ದೊಕ್ಲಾಮ್ ಪ್ರಕರಣ ರಾಹುಲ್ ಗಾಂಧಿಯವರಿಗೆ ಒಂದು ಮುಖ್ಯ ವಿಷಯವನ್ನು ಮನವರಿಕೆ ಮಾಡಿಕೊಟ್ಟಿತು. ಜವಾಹರ್ಲಾಲ್ ನೆಹರೂ ಕಾಲದಲ್ಲಿ ಚೀನಾ ನಮ್ಮ 38,000 ಚ.ಕಿ.ಮೀ. ವಿಸ್ತಾರದ ಪ್ರದೇಶವನ್ನು ಆಕ್ರಮಿಸಿಕೊಂಡಿತು. ಆ ಅವಮಾನವನ್ನು ತುಸುವಾದರೂ ತಗ್ಗಿಸಲು ಇಂದಿರಾ ಗಾಂಧಿ 1967ರಲ್ಲಿ ಪ್ರಯತ್ನಿಸಿದರು. ಆ ವರ್ಷದ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಸಿಕ್ಕಿಂನಲ್ಲಿ ಆಕ್ರಮಣವೆಸಗಲು ಪ್ರಯತ್ನಿಸಿದ ಚೀನೀ ಸೇನೆಯನ್ನು ಎದುರಿಸಲು ಉಚಿತವೆನಿಸಿದ್ದನ್ನು ಮಾಡುವ ಪೂರ್ಣ ಸ್ವಾತಂತ್ರ್ಯವನ್ನು ಅವರು ನಮ್ಮ ಸೇನೆಗೆ ನೀಡಿದರು. ಉತ್ಸಾಹಿತ ನಮ್ಮ ಸೇನೆ ಆಕ್ರಮಣಕಾರಿ ಚೀನೀಯರ ಮೇಲೆ ಮುಗಿಬಿದ್ದು ಅವರನ್ನು ಅವರ ಗಡಿಯೊಳಗೆ ಮೂರು ಕಿ.ಮೀ. ದೂರಕ್ಕೆ ಅಟ್ಟಿಸಿಕೊಂಡು ಹೋಯಿತು. ಆಗ ಕಳೆದುಕೊಂಡ ಪ್ರದೇಶವನ್ನು ಮತ್ತೆ ಕೈವಶ ಮಾಡಿಕೊಳ್ಳಲು ಚೀನೀಯರು ಇಂದಿಗೂ ಪ್ರಯತ್ನಿಸಿಲ್ಲ. ಈ ಭವ್ಯ ಇತಿಹಾಸವನ್ನು ಪೂರ್ಣವಾಗಿ ನಕಾರಗೊಳಿಸುವ ಕೃತ್ಯವನ್ನು ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಸರ್ಕಾರ ಒಂದಕ್ಕಿಂತ ಹೆಚ್ಚು ಬಾರಿ ಮಾಡಿತು. 2008ರ ಸೆಪ್ಟೆಂಬರ್ನಲ್ಲಿ ಲದಾಖ್ನ ಕೊಂಗ್ ಕಾ ಕಣಿವೆಯಲ್ಲಿ ಘಟಿಸಿದ ಚೀನಿ ಅತಿಕ್ರಮಣವನ್ನು ತೆರವುಗೊಳಿಸಲು ಭಾರತೀಯ ಸೇನೆಗೆ ಮನಮೋಹನ್ ಸಿಂಗ್ ಸರ್ಕಾರ ಯಾವ ಆದೇಶ ನೀಡಿತು ಎನ್ನುವುದು ಸಾರ್ವಜನಿಕವಾಗಿ ಪ್ರಕಟವಾಗಿಯೇ ಇಲ್ಲ. ಮುಂದುವರಿದು, 2012ರ ಮಾರ್ಚ್ನಲ್ಲಿ ಉತ್ತರದ ದೆಪ್ ಸಾಂಗ್ ಪ್ರದೇಶದಲ್ಲಿ ಚೀನಿ ಸೇನೆ ಅತಿಕ್ರಮಣವೆಸಗಿದಾಗ ಹಿಂದೆ ಸರಿಯುವಂತೆ ಯುಪಿಎ ಸರ್ಕಾರ ನಮ್ಮ ಸೇನೆಗೆ ಆದೇಶವಿತ್ತಿತ್ತಂತೆ! ಇದನ್ನು ವಿರೋಧಿಸಿದ ಆಗಿನ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೊಸ ನೋ ಮ್ಯಾನ್ಸ್ ಲ್ಯಾಂಡ್ ಭಾರತೀಯ ನೆಲದಲ್ಲಿ ಸ್ಥಾಪಿತವಾದುದನ್ನು ವಿರೋಧಿಸಿದರು. ಇದಕ್ಕೆ ಹೋಲಿಸಿದರೆ ದೊಕ್ಲಾಮ್ ಪ್ರಕರಣದಲ್ಲಿ ಮೋದಿ ಸರ್ಕಾರ ಹಾಗೂ ಭಾರತೀಯ ಸೇನೆ ವರ್ತಿಸಿದ ಬಗೆ ಭಾರತ-ಚೀನಾ ಗಡಿ ಸಮಸ್ಯೆಯ ಇತಿಹಾಸದಲ್ಲಿ ಒಂದು ಧನಾತ್ಮಕ ಮೈಲಿಗಲ್ಲು. ಆ ಪ್ರಕರಣದಿಂದ ರಾಹುಲ್ ಗಾಂಧಿ ಅರಿತ ವಿಷಯವೆಂದರೆ ಮೋದಿಯವರ ಜನಪ್ರಿಯತೆಯಲ್ಲಿ ಭಾರತೀಯ ಸೇನೆಯ ಪಾತ್ರವೂ ದೊಡ್ಡದಾಗಿಯೇ ಇದೆ ಎಂದು! ಪರಿಣಾಮವಾಗಿ ಭಾರತೀಯ ಸೇನೆಯನ್ನು ಅವಮಾನಿಸುವ ಮೂಲಕ ಮೋದಿಯವರ ಹೆಸರಿಗೆ ಮಸಿ ಹಚ್ಚಬಹುದು ಎಂದು ರಾಹುಲ್ ಗಾಂಧಿ ತಪ್ಪಾಗಿ ತಿಳಿದರು. ಬಾಲಾಕೋಟ್ ದಾಳಿಯನ್ನು ಅವರು ಒಪ್ಪಿಕೊಳ್ಳಲಿಲ್ಲ. ಅವರ ಪಕ್ಷದ ಒಬ್ಬರು ಆಗಿನ ಸೇನಾ ದಂಡನಾಯಕ ಜ. ಬಿಪಿನ್ ರಾವತ್ ಅವರನ್ನು ಬೀದಿ ಗೂಂಡಾ ಎಂದು ಕರೆಯುವ ಮಟ್ಟಕ್ಕೂ ಹೋದರು! ಇದೇ ತಪ್ಪು ನೀತಿಯ ಮುಂದುವರಿಕೆಯಾಗಿ, 2022ರ ಡಿಸೆಂಬರ್ನಲ್ಲಿ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಅರುಣಾಚಲ ಪ್ರದೇಶ ಟಿಬೆಟ್ ಗಡಿಯಲ್ಲಿ ಘಟಿಸಿದ ಮುಖಾಮುಖಿಯನ್ನು ಉಲ್ಲೇಖಿಸಿ ಮಾತನಾಡುತ್ತಾ ರಾಹುಲ್ ಗಾಂಧಿ ಭಾರತೀಯ ಸೇನೆ ಏಟು ತಿನ್ನುತ್ತಿದೆ ಎಂದರು. ವಾಸ್ತವವಾಗಿ ಭಾರತೀಯ ಸೇನೆ ಮುನ್ನೂರಕ್ಕೂ ಹೆಚ್ಚು ಚೀನೀ ಅತಿಕ್ರಮಣಕಾರರನ್ನು ಹಿಂದಕ್ಕಟ್ಟಿತ್ತು. ಆದರೆ ಭಾರತೀಯ ಸೇನೆ ಏಟು ತಿನ್ನುತ್ತಿದೆ ಎಂದು ಹೇಳುವ ಮೂಲಕ ಮೋದಿಯವರಿಗೆ ರಾಜಕೀಯ ಏಟು ನೀಡಲು ರಾಹುಲ್ ಗಾಂಧಿ ಪ್ರಯತ್ನಿಸಿದರು. ಆ ಪ್ರಯತ್ನದಲ್ಲಿ ತಾವು ಭಾರತೀಯ ಸೇನೆಯನ್ನು ಅವಮಾನಿಸುತ್ತಿದ್ದೇವೆ ಎನ್ನುವುದನ್ನು ಅವರು ಮರೆತರು ಅಥವಾ ನಿರ್ಲಕ್ಷಿಸಿದರು. ಅದನ್ನವರಿಗೆ ಅಲ್ಲೇ ಮನವರಿಕೆ ಮಾಡಿಕೊಟ್ಟದ್ದು ವಿದೇಶಾಂಗ ಮಂತ್ರಿ ಎಸ್. ಜೈಶಂಕರ್. ಆ ನಡುವೆ ಫ್ರಾನ್ಸ್ನಿಂದ ರಫೇಲ್ ಯುದ್ಧವಿಮಾನಗಳ ಖರೀದಿಯಲ್ಲಿ ಮೋದಿ ಸರ್ಕಾರ ಭ್ರಷ್ಟಾಚಾರವೆಸಗಿದೆ ಎಂದು ಆಪಾದಿಸಿ ಚೌಕಿದಾರ್ ಚೋರ್ ಹೈ ಎಂದು ಎಲ್ಲೆಡೆ ಕೂಗಿ, ರಕ್ಷಣೆಯ ವಿಷಯದಲ್ಲಿ ಮೋದಿ ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂದು ಮತದಾರರನ್ನು ನಂಬಿಸಿ 2019ರ ಚುನಾವಣೆಗಳನ್ನು ಪ್ರಭಾವಿಸಲು ರಾಹುಲ್ ಗಾಂಧಿ ಹವಣಿಸಿ ಸೋತದ್ದೂ ಆಯಿತು. ಆ ಹಾದಿಯಲ್ಲಿ ಅವರು ನ್ಯಾಯಾಲಯದಲ್ಲಿ ಕ್ಷಮಾಪಣೆ ಕೇಳಿದ್ದೂ ಆಯಿತು.
ಆದ್ದರಿಂದ ಅವರು ತಮ್ಮ ಮೋದಿ-ವಿರೋಧ ರಾಜಕಾರಣದಲ್ಲಿ ಮತ್ತು ಅದರಲ್ಲಿ ರಕ್ಷಣಾ ಪಡೆಗಳನ್ನು ಎಳೆದುತರುವ ಹುನ್ನಾರದಲ್ಲಿ ಒಂದಕ್ಕಿಂತ ಹೆಚ್ಚು ಲಕ್ಷ್ಮಣರೇಖೆಗಳನ್ನು ದಾಟಿದ್ದಾರೆ, ರಾಷ್ಟ್ರದ ರಾಜಕೀಯ ನೇತಾರರಲ್ಲೊಬ್ಬರಾಗಿ ತಾವು ಪಾಲಿಸಬೇಕಾದ ಜವಾಬ್ದಾರಿಗಳನ್ನು ಗಾಳಿಗೆ ತೂರಿದ್ದಾರೆ, ಸಂಯಮರಹಿತ ಹಾಗೂ ತರ್ಕಹೀನ ಮೋದಿ-ದ್ವೇಷ ಅವರನ್ನು ಕೆಲವು ಮುಖ್ಯ ವಾಸ್ತವಗಳಿಗೆ ವಿಮುಖವಾಗಿಸಿದೆ.
ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ಎತ್ತಲು ಹಠ ಹಿಡಿದದ್ದು ಮಾಜಿ ಸೇನಾದಂಡನಾಯಕ ಜ. ಮನೋಜ್ ಮುಕುಂದ್ ನರ್ವಾಣೆಯವರು ಬರೆದಿದ್ದಾರೆ ಎನ್ನಲಾದ, ಆದರೆ ಇನ್ನೂ ಪ್ರಕಟವಾಗದ ಕೃತಿಯಲ್ಲಿ ಇದೆಯೆಂದು ಅವರು ನಂಬುವ ಕೆಲವು ವಿಷಯಗಳನ್ನು. ಇಲ್ಲಿ ಅವರು ಎಸಗಿದ ಮೊದಲ ತಪ್ಪೆಂದರೆ ರಾಷ್ಟ್ರಪತಿಗಳ ಭಾಷಣಕ್ಕೆ ಸದನ ಧನ್ಯವಾದ ಅರ್ಪಿಸಲು ಮೀಸಲಾದ ಅವಧಿಯಲ್ಲಿ ಅದಕ್ಕೆ ಹೊರತಾದ ವಿಷಯವನ್ನೆತ್ತಲು ಹೋದದ್ದು. ಸಂಪ್ರದಾಯದಂತೆ ನಿಗದಿಯಾದ ಕಾರ್ಯಕ್ರಮ ಪಟ್ಟಿಗನುಗುಣವಾಗಿ ಮೊದಲು ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಅರ್ಪಣೆ ಹಾಗೂ ಬಜೆಟ್ ಮೇಲಿನ ಚರ್ಚೆ ನಡೆಯಲು ಅವರು ಅಡ್ಡಿಪಡಿಸಬಾರದಿತ್ತು. ಜತೆಗೆ ಅವೆರಡು ವಿಷಯಗಳಿಗೆ ಹೊರತಾದ ವಿಷಯವೊಂದನ್ನು ಪ್ರಸ್ತಾಪಿಸಬೇಕಾದರೆ ಅದರ ಸೂಚನೆಯನ್ನು ಸಭಾಧ್ಯಕ್ಷರಿಗೆ ಮೊದಲೇ ಲಿಖಿತವಾಗಿ ನೀಡಿ, ಆ ವಿಷಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಸೇರುವಂತೆ ನೋಡಿಕೊಳ್ಳಬೇಕಾಗಿತ್ತು. ಅದು ನಿಯಮ. ಅಲ್ಲದೇ, ತಾವು ಯಾವ ಮಂತ್ರಿಯಿಂದ ಉತ್ತರ ಬಯಸುತ್ತೇವೆ, ಆ ಉತ್ತರ ಬಾಯಿಮಾತಿನದಷ್ಟೇ ಆಗಿರಬೇಕೇ ಅಥವಾ ಲಿಖಿತ ರೂಪದಲ್ಲಿ ಬೇಕೇ ಎನ್ನುವುದನ್ನು ಸಭಾಧ್ಯಕ್ಷರಿಗೆ ಮಾಡುವ ನಿವೇದನೆಯಲ್ಲಿ ನಮೂದಿಸಬೇಕು. ಆಗ ಸಭಾಧ್ಯಕ್ಷರು ಪ್ರಶ್ನೆಗೆ ಸಮಯ ನಿಗದಿ ಮಾಡಿ, ಆ ಸಮಯದಲ್ಲಿ ಉತ್ತರದೊಂದಿಗೆ ಹಾಜರಿರುವಂತೆ ಸಂಬಂಧಪಟ್ಟ ಮಂತ್ರಿಗಳಿಗೆ ಸೂಚನೆ ನೀಡುತ್ತಾರೆ. ಅದರಂತೆ ನಿಗದಿತ ಸಮಯದಲ್ಲಿ ಪ್ರಶ್ನೋತ್ತರ ನಡೆಯುತ್ತದೆ. ಯಾವ ಸದಸ್ಯರೇ ಆಗಲಿ, ಇದ್ದಕ್ಕಿದ್ದಂತೆ ಪ್ರಶ್ನೆಯೆತ್ತಿ, ಈಗ ಉತ್ತರ ಬೇಕು ಎಂದು ಹಠ ಹಿಡಿಯುವಂತಿಲ್ಲ. ಜ. ನರ್ವಾಣೆಯವರ ತಥಾಕಥಿತ ಆತ್ಮಚರಿತ್ರೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಈ ನಿಯಮಗಳನ್ನು ಪಾಲಿಸಿಲ್ಲ. ಹೀಗಾಗಿ ಅವರ ನಡವಳಿಕೆ ಬಜೆಟ್ ಅಧಿವೇಶನ ಅಸ್ತವ್ಯಸ್ತಗೊಳ್ಳುವಂತೆ ಮಾಡುವ ಪ್ರಯತ್ನದಂತೇ ಕಾಣುತ್ತದೆ.
