ವೈದ್ಯರ ನಿರ್ಲಕ್ಷ್ಯದಿಂದ ಕೈ ಕಳೆದುಕೊಂಡ ಯವತಿ 
ದೇಶ

ಕಿವಿ ನೋವಿಗೆ ಚಿಕಿತ್ಸೆ; ಕೈ ಕತ್ತರಿಸಿದ ವೈದ್ಯರು! ಇದೆಂತಾ ಎಡವಟ್ಟು..? |Doctor cuts off hand to treat earache!

ಪ್ರಮುಖ ಮುಖ್ಯಾಂಶಗಳು

  • ಕಿವಿ ನೋವಿಗೆ ಚಿಕಿತ್ಸೆ ಪಡೆಯಲು ಹೋದ ಯುವತಿಯ ಕೈ ಕತ್ತರಿಸಿದ ವೈದ್ಯರು?
  • ರಾಂಗ್​ ಇಂಜೆಕ್ಷನ್‌ನಿಂದ ಕೈಗೆ ಸೋಂಕು; ಆಸ್ಪತ್ರೆ ವಿರುದ್ಧ ಯುವತಿ ಕುಟುಂಬದ ಆರೋಪ
  • ರದ್ದಾಯ್ತು ಯುವತಿ ಮದುವೆ, ವೈದ್ಯಕೀಯ ನಿರ್ಲಕ್ಷ್ಯಕ್ಕೆ ಕೋರ್ಟ್ ಮೆಟ್ಟಿಲೇರಿದ ಪೋಷಕರು
ಬಿಹಾರ: ವೈದ್ಯಕೀಯ ನಿರ್ಲಕ್ಷ್ಯದಿಂದ ಕಿವಿ ನೋವಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋದ ಯುವತಿಯೊಬ್ಬಳು ಕೈಯನ್ನೇ ಕಳೆದುಕೊಂಡ ಆಘಾತಕಾರಿ ಘಟನೆ ಪಾಟ್ನಾದಲ್ಲಿ ನಡೆದಿದೆ. ಯುವತಿಗೆ ಬೇರೆ ಇಂಜೆಕ್ಷನ್ ನೀಡಿದ್ದರಿಂದ ಸೋಂಕು ತಗುಲಿ, ಕೊನೆಗೆ ಜೀವ ಉಳಿಸಲು ವೈದ್ಯರು ಆಕೆಯ ಕೈ ಕತ್ತರಿಸಿದ ಮಹಾ ಯಡವಟ್ಟೊಂದು ನಡೆದಿದೆ.
ವರದಿ ಪ್ರಕಾರ, ಶಿಯೋಹರ್ ಜಿಲ್ಲೆಯ ರೇಖಾ ಕುಮಾರಿ(20) ಎಂಬ ಯುವತಿ ಕಿವಿ ನೋವಿಗೆ ಚಿಕಿತ್ಸೆ ಪಡೆಯಲು ಪಾಟ್ನಾದ ಕಂಕಡ್‌ಬಾಗ್‌ನ ಮಹಾವೀರ ಆರೋಗ್ಯ ಸಂಸ್ಥಾನ ಆಸ್ಪತ್ರೆಗೆ ದಾಖಲಾಗಿದ್ರು. ಯುವತಿಯ ಪರೀಕ್ಷೆ ಮಾಡಿದ ಬಳಿಕ ನರ್ಸ್, ರಕ್ತನಾಳಕ್ಕೆ ನೀಡಬೇಕಿದ್ದ ಇಂಜೆಕ್ಷನ್ ಅನ್ನು ತಪ್ಪಾಗಿ ಅಪಧಮನಿಗೆ(Artery) ನೀಡಿದ್ದರಿಂದ ಕೆಲವೇ ನಿಮಿಷಗಳಲ್ಲಿ ಯುವತಿಗೆ ತೀವ್ರ ನೋವು ಕಾಣಿಸಿಕೊಂಡಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಯುವತಿಯ ಜೀವ ಉಳಿಸಲು ಕೈ ಕತ್ತರಿಸಿದ ವೈದ್ಯರು

ಇನ್ನು, ನೋವು ಹೆಚ್ಚಾಗುತ್ತಿದ್ದಂತೆ ಯುವತಿಯ ಕೈ ಹಸಿರುಗಟ್ಟಿತ್ತು. ಬಳಿಕ ಆಸ್ಪತ್ರೆ ಸಿಬ್ಬಂದಿಗೆ ತಿಳಿಸಿದರೂ, ಸರಿಯಾದ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ. ಸೋಂಕು ಕೈಯೆಲ್ಲಾ ವ್ಯಾಪಿಸಿದ ಕಾರಣ ಪಾಟ್ನಾದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ರೇಖಾಳ ಜೀವ ಉಳಿಸಲು ಮೊಣಕೈ ಮೇಲ್ಭಾಗದವರೆಗೆ ಕತ್ತರಿಸಿ ತೆಗೆದುಹಾಕಬೇಕಾಯಿತು. ಎಂದು ಆಕೆಯ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ನಿಗದಿಯಾಗಿದ್ದ ಯುವತಿಯ ಮದುವೆ ರದ್ದು

ವೈದ್ಯಕೀಯ ನಿರ್ಲಕ್ಷ್ಯದಿಂದ ಯುವತಿಯ ಜೀವನವೇ ಅತಂತ್ರವಾಗಿದೆ. ನವೆಂಬರ್‌ನಲ್ಲಿ ನಿಗದಿಯಾಗಿದ್ದ ಆಕೆಯ ಮದುವೆಯೂ ರದ್ದಾಗಿದ್ದು, ಕುಟುಂಬದವರು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಇನ್ನೊಂದು ಕಡೆ ತಂದೆ ಮಾನಸಿಕ ಅಸ್ವಸ್ಥರಾಗಿರುವುದರಿಂದ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಬದುಕಿನ ಬಗ್ಗೆ ನೂರಾರು ಕನಸು ಕಂಡಿದ್ದ ರೇಖಾ ಕೈ ಕಳೆದುಕೊಂಡು ನಿತ್ಯ ಕೊರಗುವಂತಾಗಿದೆ.

ತಪ್ಪಿತಸ್ಥರ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಕುಟುಂಬ

ಸಧ್ಯ ನಿರ್ಲಕ್ಷ್ಯ ಎದುರಿಸುತ್ತಿರುವ ವೈದ್ಯರು ಮತ್ತು ನರ್ಸ್‌ರನ್ನು ಆಸ್ಪತ್ರೆ ಆಡಳಿತ ಮಂಡಳಿ ಸೇವೆಯಿಂದ ವಜಾಗೊಳಿಸಿದೆ. ಜತೆಗೆ ಯುವತಿಗೆ ಕೃತಕ ಕೈ ಅಳವಡಿಸಲು ನೆರವು ನೀಡುವುದಾಗಿ ತಿಳಿಸಿದೆ. ಆದರೆ ರೇಖಾ ಕುಟುಂಬಸ್ಥರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಕೋರ್ಟ್​ ಮೆಟ್ಟಿಲೇರಿದ್ದಾರೆ,(ಏಜೆನ್ಸೀಸ್​).