West Bengal Elections | ಮಹಿಳಾ ಮತದಾರರು ಹೆಚ್ಚಾದಷ್ಟೂ ಶಾಸಕಿಯರು ಹೆಚ್ಚಾಗುತ್ತಾರೆಯೇ..?
West Bengal Elections: ಪಶ್ಚಿಮ ಬಂಗಾಳದಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದ್ದು, ಇತ್ತೀಚೆಗೆ ನಡೆದ ಪ್ರಚಾರದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಹಿಳೆಯರಿಗೆ ಆದ್ಯತೆ ನೀಡುವಲ್ಲಿ ವಿಫಲರಾಗಿದ್ದು, ಈ ಚುನಾವಣೆಯಲ್ಲಿ ಬಂಗಾಳದ ಮಹಿಳೆಯರು ದೀದಿಗೆ ತಕ್ಕ ಶಿಕ್ಷೆ ನೀಡಲಿದ್ದಾರೆ ಎಂದಿದ್ದರು.
ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿದ್ದ ಮಮತಾ ಬ್ಯಾನರ್ಜಿ, ತಮ್ಮ ಪಕ್ಷದ ಮಹಿಳಾ ಪ್ರಾತಿನಿಧ್ಯದ ದಾಖಲೆಯನ್ನು ಮುಂದಿಟ್ಟಿದ್ದಾರೆ. ಲೋಕಸಭೆಯಲ್ಲಿ ಶೇ. 37.9 ರಷ್ಟು ಮತ್ತು ರಾಜ್ಯಸಭೆಯಲ್ಲಿ ಶೇ. 46 ರಷ್ಟು ಮಹಿಳಾ ಸಂಸದರು ತೃಣಮೂಲ ಕಾಂಗ್ರೆಸ್‌ನಲ್ಲಿದ್ದಾರೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮಹಿಳಾ ಮತದಾನದ ಪ್ರಮಾಣದಲ್ಲಿ ಏರಿಕೆ
ಪಶ್ಚಿಮ ಬಂಗಾಳದಲ್ಲಿ 2001 ರಿಂದ ನಡೆದ ಎಲ್ಲಾ ಚುನಾವಣೆಗಳಲ್ಲಿ ಮತದಾನದ ಪ್ರಮಾಣವು ಗಣನೀಯವಾಗಿ ಹೆಚ್ಚಾಗಿದೆ. 2001 ಮತ್ತು 2006 ರಲ್ಲಿ ಪುರುಷ ಮತದಾರರು ಮಹಿಳೆಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದರು. ಆದರೆ 2011 ರ ಹೊತ್ತಿಗೆ ಈ ಅಂತರ ಕಡಿಮೆಯಾಗಿ, ಪುರುಷ ಮತ್ತು ಮಹಿಳೆಯರ ಪಾಲ್ಗೊಳ್ಳುವಿಕೆ ಬಹುತೇಕ ಸಮನಾಗಿತ್ತು. ಕುತೂಹಲಕಾರಿ ವಿಷಯವೆಂದರೆ, 2016 ಮತ್ತು 2021 ರ ಚುನಾವಣೆಗಳಲ್ಲಿ ಮಹಿಳೆಯರ ಮತದಾನದ ಪ್ರಮಾಣವು ಪುರುಷರಿಗಿಂತ ಸ್ವಲ್ಪ ಹೆಚ್ಚಾಗಿತ್ತು. ಒಟ್ಟಾರೆ ಮತದಾನದಲ್ಲಿ ಪುರುಷರು ಮತ್ತು ಮಹಿಳೆಯರ ಭಾಗವಹಿಸುವಿಕೆ ಶೇಕಡಾ 80 ಕ್ಕಿಂತ ಹೆಚ್ಚಿದೆ.
ಪ್ರಾದೇಶಿಕ ವ್ಯತ್ಯಾಸಗಳು
2021 ರ ವಿಧಾನಸಭಾ ಚುನಾವಣೆಯಲ್ಲಿ ಹಲವಾರು ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ.