ಇನ್ನು ಜ. ನರ್ವಾಣೆಯವರ ತಥಾಕಥಿತ ಆತ್ಮಕಥೆ ಫೋರ್ ಸ್ಟಾರ್ ಆಫ್ ಡೆಸ್ಟಿನಿ ಕೃತಿಯಲ್ಲಿ ಇದೆಯೆಂದು ರಾಹುಲ್ ಗಾಂಧಿ ಹೇಳಿದ ವಿಷಯದ ಔಚಿತ್ಯವನ್ನು ಗಮನಿಸೋಣ. ಹಿಂದೆ ಭಾರತೀಯ ಸೇನೆಯಲ್ಲಿದ್ದ, ಈಗ ವಿದೇಶದಲ್ಲಿರುವ ಸುಶಾಂತ್ ಸಿಂಗ್ ಎನ್ನುವವರು ನರ್ವಾಣೆಯವರ ಕೃತಿಯಲ್ಲಿದೆಯೆಂದು ಹೇಳಲಾದ ಕೆಲವು ವಿಷಯಗಳನ್ನು ಉಲ್ಲೇಖಿಸಿ ಕಾರವಾನ್ ನಿಯತಕಾಲಿಕದಲ್ಲಿ ಬರೆದ ಲೇಖನ ಫೆ. 1ರಂದು ಸಂಸತ್ತಿನಲ್ಲಿ ಬಜೆಟ್ ಮಂಡನೆಯಾದ ದಿನವೇ ಪ್ರಕಟವಾಯಿತು. ಮರುದಿನ ಅದನ್ನು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಪ್ರಸ್ತಾಪಿಸಹೊರಟರು. ನಿಯತಕಾಲಿಕವೊಂದರಲ್ಲಿ ಪ್ರಕಟವಾದ ಲೇಖನವೊಂದನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿ ಆ ಬಗ್ಗೆ ಚರ್ಚೆಗೆ ಪ್ರಯತ್ನಿಸುವುದು ಅನುಚಿತ. ಅದನ್ನು ಸರ್ಕಾರದ ಕೆಲವರು ಮಂತ್ರಿಗಳು ಮತ್ತು ಸಭಾಧ್ಯಕ್ಷರು ರಾಹುಲ್ ಗಾಂಧಿಯವರಿಗೆ ತಿಳಿಹೇಳಲು ಮತ್ತೆಮತ್ತೆ ಪ್ರಯತ್ನಿಸಿದರು. ಇಂತಹವು ಲೋಕಸಭೆಯಲ್ಲಿ ಹಿಂದೆ ನಡೆದ ಉದಾಹರಣೆಗಳಿವೆ. ಸ್ವಿಸ್ ಬ್ಯಾಂಕುಗಳಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಣ ಇಟ್ಟಿದ್ದರೆಂದು ಹೇಳುವ ವರದಿಯೊಂದು 1991ರ ನವೆಂಬರ್ನಲ್ಲಿ ಸ್ವಿಜರ್ಲ್ಯಾಂಡ್ನ ಪತ್ರಿಕೆಯೊಂದರಲ್ಲಿ ಫೋಟೋಗಳೊಂದಿಗೆ ಪ್ರಕಟವಾಯಿತು. ಅದರ ಪ್ರಕಾರ ಅತ್ಯಧಿಕ ಹಣ ಇಟ್ಟಿರುವ 13 ರಾಷ್ಟ್ರನಾಯಕರಲ್ಲಿ 12 ಜನ ಆಫ್ರಿಕನ್ ದೇಶಗಳ ಸರ್ವಾಧಿಕಾರಿಗಳು, ಒಬ್ಬರು ಮಾತ್ರ ಭಾರತದ ಮಾಜಿ ಪ್ರಧಾನಿ. ಈ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಲು ವಿರೋಧಪಕ್ಷಗಳು ಪ್ರಯತ್ನಿಸಿದಾಗ, ಪತ್ರಿಕಾ ವರದಿ ಅಥವಾ ಲೇಖನವನ್ನು ಲೋಕಸಭೆಯಲ್ಲಿ ಚರ್ಚೆಗೆ ತರಬಾರದು ಎಂದು ಆಡಳಿತ ಪಕ್ಷ ಹೇಳಿ, ಅದನ್ನು ಸಭಾಧ್ಯಕ್ಷರೂ ಅನುಮೋದಿಸಿದ್ದರಿಂದ ಆ ವಿಷಯದಲ್ಲಿ ಚರ್ಚೆಯಾಗಲಿಲ್ಲ.
