ಸುಪ್ರೀಂಕೋರ್ಟ್ 
ದೇಶ

ಎಸ್​​ಐಆರ್ ನಡೆಸುವ ಅಧಿಕಾರ ಚುನಾವಣಾ ಆಯೋಗಕ್ಕಿದೆಯೇ?; ಇಂದು ಅಂತಿಮ ತೀರ್ಪು ನೀಡಲಿರುವ ಸುಪ್ರೀಂಕೋರ್ಟ್ | Supreme Court

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಭಾರತೀಯ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(SIR) ಕಾರ್ಯದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್(Supreme Court) ಇಂದು(ಮೇ 27) ತನ್ನ ತೀರ್ಪು ಪ್ರಕಟಿಸಲಿದೆ ಎಂದು ವರದಿಯಾಗಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾ.ಜೋಯ್ಮಲ್ಯ ಬಾಗ್ಚಿ ಹಾಗೂ ವಿಎಂ ಪಾಂಚೋಲಿ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ಪೀಠವು, ವಿಚಾರಣೆ ನಡೆಸಿ ಜನವರಿ 29ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಪ್ರಕಟಿಸುವ ಬಗ್ಗೆ ದಿನಾಂಕ ನಿಗದಿಪಡಿಸಿತ್ತು. 
ಕಳೆದ ವರ್ಷ ಬಿಹಾರ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಎಸ್‌ಐಆರ್ ನಡೆಸುವಂತೆ ಇಸಿಐ ತನ್ನ ರಾಜ್ಯದ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಇದರ ಸಾಂವಿಧಾನಿಕ ಅಧಿಕಾರವನ್ನು ಪ್ರಶ್ನಿಸಿ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಮತ್ತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್(ಪಿಯುಸಿಎಲ್), ರಾಜಕೀಯ ಕಾರ್ಯಕರ್ತ ಯೋಗೇಂದ್ರ ಯಾದವ್, ಸಂಸರಾದ ಮಹುವಾ ಮೊಯಿತ್ರಾ, ಮನೋಜ್ ಝಾ, ಕೆಸಿ ವೇಣುಗೋಪಾಲ್ , ಸುಪ್ರಿಯಾ ಸುಳೆ ಸೇರಿ ಅನೇಕರು ಅರ್ಜಿ ಸಲ್ಲಿಸಿದ್ದರು.
ಎಲ್ಲಾ ಅರ್ಜಿಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡಸಿದ್ದ ಸುಪ್ರೀಂಕೋರ್ಟ್, ಇದು ಸಂವಿಧಾನದ 326ನೇ ವಿಧಿ, 1950ರ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಸಂಬಂಧಿತ ನಿಯಮಗಳ ಅಡಿಯಲ್ಲಿ ಚುನಾವಣಾ ಆಯೋಗವು ಪ್ರಸ್ತುತ ರೂಪದಲ್ಲಿ SIR ಪ್ರಕ್ರಿಯೆಯನ್ನು ನಡೆಸುವ ಅಧಿಕಾರವನ್ನು ಹೊಂದಿದೆಯೇ ಎಂಬುದನ್ನು ಇಂದು ನಿರ್ಧರಿಸಲಿದೆ (ಏಜೆನ್ಸೀಸ್).