ದಾಸ್‌ಪುರ: ಮಹಿಳೆಯರು ಪುರುಷರಿಗಿಂತ ಶೇ. 18.2 ರಷ್ಟು ಹೆಚ್ಚು ಮತ ಚಲಾಯಿಸುವ ಮೂಲಕ ಅಗ್ರಸ್ಥಾನದಲ್ಲಿದೆ.
ರಘುನಾಥ್‌ಗಂಜ್: (ಶೇ. 17.3) ಮತ್ತು ಘಾಟಲ್ (ಶೇ. 12): ಈ ಕ್ಷೇತ್ರಗಳಲ್ಲೂ ಮಹಿಳೆಯರದ್ದೇ ಮೇಲುಗೈ.
ಮೆಟಿಯಾಬುರುಜ್: ಇಲ್ಲಿ ಪುರುಷರು ಮಹಿಳೆಯರಿಗಿಂತ ಶೇ. 8.2 ರಷ್ಟು ಹೆಚ್ಚು ಮತದಾನ ಮಾಡಿದ್ದು, ನಗರ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಪುರುಷ ಮತದಾರರ ಸಂಖ್ಯೆ ಹೆಚ್ಚಿರುವುದಕ್ಕೆ ಇದೊಂದು ಉದಾಹರಣೆಯಾಗಿದೆ.
ಮಹಿಳಾ ಮತದಾರರು vs ಮಹಿಳಾ ಶಾಸಕರು
ಹೆಚ್ಚಿನ ಮಹಿಳಾ ಮತದಾನವು ಹೆಚ್ಚಿನ ಮಹಿಳಾ ಶಾಸಕರ ಆಯ್ಕೆಗೆ ಕಾರಣವಾಗಿಲ್ಲ ಎಂಬುದು ಡೇಟಾದಿಂದ ಸ್ಪಷ್ಟವಾಗಿದ್ದು, 2021 ರಲ್ಲಿ ಮಹಿಳೆಯರು ಗೆದ್ದ 40 ಸ್ಥಾನಗಳಲ್ಲಿ, ಹೆಚ್ಚಿನ ಮಹಿಳಾ ಮತದಾನದ ಅಂತರವಿದ್ದ ಕ್ಷೇತ್ರಗಳಿಂದ ಬಂದವರು ಕೇವಲ ಒಬ್ಬರು ಮಾತ್ರ. ಇತ್ತ ಪುರುಷ ಮತದಾನವು ಹೆಚ್ಚಿದ್ದ ಕ್ಷೇತ್ರಗಳಿಂದಲೇ 25 ಮಹಿಳಾ ಅಭ್ಯರ್ಥಿಗಳು (17+8 ಸ್ಥಾನಗಳು) ವಿಜಯಶಾಲಿಯಾಗಿದ್ದಾರೆ.
ಪಶ್ಚಿಮ ಬಂಗಾಳದ ಈ ಬಾರಿಯ ಚುನಾವಣೆ ಕೇವಲ ರಾಜಕೀಯ ಅಧಿಕಾರದ ಹೋರಾಟವಷ್ಟೇ ಅಲ್ಲದೆ, ಮಹಿಳಾ ಮತದಾರರ ಪ್ರಭಾವ ಮತ್ತು ಪ್ರಾತಿನಿಧ್ಯದ ನಡುವಿನ ವ್ಯತ್ಯಾಸವನ್ನು ತೆರೆದಿಟ್ಟಿದೆ. ಕಳೆದ ಎರಡು ದಶಕಗಳಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿ ಹೆಚ್ಚಿದ್ದರೂ, ವಿಧಾನಸಭೆಯಲ್ಲಿ ಅವರ ಪ್ರಾತಿನಿಧ್ಯ ಇಂದಿಗೂ ಶೇಕಡಾ 14ರ ಗಡಿಯನ್ನು ದಾಟದಿರುವುದು ಯೋಚಿಸಬೇಕಾದ ಸಂಗತಿಯಾಗಿದೆ(ಏಜೆನ್ಸೀಸ್).