ಪ್ರಸಕ್ತ ಲೇಖನದ ಬಗ್ಗೆ ಮತ್ತೂ ಒಂದು ಆಸಕ್ತಿಕರ ವಿಷಯವಿದೆ. ಅದನ್ನು ಬರೆದ ಸುಶಾಂತ್ ಸಿಂಗ್ ಭಾರತದ ವಿರುದ್ಧವಾದ ನಿಲುವುಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಪ್ರದರ್ಶಿಸಿದ್ದಾರೆ. ಪೆಹಲ್ಗಾಮ್ ಭಯೋತ್ಪಾದಕ ದಾಳಿಯಾದಾಗ, ಪಾಕಿಸ್ತಾನದ ವಿರುದ್ಧ ಭಾರತ ಏನೂ ಮಾಡಲಾಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾಗಿಯೂ, ಆಪರೇಷನ್ ಸಿಂಧೂರ್ ಜರುಗಿದಾಗ ಪಾಕಿಸ್ತಾನಿ ವಾಹಿನಿಗಳಲ್ಲಿ ಹಾಜರಾಗಿ ಪಾಕಿಸ್ತಾನ ಚೀನಾದ ಸಹಾಯದಿಂದ ತನ್ನ ಸುರಕ್ಷಾವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಿಕೊಳ್ಳಬೇಕೆಂದು ಹೇಳಿದ್ದಾಗಿ ಅವರ ಮೇಲೆ ತಕರಾರು ಇದೆ. ಅಂತಹ ಭಾರತ-ವಿರೋಧಿ ಮನೋಭಾವದ ವ್ಯಕ್ತಿಯ ಲೇಖನವನ್ನು ಉಲ್ಲೇಖಿಸಿ ಚರ್ಚೆಗೆ ಆಗ್ರಹಿಸಿ ಲೋಕಸಭೆಯ ಕಲಾಪಗಳನ್ನು ಅಡ್ಡಿಪಡಿಸಿದ್ದು ವಿರೋಧಪಕ್ಷಗಳ ನಾಯಕ ರಾಹುಲ್ ಗಾಂಧಿಯವರಿಗೆ ತರವೇ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.
