಲಾಲಾರಸದ ಮೂಲಕ ಹರಡುವ ಮಾರಕ ಕಾಯಿಲೆ.
ಇದು ಮನುಷ್ಯನ ನರಮಂಡಲದ ಮೇಲೆ ನೇರ ಪರಿಣಾಮ ಬೀರುತ್ತದೆ. ಒಂದು ಬಾರಿ ರೋಗದ ಲಕ್ಷಣಗಳು ಕಾಣಿಸಿಕೊಂಡರೆ ಚಿಕಿತ್ಸೆ ನೀಡುವುದು ಕಷ್ಟವಾಗುತ್ತದೆ. ಆದ್ದರಿಂದ ನಾಯಿ ಅಥವಾ ಯಾವುದೇ ಪ್ರಾಣಿ ಕಚ್ಚಿದ ತಕ್ಷಣ ಅಧುನಿಕ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುವುದು ಅನಿವಾರ್ಯ.
ನಮ್ಮ ಸುರಕ್ಷತೆ ನಮ್ಮ ಕೈಯಲ್ಲೇ
ಭಾರತದಂತಹ ದೇಶಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಿರುವುದರಿಂದ ಈ ಸಮಸ್ಯೆ ಕೇವಲ ಒಂದು ವಿಡಿಯೋಗೆ ಸೀಮಿತವಾಗಿಲ್ಲ. ಬೀದಿ ಪ್ರಾಣಿಗಳ ನಿರ್ವಹಣೆ ಮತ್ತು ರೇಬೀಸ್ ಮುಕ್ತ ಭಾರತ ನಿರ್ಮಾಣದ ಬಗ್ಗೆ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಅಲ್ಲಿಯವರೆಗೆ, ಹೊರಗಡೆ ಓಡಾಡುವಾಗ ಮತ್ತು ಮನೆಯ ಸುತ್ತಮುತ್ತ ಅಸಹಜವಾಗಿ ವರ್ತಿಸುವ ಪ್ರಾಣಿಗಳ ಬಗ್ಗೆ ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸುವುದು ಉತ್ತಮ,(ಏಜನ್ಸೀಸ್).