ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ
ಭೋಪಾಲ್: ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಬಗ್ಗೆ ಚರ್ಚೆ ನಡೆಯುತ್ತುರುವ ನಡುವೆ, ಕೇಂದ್ರದ ನೀತಿಯನ್ನು ಸಮರ್ಥಿಸಿಕೊಂಡಿರುವ ಮಧ್ಯಪ್ರದೇಶದ ರೇವಾದ ಬಿಜೆಪಿ ಸಂಸದ(BJP MP) ಜನಾರ್ದನ್ ಮಿಶ್ರಾ, ಶುದ್ಧ ಪೆಟ್ರೋಲ್ ನಿಮ್ಮಪ್ಪನಾ ಮನೆಯಿಂದ ಬರುತ್ತದೆಯೇ? ಎಂದು ಮಿಶ್ರಣ ವಿರೋಧಿಸುವವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ(ಆ. 09) ರೇವಾವನ್ನು ಭೋಪಾಲ್ ಮತ್ತು ಕೋಲ್ಕತ್ತಾದೊಂದಿಗೆ ಸಂಪರ್ಕಿಸುವ ಹೊಸ ವಿಮಾನ ಸೇವೆಗಳನ್ನು ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಎಥೆನಾಲ್ ಮಿಶ್ರಣ ನೀತಿಯನ್ನು ವಿರೋಧಿಸುವವರಿಗೆ ನಿಮ್ಮ ತಂದೆಯ ಮನೆಯಿಂದ ಶುದ್ಧ ಪೆಟ್ರೋಲ್ ಬರುತ್ತದೆಯೇ? ಎಂದು ಕಿಡಿಕಾರಿದ್ದಾರೆ.
ಭಾರತವು ಬಳಸುವ ಕಚ್ಚಾ ತೈಲದಲ್ಲಿ ಕೇವಲ 20% ಮಾತ್ರ ಉತ್ಪಾದಿಸುತ್ತದೆ, ಉಳಿದ 80% ಆಮದು ಮಾಡಿಕೊಳ್ಳಲಾಗುತ್ತದೆ. ಭಾರತಕ್ಕೆ ತೈಲ ಸಾಗಿಸುವ ಹಡಗುಗಳು ಸುಮಾರು 18,000 ಕಿ.ಮೀ ಹೆಚ್ಚುವರಿ ದೂರ ಪ್ರಯಾಣಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿ ಪೆಟ್ರೋಲ್‌ನಲ್ಲಿ ಶೇ. 20ರಷ್ಟು ಎಥೆನಾಲ್ ಬೆರೆಸುವ ಬಗ್ಗೆ ಮಾತನಾಡಿದಾಗ, ಕೆಲವರು ಪ್ರತಿಭಟಿಸಲು ಪ್ರಾರಂಭಿಸುತ್ತಾರೆ ಎಂದಿದ್ದಾರೆ.
ಬ್ರೆಜಿಲ್ ಅನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ಬ್ರೆಜಿಲ್ ವಿಶ್ವದ ಅತಿದೊಡ್ಡ ಎಥೆನಾಲ್ ಉತ್ಪಾದಕ ರಾಷ್ಟ್ರವಾಗಿದ್ದು, ಅಲ್ಲಿನ ವಾಹನಗಳು ಯಾವುದೇ ತೊಂದರೆಗಳಿಲ್ಲದೆ 100% ಎಥೆನಾಲ್‌ನಿಂದ ಚಲಿಸುತ್ತವೆ. ಭಾರತದಲ್ಲಿ ವಾಹನಗಳು ಎಥೆನಾಲ್ ಮಿಶ್ರಿತ ಇಂಧನದಿಂದ ಕಾರ್ಯನಿರ್ವಹಿಸಬಹುದು. ತಜ್ಞರು ಎಥೆನಾಲ್ ವಾಹನಗಳ ಎಂಜಿನ್‌ಗಳಿಗೆ ಹಾನಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿರೋಧ ವ್ಯಕ್ತಪಡಿಸುವುದು ಅನಗತ್ಯ ಎಂದು ಹೇಳಿದ್ದಾರೆ (ಏಜೆನ್ಸೀಸ್).