ಲೇಖನದ ಕುರಿತಾಗಿ ಚರ್ಚೆ ಅನುಚಿತ ಎಂದು ವಿರೋಧ ವ್ಯಕ್ತವಾದಾಗ ರಾಹುಲ್ ಗಾಂಧಿ ಮರುದಿನ ಪುಸ್ತಕವೊಂದನ್ನು ಹಿಡಿದು ಸದನದಲ್ಲಿ ಹಾಜರಾಗಿ ಇದೇ ಜ. ನರ್ವಾಣೆಯವರ ಪ್ರಕಟಿತ ಕೃತಿ ಎಂದು ತೋರಿಸಿದರು. ನಂತರ ಲೇಖಕರು ಮತ್ತು ಪ್ರಕಾಶಕರು ನೀಡಿದ ಹೇಳಿಕೆಗಳ ಪ್ರಕಾರ ಆ ಕೃತಿ ಇನ್ನೂ ಪ್ರಕಟವಾಗಿಲ್ಲ. 1954ರ ಸೇನಾ ಕಾಯಿದೆಯ ಪ್ರಕಾರ ಸೇನಾಧಿಕಾರಿಗಳು ತಂತಮ್ಮ ಸೇನಾ ಅನುಭವಗಳ ಕುರಿತಾಗಿ ಅಧಿಕಾರದಲ್ಲಿರುವಾಗ ಅಥವಾ ನಂತರ ಬರೆಯುವ ಯಾವುದೇ ಲೇಖನ ಅಥವಾ ಪುಸ್ತಕ ರಕ್ಷಣಾ ಇಲಾಖೆಯಿಂದ ಅನುಮತಿಯಿಲ್ಲದೇ ಪ್ರಕಟಗೊಳ್ಳುವಂತಿಲ್ಲ. ಇಲ್ಲಿ ರಕ್ಷಣಾ ಇಲಾಖೆ ಹಲವು ವಿಷಯಗಳ ಜತೆ ಮುಖ್ಯವಾಗಿ ಪರಿಶೀಲಿಸುವುದು ಯುದ್ಧ ಅಥವಾ ರಕ್ಷಣೆಗೆ ಸಂಬಂಧಿಸಿದ ಸೂಕ್ಷ್ಮಗಳಲ್ಲಿ ರಕ್ಷಣಾಪಡೆಗಳ ನಾಯಕರು ಮತ್ತು ಆಡಳಿತಾರೂಢ ರಾಜಕೀಯ ನಾಯಕರ ನಡುವಿನ ಗೋಪ್ಯ ಮಾತುಕತೆಗಳು ರಾಷ್ಟ್ರದ ರಕ್ಷಣೆಯ ಕುರಿತಾಗಿ ಮಹತ್ವದ ವಿವರಗಳನ್ನು ಬಯಲು ಮಾಡುತ್ತವೆಯೇ ಮತ್ತು ಆ ಮೂಲಕ ಶತ್ರುಗಳು ನಮ್ಮ ವಿರುದ್ಧದ ತಮ್ಮ ರಣತಂತ್ರಗಳನ್ನು ತಮಗನುಕೂಲವಾಗುವಂತೆ ಮಾರ್ಪಡಿಸಿಕೊಳ್ಳಲು ಅವಕಾಶವಿದೆಯೇ ಎಂದು.
ಜ. ನರ್ವಾಣೆಯವರ ಕೃತಿಯೆಂದು ಹೇಳಲಾಗುವ ಡಿಜಿಟಲ್ ಕಾಪಿಯೊಂದು ಚೀನಾದಲ್ಲಿ ಆನ್ಲೈನ್ನಲ್ಲಿ ಬಿಸಿಬಿಸಿ ಹಕ್ಕಾ ನೂಡಲ್ಸ್ನಂತೆ ಬಿಕರಿಯಾಗುತ್ತಿದೆ. ಅದನ್ನು ನೋಡಿದವರು ನಮ್ಮಲ್ಲೂ ಇದ್ದಾರೆ. ಅದನ್ನು ಪುಸ್ತಕರೂಪದಲ್ಲಿ ಮುದ್ರಿಸಿಕೊಳ್ಳಲೂ ಸಾಧ್ಯವಿದೆ. ಅದು ನಿಜವಾಗಿಯೂ ಜ. ನರ್ವಾಣೆಯವರ ಕೃತಿಯೇ? ಅದರಲ್ಲಿ ರಾಷ್ಟ್ರರಕ್ಷಣೆಗೆ ಅಪಾಯವೊಡ್ಡುವ ಯಾವ ವಿವರಗಳಿವೆ? ಅವುಗಳನ್ನು ಲೋಕಸಭೆಯ ಒಳಗೆ ಹೊರಗೆ ದೊಡ್ಡದಾಗಿ ಚರ್ಚೆಗೆ ತಂದು ರಾಹುಲ್ ಗಾಂಧಿ ಜವಾಬ್ದಾರಿಹೀನ ಕೃತ್ಯವೆಸಗಿದ್ದಾರೆಯೇ? ಇದನ್ನು ಮುಂದಿನ ವಾರ ಲೇಖನದ ಅಂತಿಮ ಭಾಗದಲ್ಲಿ ವಿಶ್ಲೇಷಿಸೋಣ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)